ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ: ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ 'ಕೆಂಪುಕೋಟೆಯಲ್ಲಿ ಮುಂದಿನ ವರ್ಷ ಭೇಟಿಯಾಗೋಣ' ಎಂಬ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಪ್ರಧಾನಿಯವರ ಹೇಳಿಕೆಗಳು ಅವರ "ಅಹಂಕಾರ"ವನ್ನು ತೋರಿಸುತ್ತದೆ ಎಂದ ಖರ್ಗೆ, ಮುಂದಿನ ವರ್ಷ ನರೇಂದ್ರ ಮೋದಿ "ತಮ್ಮ ಮನೆಯಲ್ಲಿ" ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಿದರು.
"ನರೇಂದ್ರ ಮೋದಿ ಮುಂದಿನ ವರ್ಷ ಮತ್ತೊಮ್ಮೆ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಅವರು ಅದನ್ನು ತಮ್ಮ ಮನೆಯಲ್ಲಿ ಮಾಡುತ್ತಾರೆ." ಎಂದು ಮಲ್ಲಿಕಾರ್ಜುನ ಖರ್ಗೆ ಮೋದಿ ಭಾಷಣಕ್ಕೆ ಕಿಡಿ ಕಾರಿದ್ದಾರೆ.

ಸ್ವಾತಂತ್ರ್ಯ ದಿನದಂದು ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ಬಾರಿ ಕೂಡ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದು, ದೇಶದ ಸಾಧನೆಗಳನ್ನು ಪ್ರಸ್ತುತಪಡಿಸುವುದಾಗಿ ಹೇಳಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ರೀತಿಯಲ್ಲಿ ಅವರು ಮಾತನಾಡಿದರು.
ಮುಂದಿನ ವರ್ಷ ಮತ್ತೆ ಧ್ವಜ ಹಾರಿಸುತ್ತೇನೆ ಎಂದ ಮೋದಿ
"ಮುಂದಿನ ವರ್ಷ ಇದೇ ಕೆಂಪು ಕೋಟೆಯಿಂದ ಆಗಸ್ಟ್ 15 ರಂದು, ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡುತ್ತೇನೆ ಮತ್ತು ಹೆಚ್ಚಿನ ಆತ್ಮವಿಶ್ವಾಸದಿಂದ ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿನ ಗೀತೆ ಹಾಡುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, "ಗೆಲ್ಲುವುದು ಅಥವಾ ಸೋಲುವುದು ಜನರ ಕೈಯಲ್ಲಿದೆ, ಮತದಾರರ ಕೈಯಲ್ಲಿದೆ, 2023 ರಲ್ಲಿ "2024 ರಲ್ಲಿ ಮತ್ತೊಮ್ಮೆ ಧ್ವಜಾರೋಹಣ ಮಾಡುತ್ತೇನೆ" ಎಂದು ಹೇಳುವುದು ದುರಹಂಕಾರವಾಗಿದೆ, ಎಂದು ಹೇಳಿದ್ದಾರೆ.
ಕಣ್ಣಿನ ಸಮಸ್ಯೆಯಿಂದ ಗೈರಾದ ಖರ್ಗೆ
ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿರುವ ಕಾರಣ ಪ್ರಧಾನಿ ಭಾಷಣಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
"ನನಗೆ ಕೆಲವು ಕಣ್ಣಿನ ಸಮಸ್ಯೆಗಳಿವೆ, ಎರಡನೆಯದಾಗಿ, ನಾನು ಶಿಷ್ಟಾಚಾರದ ಪ್ರಕಾರ ಬೆಳಿಗ್ಗೆ 9:20 ಕ್ಕೆ ನನ್ನ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು, ನಂತರ ನಾನು ಕಾಂಗ್ರೆಸ್ ಕಚೇರಿಗೆ ಬಂದು ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ಭದ್ರತೆ ತುಂಬಾ ಬಿಗಿಯಾಗಿದ್ದರಿಂದ ನಾನು ಪಕ್ಷದ ಕಚೇರಿಗೆ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications