ನಾಗಪುರದ ಆದೇಶ ಮೀರಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಿಲ್ಲ: ಕಾಂಗ್ರೆಸ್
ಬೆಂಗಳೂರು, ಅ. 17: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಂದು ನಡೆಯುತ್ತಿದೆ. ಪಕ್ಷದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಕಣದಲ್ಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಕುಟುಂಬದ ಬೆಂಬಲವಿದೆ ಎಂಬ ಮಾತುಗಳು ಕೇಳಿಬಂದಿವೆ. ಖರ್ಗೆ ಅವರನ್ನು ಬಿಜೆಪಿ ರಬ್ಬರ್ ಸ್ಟಾಂಪ್ ಎಂದು ಕರೆದಿದೆ.
ಬಿಜೆಪಿ ಹೇಳಿಕೆಗೆ ಟ್ವೀಟ್ ಮೂಲಕ ಕೆಪಿಸಿಸಿ ತಿರುಗೇಟು ನೀಡಿದೆ. ನಾಗಪುರದ ಆದೇಶ ಮೀರಿ ಬಿಜೆಪಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವೇ ಇಲ್ಲವೆಂದು ವ್ಯಂಗ್ಯವಾಡಿದೆ.
'ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ತನ್ನಲ್ಲಿನ ಆಂತರಿಕ ಪ್ರಜಾಪ್ರಭುತ್ವ ತೋರಿಸಲು ಬಿಜೆಪಿಗೆ ಸಾಧ್ಯವಿಲ್ಲ. ನಾಗಪುರದ ಆದೇಶ ಮೀರಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿಗೆ ಆಗುವುದಿಲ್ಲ. ಬಿಜೆಪಿ ನಾಗಪುರದ ರಬ್ಬರ್ ಸ್ಟಾಂಪ್ ಆಗಿದೆ. ಬಿಜೆಪಿಯವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ' ಎಂದು ವಾಗ್ದಾಳಿ ನಡೆಸಿದೆ.

ಡಿಯರ್ ಬಿಜೆಪಿ, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಯಾರ ರಬ್ಬರ್ ಸ್ಟಾಂಪ್ ಎಂಬುದು ಜಗತ್ತಿಗೆ ತಿಳಿದ ವಿಚಾರ. ಅಂದಹಾಗೆ, ನಡ್ಡಾರನ್ನು ತಾವು ರಿಎಲೆಕ್ಟ್ ಮಾಡಿದ್ದೋ, ರಿಸೆಲೆಕ್ಟ್ ಮಾಡಿದ್ದೋ? ಬಿಜೆಪಿಯಲ್ಲಿ ದಮ್ಮು, ತಾಕತ್ತು ಹಾಗೂ ಆಂತರಿಕ ಪ್ರಜಾಪ್ರಭುತ್ವ ಇದ್ದರೆ ಚುನಾವಣೆಯ ಮೂಲಕ ಅಧ್ಯಕ್ಷರನ್ನ ಆಯ್ಕೆ ಮಾಡಿ ತೋರಿಸಲಿ. ಇದು ನಿಮಗೆ ಸಾಧ್ಯವೇ' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ನ ರಬ್ಬರ್ ಸ್ಟಾಂಪ್. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿ.ಎಲ್.ಸಂತೋಷ್ ಅವರ ರಬ್ಬರ್ ಸ್ಟಾಂಪ್. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾರ ರಬ್ಬರ್ ಸ್ಟಾಂಪ್. ಪೇಸಿಎಂ ಬಸವರಾಜ ಬೊಮ್ಮಾಯಿ ಕೇಶವಕೃಪಾದ ರಬ್ಬರ್ ಸ್ಟಾಂಪ್. ಇಡೀ ಬಿಜೆಪಿ ಪಕ್ಷವೇ ನಾಗಪುರದ ರಬ್ಬರ್ ಸ್ಟಾಂಪ್. ಇದಕ್ಕೆ ನೀವು ಇಲ್ಲ ಎನ್ನುವಿರಾ' ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಕೇಂದ್ರ ಕಚೇರಿಯು ಮಹಾರಾಷ್ಟ್ರದ ನಾಗಪುರದಲ್ಲಿದೆ. ಕೇಶವಕೃಪಾ, ಕರ್ನಾಟಕದ ಆರ್‌ಎಸ್‌ಎಸ್‌ನ ಮುಖ್ಯ ಕೇಂದ್ರವಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೇಶವಕೃಪಾ ಇದೆ.
ಕುತೂಹಲ ಕೆರಳಿಸಿದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ
ಕಾಂಗ್ರೆಸ್‌ನ ಅಧ್ಯಕ್ಷೀಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯು ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಖರ್ಗೆ ಮತ್ತು ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷದ 9,000 ಅಧಿಕ ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ದೆಹಲಿಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿ ಸೇರಿದಂತೆ ದೇಶದಲ್ಲಿ ಒಟ್ಟು 65 ಮತಕೇಂದ್ರಗಳಿವೆ. ಅಕ್ಟೋಬರ್ 19ರಂದು ಫಲಿತಾಂಶ ಹೊರಬೀಳಲಿದೆ.
ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಷ್ಟ್ರದ ಪ್ರಮುಖ ನಾಯಕರು ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿದ ಬಳಿಕ ಮಾತನಾಡಿರುವ ಕಾಂಗ್ರೆಸ್ ನಾಯಕರು, ಇದೊಂದು ಐತಿಹಾಸಕ ದಿನವೆಂದು ಬಣ್ಣಿಸಿದ್ದಾರೆ. ಗಾಂಧಿ ಪರಿವಾರದ ಬೆಂಬಲವಿರುವ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಚುನಾವಣೆಗೂ ಮುನ್ನ ಮಾತನಾಡಿದ್ದ ಖರ್ಗೆ, ಗಾಂಧಿ ಪರಿವಾರದ ಸದಸ್ಯರು ಕಾಂಗ್ರೆಸ್ ಕುಟುಂಬವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಅನುಭವಸ್ಥರು. ಅವರ ಸಲಹೆಗಳನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದರು. ಖರ್ಗೆ ಹೇಳಿಕೆಗೆ ವ್ಯಂಗ್ಯವಾಡಿದ್ದ ಬಿಜೆಪಿ, ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಎಂದು ಖರ್ಗೆ ಅವರನ್ನು ಕರೆದಿತ್ತು.












Click it and Unblock the Notifications