ದೇಶವು ಅವರಿಗೆ ಋಣಿಯಾಗಿದೆ: ಮನಮೋಹನ್ ಸಿಂಗ್‌ಗೆ ಗಡ್ಕರಿ ಪ್ರಶಂಸೆ
ನವದೆಹಲಿ, ನವೆಂಬರ್ 9: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರ್ ಹೊಗಳಿದ್ದಾರೆ.
ಆರ್ಥಿಕ ಸುಧಾರಣೆಗಳಿಗೆ ಮುನ್ನುಡಿ ಬರೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೇಶವು ಋಣಿಯಾಗಿದೆ ಎಂದು ಗಡ್ಕರಿ ಮಂಗಳವಾರ ಹೇಳಿದ್ದಾರೆ.
ಸಿಂಗ್ ಅವರ ಆರ್ಥಿಕ ನೀತಿಗಳಿಂದ ಬಡ ಜನರಿಗೆ ಸಹಾಯವಾಯಿತು. ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿತ್ತು ಎಂದು ಗಡ್ಕರಿ ತಿಳಿಸಿದ್ದಾರೆ.

ಟಿಐಒಎಲ್ ಅವಾರ್ಡ್ಸ್ 2022 ಈವೆಂಟ್‌ನಲ್ಲಿ ಅವರು ಮಾತನಾಡಿದ್ದಾರೆ.
1991 ರಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು ಮತ್ತು ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ಗಡ್ಕರಿ ಹೇಳಿದ್ದಾರೆ.
'ಆರ್ಥಿಕತೆಗೆ ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ' ಗಡ್ಕರಿ ತಿಳಿಸಿದ್ದಾರೆ.

1990 ರ ದಶಕದ ಮಧ್ಯದಲ್ಲಿ ನಾನು ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದೆ. ಆಗ ಸಿಂಗ್ ಅವರು ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಮಾಡಿದರು. ಇದರಿಂದ ಮಹಾರಾಷ್ಟ್ರದಲ್ಲಿ ರಸ್ತೆ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದ್ದಾರೆ.
ಉದಾರ ಆರ್ಥಿಕ ನೀತಿಯು ರೈತರು ಮತ್ತು ಬಡವರಿಗೆ ಹೆಚ್ಚು ಸಹಾಯ ಮಾಡಿದೆ ಎಂದು ಗಡ್ಕರಿ ಪ್ರತಿಪಾದಿಸಿದ್ದಾರೆ.
ಯಾವುದೇ ದೇಶದ ಅಭಿವೃದ್ಧಿಗೆ ಉದಾರ ಆರ್ಥಿಕ ನೀತಿ ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಚೀನಾ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಆರ್ಥಿಕ ಬೆಳವಣಿಗೆ ವೇಗವನ್ನು ಹೆಚ್ಚಿಸಲು, ಭಾರತದಲ್ಲಿ ಅಧಿಕ ಹೂಡಿಕೆಯ ಅಗತ್ಯವಿದೆ ಎಂದು ಅವರು ಹೇಳಿದರು.
ನಮ್ಮ ಸಚಿವಾಲಯವು 26 ಹಸಿರು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದೆ. ನಾವು ಹಣದ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.












Click it and Unblock the Notifications