ಅದಾನಿ ಆವಾಂತರ: ದೇಶದಾದ್ಯಂತ SBI ಕಚೇರಿಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ- ಸದನದಲ್ಲಿಯೂ ಗದ್ದಲ, 'ಅದಾನಿ ಸರ್ಕಾರ್' ಘೋಷಣೆ
ಅದಾನಿ-ಹಿಂಡನ್‌ಬರ್ಗ್ ಸಮಸ್ಯೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಚೇರಿಗಳ ಮುಂದೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿದೆ. ಲೋಕಸಭೆ ಕಲಾಪದಲ್ಲಿಯೂ ಭಾರೀ ಗದ್ದಲವಾಗಿದೆ. 'ಅದಾನಿ ಸರ್ಕಾರ್' ಎಂದು ಘೋಷಣೆಯನ್ನು ಕೂಗಲಾಗಿದೆ.
ನವದೆಹಲಿ, ಫೆಬ್ರವರಿ 06: ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಒತ್ತಾಯಿಸಿ ಸಂಸತ್ತಿನ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರರು ಸೇರಿದಂತೆ ವಿರೋಧ ಪಕ್ಷಗಳ ಹಲವಾರು ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅದಾನಿ ಸಮಸ್ಯೆಯ ಕುರಿತು ಚರ್ಚೆಗೆ ಕರೆ ನೀಡಿದ ವಿರೋಧ ಪಕ್ಷದ ಸಂಸದರ ಪ್ರತಿಭಟನೆಯಿಂದಾಗಿ, ರಾಷ್ಟ್ರಪತಿಗಳ ಭಾಷಣವನ್ನು ಶ್ಲಾಘಿಸುವ ನಿರ್ಣಯವನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಲಾಗಲಿಲ್ಲ.
ಇದೇ ವೇಳೆ, ಅದಾನಿ-ಹಿಂಡನ್‌ಬರ್ಗ್ ಸಮಸ್ಯೆಗೆ ಸಂಬಂಧಿಸಿದಂತೆ ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಚೇರಿಯ ಮುಂದೆ ಕಾಂಗ್ರೆಸ್ ಪಕ್ಷವೂ ಪ್ರತಿಭಟನೆ ನಡೆಸಿದೆ. ಬ್ಯಾನರ್‌ಗಳು, ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಹಿಡಿದು ಪಕ್ಷದ ಕಾರ್ಯಕರ್ತರು ಅದಾನಿ ಗ್ರೂಪ್, ಭಾರತ ಸರ್ಕಾರ ಮತ್ತು ಎಸ್‌ಬಿಐ, ಎಲ್‌ಐಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪಕ್ಷದ ಸದಸ್ಯರು ತೆಲಂಗಾಣ, ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಿದರು.

ಮತ್ತೊಂದೆಡೆ, ರಾಷ್ಟ್ರ ರಾಜಧಾನಿಯಲ್ಲಿ, ಪಕ್ಷದ ಸದಸ್ಯರು ಜಂತರ್ ಮಂತರ್ ಖಗೋಳ ಸ್ಮಾರಕಕ್ಕೆ ತೆರಳಿದರು. ಅವರು ಎಸ್‌ಬಿಐ ಮತ್ತು ಎಲ್‌ಐಸಿ ಮುಂದೆ ತಮ್ಮ ಪ್ರತಿಭಟನೆ ನಡೆಸಿದರು.
ಪನಾಮಾ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್‌ನಲ್ಲಿ ಹೆಸರಿಸಲಾದ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ವಿಚಾರದ ಕುರಿತು ಭಾನುವಾರ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದ್ದು, ಆರ್ಥಿಕ ಅಪರಾಧಿಗಳ ವಿರುದ್ಧದ ಬಿಜೆಪಿಯ ದೃಢ ನಿಲುವು ಏನಿದೆ ಎಂದು ಕಾಂಗ್ರೆಸ್ ಭಾನುವಾರ ಕೇಳಿದೆ. ಅದಾನಿ ಬಿಕ್ಕಟ್ಟಿನ ನಡುವೆ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್ ಮುಂದಿಟ್ಟಿದೆ.
ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಅಥವಾ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಂಸತ್ತಿನ ಅಧಿವೇಶನಗಳು ಕೋಲಾಹಲಕ್ಕೆ ಸಾಕ್ಷಿಯಾಗಿದೆ.

ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ ಅವರ ಹೆಸರು ಪನಾಮ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್‌ನಲ್ಲಿ ಹೆಸರಿಸಲ್ಪಟ್ಟಿದೆ. ಈ ವಿಚಾರವಾಗಿ ಯಾವುದೇ ಕೇಂದ್ರೀಯ ಸಂಸ್ಥೆ ಇನ್ನೂ ಏಕೆ ಅದಾನಿ ಗ್ರೂಪ್ ವಿರುದ್ಧ ತನಿಖೆ ಮಾಡಿಲ್ಲ ಎಂದು ಕಾಂಗ್ರೆಸ್ ಭಾನುವಾರ ಕೇಳಿದೆ.
ಅದಾನಿ ಗ್ರೂಪ್, 'ಸ್ಟಾಕ್ ಮ್ಯಾನಿಪ್ಯುಲೇಷನ್' ಮತ್ತು 'ಲೆಕ್ಕಪತ್ರ ವಂಚನೆ'ಯಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ. ನಿಮಗೆ (ಮೋದಿ ಸರ್ಕಾರ) ಚೆನ್ನಾಗಿ ಪರಿಚಯವಿರುವ ವ್ಯಾಪಾರ ಘಟಕವು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ನೀವು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾದರೆ, ನಿಮ್ಮ ಪ್ರಾಮಾಣಿಕತೆಗೆ ಏನಾಯಿತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಅದಾನಿ ಗ್ರೂಪ್ ವಿರುದ್ಧ ವರ್ಷಗಳಿಂದ ಕೇಳಿ ಬಂದಿರುವ ಗಂಭೀರ ಆರೋಪಗಳ ತನಿಖೆಗೆ ಎಂದಾದರೂ ಕ್ರಮ ತೆಗೆದುಕೊಳ್ಳಲಾಗಿದೆ? ನಿಮ್ಮ ಅಡಿಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಭರವಸೆ ಇದೆಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಭಾರತದ ಅತಿದೊಡ್ಡ ವ್ಯಾಪಾರ ಗ್ರೂಪ್‌ಗಳಲ್ಲಿ ಒಂದಾದ ಅದಾನಿ ಗ್ರೂಪ್‌ಗೆ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಏಕಸ್ವಾಮ್ಯವನ್ನು ನಿರ್ಮಿಸಲು ಅನುಮತಿಸಲಾಗಿದೆ. ನಿರಂತರವಾದ ಆರೋಪಗಳ ಹೊರತಾಗಿಯೂ ದೀರ್ಘಕಾಲದವರೆಗೆ ಗಂಭೀರ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ? ಇಷ್ಟು ವರ್ಷಗಳ ಕಾಲ 'ಭ್ರಷ್ಟಾಚಾರ-ವಿರೋಧಿ' ವಾಕ್ಚಾತುರ್ಯದಿಂದ ಲಾಭ ಗಳಿಸಿದ ಆಡಳಿತಕ್ಕೆ ಅದಾನಿ ಗ್ರೂಪ್ ಅತ್ಯಗತ್ಯವೇ?' ಎಂದು ಕಾಂಗ್ರೆಸ್ ಕೇಳಿದೆ.












Click it and Unblock the Notifications