ಜನನ ಮತ್ತು ಮರಣ ನೋಂದಣಿ ಈಗ ಇನ್ನಷ್ಟು ಸರಳ, ವಿವರಗಳು
ನವದೆಹಲಿ, ಅಕ್ಟೋಬರ್ 31: ಕೇಂದ್ರ ಸರ್ಕಾರ ಜನನ ಮತ್ತು ಮರಣದ ನೋಂದಣಿಯನ್ನು ಇನ್ನಷ್ಟು ಸರಳೀಕರಣಗೊಳಿಸಲಿದೆ. ಇದಕ್ಕಾಗಿ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಜನರು ನೋಂದಣಿ ಮಾಡುವಾಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್ ಮೂಲಕ ವಿವರ ಭರ್ತಿ ಮಾಡಿ, ಶುಲ್ಕ ಪಾವತಿ ಮಾಡಿದರೆ ಪ್ರಮಾಣ ಪತ್ರ ಮನೆ ಬಾಗಿಲಿಗೆ ಬರಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ (ಸಿಆರ್‌ಎಸ್) ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಜನರು ಜನನ ಮತ್ತು ಮರಣವನ್ನು ಯವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ನೋದಂಣಿ ಮಾಡಿಸಲು ಅವಕಾಶವನ್ನು ನೀಡುತ್ತದೆ. ಈ ಮೂಲಕ ನೋಂದಣಿಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ.

ಸಚಿವ ಅಮಿತ್ ಶಾ ಟ್ವೀಟ್ ಮಾಡಿ, "ಜನರು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಅವರ ರಾಜ್ಯದ ಭಾಷೆಯಲ್ಲಿಯೇ ವಿವರಗಳನ್ನು ಭರ್ತಿ ಮಾಡುವ ಮೂಲಕ ಜನನ ಮತ್ತು ಮರಣದ ನೋಂದಣಿ ಮಾಡಿಸಲು ಈ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ ಎಂಬ ಮೊಬೈಲ್ ಅಪ್ಲಿಕೇಶನ್ ಅನುಕೂಲ ಮಾಡಿಕೊಡಲಿದೆ" ಎಂದು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಜನನ ಮತ್ತು ಮರಣ ಸಂಭವಿಸಿದಾಗ ಅದರ ನೋಂದಣಿಗಾಗಿ ಜನರು ಕಛೇರಿಗಳಿಗೆ ಅಲೆದಾಟ ನಡೆಸುವುದನ್ನು ಈ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ ಎಂಬ ಮೊಬೈಲ್ ಅಪ್ಲಿಕೇಶನ್ ತಪ್ಪಿಸಲಿದೆ. ಸಂಪೂರ್ಣ ಡಿಜಿಟಲೀಕರಣಗೊಂಡ, ಕಾಗದ ರಹಿತ ನೋಂದಣಿ ಪ್ರಕ್ರಿಯೆ ಇದಾಗಿದೆ.
ಹೇಗೆ ಕೆಲಸ ಮಾಡಲಿದೆ ಅಪ್ಲಿಕೇಶನ್?: ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್ (ಸಿಆರ್‌ಎಸ್) ಎಂಬ ಮೊಬೈಲ್ ಅಪ್ಲಿಕೇಶನ್ ಜನರ ಸಮಯವನ್ನು ಉಳಿತಾಯ ಮಾಡಲಿದೆ. ಜನನ & ಮರಣ ನೋಂದಣಿ ಮಾಡಿಸಲು ಇಚ್ಛಿಸುವವರು ಮೊದಲು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಯೂಸರ್ ನೇಮ್, ಪಾಸ್ ವರ್ಡ್ ದಾಖಲಿಸಿ. ನೋಂದಣಿಗಾಗಿ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನೀಡಿ ಸೈನ್ ಇನ್ ಆಗಿ. ಅಪ್ಲಿಕೇಶನ್‌ನ ಮುಖ್ಯ ಪರದೆ ಮೇಲೆ ಪ್ರೊಫೈಲ್, ಜನನ, ಸಾವು, ಶುಲ್ಕ ಆಯ್ಕೆಗಳು ಕಾಣಿಸುತ್ತವೆ.
ಜನನದ ನೋಂದಣಿಗಾಗಿ ಜನನ ಆಯ್ಕೆ ಮಾಡಿ ಮಗುವಿನ ಜನ್ಮ ದಿನಾಂಕ, ವಿಳಾಸ, ಕುಟುಂಬದ ಮಾಹಿತಿ ನಮೂದು ಮಾಡಿ. ಅಗತ್ಯ ದಾಖಲೆ ಲಗತ್ತಿಸಿ.
ಮರಣದ ನೋಂದಣಿಗಾಗಿ ಇದೇ ಮಾದರಿ ಪ್ರಕ್ರಿಯೆ ಇದೆ. ಮರಣದ ದಿನಾಂಕ, ವಿಳಾಸ, ಇತರ ಮಾಹಿತಿ ಭರ್ತಿ ಮಾಡಿ, ದಾಖಲೆ ಲಗತ್ತಿಸಿ. ಯಾವುದೇ ರಾಜ್ಯದ ಜನರು ತಮ್ಮ ರಾಜ್ಯದ ಭಾಷೆಯಲ್ಲಿಯೇ ವಿವರಗಳನ್ನು ಭರ್ತಿ ಮಾಡಲು ಅವಕಾಶವನ್ನು ನೀಡಲಾಗಿದೆ.
ಎಲ್ಲಾ ವಿವರ ನೀಡಿದ ಬಳಿಕ ಆನ್‌ಲೈನ್‌ನಲ್ಲಿಯೇ ನಿಗದಿತ ಶುಲ್ಕವನ್ನು ಪಾವತಿ ಮಾಡಿ. ಡಿಜಿಟಲ್ ಜನನ & ಮರಣ ಪ್ರಮಾಣ ಪತ್ರ ಮನೆಗೆ ಬರುವಂತೆ ಅಥವ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಸಹ ನೀಡಲಾಗಿದೆ.
ಪ್ರಸ್ತುತ ಜನನ ಪ್ರಮಾಣ ಪತ್ರವನ್ನು ಪಡೆಯಲು ಮೊದಲು ಆಸ್ಪತ್ರೆಗಳು ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕಿದೆ. ಬಳಿಕ ಪೋಷಕರು ಕಛೇರಿಗೆ ತೆರಳಿ ಅಲ್ಲಿ ವಿವರಗಳನ್ನು ನೀಡಿ, ಶುಲ್ಕ ಪಾವತಿ ಮಾಡಿ ಪ್ರಮಾಣ ಪತ್ರವನ್ನು ಪಡೆಯಬೇಕು. ಈಗ ಅಪ್ಲಿಕೇಶನ್ ಜನರ ಸಮಯವನ್ನು ಉಳಿಸಲಿದೆ.












Click it and Unblock the Notifications