ಹೆಚ್ಚಿನ ಅಪಾಯ, ರೋಗ ಲಕ್ಷಣಗಳಿಲ್ಲದಿದ್ದರೆ ಕೋವಿಡ್ ಪರೀಕ್ಷೆ ಬೇಡ: ಐಸಿಎಂಆರ್
ನವದೆಹಲಿ, ಜನವರಿ 10: ಹೆಚ್ಚು ಅಪಾಯ ಇಲ್ಲವಾದರೆ ಕೊರೊನಾ ವೈರಸ್ ಸೊಂಕಿತರ ಸಂಪರ್ಕಿತರ ಕೋವಿಡ್ ಪರೀಕ್ಷೆಯನ್ನು ಮಾಡುವ ಅಗತ್ಯವಿಲ್ಲ ಹಾಗೂ ಯಾವುದೇ ಕೋವಿಡ್ ಲಕ್ಷಣಗಳು ಇಲ್ಲವಾದರೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂದು ರ್ಕಾರದ ಉನ್ನತ ವೈದ್ಯಕೀಯ ಸಂಸ್ಥೆ ಇಂದು ಹೊಸದಾಗಿ ಸಲಹೆಯನ್ನು ನೀಡಿದೆ.
ಯಾವುದೇ ಕೊರೊನಾ ವೈರಸ್ ಸೋಂಕಿನ ಲಕ್ಷಣ ಇಲ್ಲವಾದರೆ, ಹೋಮ್ ಐಸೋಲೇಶನ್ ಮಾರ್ಗಸೂಚಿಗಳ ಪ್ರಕಾರ ಬಿಡುಗಡೆಯಾಗುವ ರೋಗಿಗಳು, ಕೋವಿಡ್ ಬಳಿಕ ಬಿಡುಗಡೆಯಾದ ರೋಗಿಗಳು ಮತ್ತು ಅಂತರ-ರಾಜ್ಯ ಪ್ರಯಾಣವನ್ನು ಮಾಡಿದವರು ಯಾವುದೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಥವಾ ಐಸಿಎಂಆರ್ ಹೇಳಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಥವಾ ಐಸಿಎಂಆರ್ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಸಲಹೆಯನ್ನು ನೀಡಿದೆ. ಯಾರೆಲ್ಲಾ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಯಾರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂಬ ಬಗ್ಗೆ ಐಸಿಎಂಆರ್ ಸಲಹೆ ನೀಡಿದೆ.

ಯಾರೆಲ್ಲಾ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು?
ಕೆಮ್ಮು, ಜ್ವರ, ಗಂಟಲು ನೋವು, ರುಚಿ ಅಥವಾ ವಾಸನೆ ಇಲ್ಲದಿರುವುದು, ಉಸಿರಾಟದ ತೊಂದರೆ ಮತ್ತು ಇತರ ಉಸಿರಾಟದ ಸಮಸ್ಯೆಗಳು ಇರುವವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಪ್ರಯೋಗಾಲಯದ ದೃಢಪಟ್ಟ ಕೋವಿಡ್ ಸೋಂಕಿತರ ಅಪಾಯದಲ್ಲಿರುವ ಸಂಪರ್ಕಿತರು (60 ವರ್ಷಕ್ಕಿಂತ ಮೇಲ್ಪಟ್ಟವರು, ಯಾವುದೇ ಕಿಡ್ನಿ ಸಮಸ್ಯೆ, ಮಧುಮೇಹ ಮೊದಲಾದವು ಇದ್ದವರು), ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರು, ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.
ಯಾರೆಲ್ಲಾ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ?
ಕೆಮ್ಮು, ಜ್ವರ, ಗಂಟಲು ನೋವು ಮೊದಲಾದ ಯಾವುದೇ ಕೋವಿಡ್ ಲಕ್ಷಣಗಳು ಇಲ್ಲದವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಹೆಚ್ಚು ಅಪಾಯ ಇಲ್ಲವಾದರೆ ಕೊರೊನಾ ವೈರಸ್ ಸೊಂಕಿತರ ಸಂಪರ್ಕಿತರ ಕೋವಿಡ್ ಪರೀಕ್ಷೆಯನ್ನು ಮಾಡುವ ಅಗತ್ಯವಿಲ್ಲ. ಕೋವಿಡ್ ಮಾರ್ಗಸೂಚಿಯ ಪ್ರಕಾರ ಹೋಮ್ ಐಸೊಲೇಶನ್‌ಗೆ ಒಳಗಾದವರು ಕೂಡಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿಲ್ಲ. ಅಂತರ-ರಾಜ್ಯ ಪ್ರಯಾಣವನ್ನು ಮಾಡುವವರು ಕೂಡಾ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications