Bharat Jodo Yatra 2.0: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ 2.0 ಪ್ರಾರಂಭ?
ದೆಹಲಿ ನವೆಂಬರ್ 7: ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಆರಂಭಿಸಲು ಕಾಂಗ್ರೆಸ್ ಯೋಚಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ 2023 ಮತ್ತು ಫೆಬ್ರವರಿ 2024 ರ ನಡುವೆ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರಾ 2.0 ಆರಂಭವಾಗಿಲಿದೆ. ಭಾಗವಹಿಸುವವರು ರಾಹುಲ್ ಗಾಂಧಿ ಅವರೊಂದಿಗೆ ಕಾಲ್ನಡಿಗೆಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (ದಕ್ಷಿಣದಿಂದ ಉತ್ತರ) ಭಾರತ್ ಜೋಡೋ ಯಾತ್ರೆ ಮೂಲಕ ದೇಶದ ಗಮನ ಸೆಳೆದಿದ್ದ ಕಾಂಗ್ರೆಸ್ ಈಗ ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಯಾತ್ರೆ ಕೈಗೊಳ್ಳಲು ಪ್ಲಾನ್ ಮಾಡಿರುವುದು ಬೆಂಬಲಿಗರಲ್ಲಿ ಸಂತಸ ತಂದಿದೆ. ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯು ಬಹುಶಃ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ನಡೆಯಬಹುದು ಎಂಬ ಸುಳಿವು ಸಿಕ್ಕಿದೆ.

ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಸರಿಸುಮಾರು 4,080 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿದ ಬಳಿಕ ಯಾತ್ರೆಯು ಜನವರಿ 2023ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯವಾಯಿತು.
ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳವರೆಗೆ ಸಾಗಿತು. ಇದು ಭಾರತದ ಅತಿ ಉದ್ದದ ಪಾದಯಾತ್ರೆಯಾಗಿದೆ. ಕಾಂಗ್ರೆಸ್ ನಾಯಕರು ಮತ್ತು ಯಾತ್ರೆಯಲ್ಲಿ ಭಾಗವಹಿಸಿದ ಇತರ ಅಧಿಕಾರಿಗಳು ಆ ರಾಜ್ಯಗಳಾದ್ಯಂತ ಸಾರ್ವಜನಿಕ ರ್‍ಯಾಲಿಗಳ ನಡುವೆ ತಳಮಟ್ಟದ ಜನರೊಂದಿಗೆ ಸಂವಾದದಲ್ಲಿ ತೊಡಗಿದ್ದರು.
ಕೇಂದ್ರ ಆಡಳಿತ ಪಕ್ಷ ಬಿಜೆಪಿಯ (ಭಾರತೀಯ ಜನತಾ ಪಕ್ಷ) ವಿಭಜಕ ರಾಜಕೀಯದ ವಿರುದ್ಧ ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಚುಕ್ಕಾಣಿ ಹಿಡಿದಿರುವ ರಾಹುಲ್ ಗಾಂಧಿ ಹಾಗೂ ಈ ಜನಾಂದೋಲನದ ಪ್ರಾಥಮಿಕ ಉದ್ದೇಶವಾಗಿತ್ತು. ಜೊತೆಗೆ ಇದು ನಿರುದ್ಯೋಗ ಮತ್ತು ಅಸಮಾನತೆಯಂತಹ ಇತರ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವುದು ಅದರ ಮುಖ್ಯ ಗುರಿಗಳಲ್ಲಿ ಒಂದಾಗಿತ್ತು.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಸೆಪ್ಟೆಂಬರ್ 2023 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷವು ಎರಡನೇ ಹಂತದ ಯಾತ್ರೆಯನ್ನು ಯೋಜಿಸುತ್ತಿದೆ ಮತ್ತು ಯೋಜನೆಯು ನಿರ್ಮಾಣ ಹಂತದಲ್ಲಿದೆ ಎಂದು ಪ್ರಸ್ತಾಪಿಸಿದ್ದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು ರಾಹುಲ್ ಗಾಂಧಿ ಅವರಿಗೆ ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಈ ಬಗ್ಗೆ ಯೋಜನೆ ರೂಪಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಅಂತ್ಯದಲ್ಲಿ ಭಾರತ್ ಜಾಡೋ ಯಾತ್ರೆ 2.0 ಆರಂಭವಾಗಲಿದೆ.
ಐಕ್ಯತಾ ಯಾತ್ರೆಗೆ ಬಹುತೇಕ ರಾಜ್ಯಗಳಲ್ಲಿ ಭವ್ಯ ಸ್ವಾಗತ ಮತ್ತು ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮೂಲಕ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೆ ಭಾರತ್ ಜೋಡೋ ಯಾತ್ರೆ ಮೂಡಿಸಿದ ಛಾಪು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಇದೇ ಹುಮ್ಮಸ್ಸನ್ನು ಮುಂದಿನ ಚುನಾವಣೆವರೆಗೂ ಕಾಯ್ದುಕೊಳ್ಳುವುದು ಕಾಂಗ್ರೆಸ್ ಮುಂದಿರುವ ಗುರಿಯಾಗಿದೆ.












Click it and Unblock the Notifications