'ಕಾಂಗ್ರೆಸ್ ಸಂಸ್ಕೃತಿ'ಯಿಂದ ಕಾಂಗ್ರೆಸ್ ಹೊರ ಬರಬೇಕಿದೆ: ನರೇಂದ್ರ ಮೋದಿ
ಮುಂಬೈ, ಜನವರಿ 22: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯುವಕರನ್ನು ಪ್ರೇರೇಪಿಸಿದ "ಕಾಂಗ್ರೆಸ್ ಸಂಸ್ಕೃತಿ" ಈಗ ಹದಗೆಟ್ಟಿದೆ ಮತ್ತು ಇದು ವಂಶಪಾರಂಪರ್ಯದ ರಾಜಕೀಯದೊಂದಿಗೆ ಥಳಕು ಹಾಕಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಟೈಮ್ಸ್ ನೌ' ವಾಹಿನಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ನರೇಂದ್ರ ಮೋದಿ, "ಜನರಿಗೆ ರಾಜಕಾರಣಿಗಳ ಬಗ್ಗೆ ಇರುವ ಭಾವನೆಯನ್ನು ಬದಲಿಸಬೇಕಿದೆ. ಎಲ್ಲಾ ಪಕ್ಷಗಳಲ್ಲೂ ಶ್ರಮದಿಂದ ದುಡಿಯುವ ರಾಜಕಾರಣಿಗಳಿದ್ದಾರೆ. ಆದರೆ ಜನರಿಗೆ ರಾಜಕಾರಣಿಗಳ ಬಗ್ಗೆ ಇರುವ ದೃಷ್ಟಿಕೋನ ಉತ್ತಮವಾಗಿಲ್ಲ," ಎಂದಿದ್ದಾರೆ.
"ಕಾಂಗ್ರೆಸ್ ದೇಶಾದ್ಯಂತ ಒಂದು ಸಂಸ್ಕೃತಿಯನ್ನು ಹರಡಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶಕ್ಕೆ ತಮ್ಮ ಜೀವವನ್ನು ತ್ಯಾಗಮಾಡಲು ಯುವಜನರಿಗೆ ಸ್ಫೂರ್ತಿ ನೀಡಿದ ಪಕ್ಷ ಕಾಂಗ್ರೆಸ್.. ಆದರೆ ನಾನು ಇವತ್ತು 'ಕಾಂಗ್ರೆಸ್ ಸಂಸ್ಕೃತಿ'ಯಿಂದ ಮುಕ್ತರಾಗಿ ಎಂದು ಕಾಂಗ್ರೆಸ್ ಗೆ ಹೇಳುತ್ತಿದ್ದೇನೆ ... ಜಾತಿ, ವಂಶಪಾರಂಪರ್ಯ, ಭ್ರಷ್ಟಾಚಾರ ಮತ್ತು ದುರ್ಬಳಕೆ, ವಿಶ್ವಾಸಘಾತುಕತನ ಮತ್ತು ಸಂಪೂರ್ಣ ನಿಯಂತ್ರಣವನ್ನು ಇಟ್ಟುಕೊಳ್ಳುವ ಮಾರ್ಗಗಳಿಂದ ಯಶಸ್ಸು ಸಾಧಿಸಬಹುದು ಎಂದು ಕಾಂಗ್ರೆಸಿಗರು ನಂಬಿದ್ದಾರೆ," ಎಂದು ಪ್ರಧಾನ ಮಂತ್ರಿ ಹೇಳಿದರು.

"ಇವತ್ತು ರಾಜಕಾರಣಿಗಳು ವಿಮಾನದಲ್ಲಿ ಹೋದರೆ ಜನರು ಕುಟುಕುತ್ತಾರೆ. ಜನರಿಗಾಗಿ 18-20 ಗಂಟೆ ಕೆಲಸ ಮಾಡುವ ರಾಜಕಾರಿಗಳಿರುವಾಗ, ಇದು ಯಾಕಾಯಿತು? ಇದು ಒಂದು ಪಕ್ಷದ ಕಥೆಯಲ್ಲ. ಇದು ಎಲ್ಲಾ ಪಕ್ಷದಲ್ಲೂ ಇದೆ. ಇವತ್ತು ಜನರ ದೃಷ್ಟಿಕೋನ ಹಾಗಾಗಿದೆ," ಎಂದು ವಿವರಿಸಿದ ಪ್ರಧಾನಿ, ರಾಜಕಾರಣಿಗಳ ಬಗ್ಗೆ ಜನರಿಗಿರುವ ದೃಷ್ಟಿಕೋನವನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.
ಇನ್ನು ನ್ಯಾಯಾಂಗದ ಬಿಕ್ಕಟ್ಟಿನ ಬಗ್ಗೆ ಕೇಳೀದ ಪ್ರಶ್ನೆ ಉತ್ತರಿಸಿದ ಮೋದಿ, ಈ ಬಗ್ಗೆ ನಾನೇನು ಹೇಳುವುದಿಲ್ಲ. ಇದರಲ್ಲಿ ಸರಕಾರದ ಪಾತ್ರ ಏನೂ ಇಲ್ಲ ಎಂದು ಉತ್ತರಿಸಲು ನಿರಾಕರಿಸಿದ್ದಾರೆ.
ವಿಶ್ವ ಬ್ಯಾಂಕ್ ನ 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಶ್ರೇಯಾಂಕದಲ್ಲಿ ಭಾರತವು 30 ಸ್ಥಾನಗಳನ್ನು ಏರಿಕೆ ಕಂಡಿದ್ದನ್ನು ಪ್ರಶಂಸಿಸಿದ ಮೋದಿ, "ವ್ಯವಹಾರ ಮಾಡುವುದನ್ನು ಸುಲಭಗೊಳಿಸುವುದು ತುಂಬಾ ಒಳ್ಳೆಯದು ಆದರೆ ಭಾರತದಂತಹ ದೇಶದಲ್ಲಿ ಅಂತಿಮ ಗುರಿಯು ಸುಲಭವಾಗಿ ಬದುಕುವುದು ಎಂದು ನನ್ನ ವೈಯಕ್ತಿಕ ನಂಬಿಕೆಯಾಗಿದೆ" ಎಂದು ಹೇಳಿದರು.












Click it and Unblock the Notifications