ತನ್ನೆಲ್ಲಾ ಜನಪ್ರತಿನಿಧಿಗಳ ತಿಂಗಳ ಸಂಬಳ ಕೇರಳಕ್ಕೆ ನೀಡಿದ ಕಾಂಗ್ರೆಸ್
ನವದೆಹಲಿ, ಆಗಸ್ಟ್ 18: ಕೇರಳಕ್ಕೆ ಭಾರಿ ಮೊತ್ತದ ನೆರವಿಗೆ ನಿಂತಿರುವ ಕಾಂಗ್ರೆಸ್ ತನ್ನೆಲ್ಲಾ ಜನಪ್ರತಿನಿಧಿ ಸ್ಥಾನದಲ್ಲಿರುವ ಸದಸ್ಯರ ಒಂದು ತಿಂಗಳ ಸಂಬಳವನ್ನು ಕೇರಳ ಪ್ರವಾಹ ಪೀಡಿತರ ನೆರವಿಗೆ ನೀಡಲು ನಿರ್ಧರಿಸಿದೆ.
ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ, ರಾಜ್ಯಸಭಾ ಸದಸ್ಯರು, ಮತ್ತು ದೇಶದೆಲ್ಲೆಡೆ ಇರುವ ವಿಧಾನಸಭಾ, ವಿಧಾನಪರಿಷತ್ ಸದಸ್ಯರು ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳದ ಸಹಾಯಕ್ಕೆಂದು ನೀಡಲಿದ್ದಾರೆ.
ಎಲ್ಲ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಸಂಬಳವನ್ನು ಕೇರಳಕ್ಕೆ ನಿಡಬೇಕೆಂಬುದು ಎಐಸಿಸಿ ರಾಹುಲ್ ಗಾಂಧಿ ಅವರ ಸೂಚನೆ ಆಗಿದ್ದು, ಈಗಾಗಲೇ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೆಳಿಗ್ಗೆಯಷ್ಟೆ ರಾಹುಲ್ ಗಾಂಧಿ ಅವರು ಟ್ವಿಟ್ಟರ್ ಮೂಲಕ ಕೇರಳಕ್ಕೆ ಸಹಾಯ ಮಾಡುವಂತೆ ಜನರನ್ನು ಕೇಳಿಕೊಂಡಿದ್ದರು. ಅಲ್ಲದೆ ಮೋದಿ ಅವರಿಗೂ ಕೇರಳಕ್ಕೆ ಭೇಟಿ ನೀಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು.
ನೂರಾರು ಸಂಖ್ಯೆಯಲ್ಲಿರುವ ಕಾಂಗ್ರೆಸ್‌ನ ಜನಪ್ರತಿನಿಧಿಗಳ ತಿಂಗಳ ಸಂಬಳದಿಂದ ಭಾರಿ ದೊಡ್ಡ ಮೊತ್ತವೇ ಸಂಗ್ರಹವಾಗಲಿದ್ದು, ಕೇರಳದ ಪ್ರವಾಹ ಸಂತ್ರಸ್ತರಿಗೆ ಉಪಯೋಗವಾಗುವುದರಲ್ಲಿ ಸಂಶಯವೇ ಇಲ್ಲ.
ಕೇರಳಕ್ಕೆ ಭರಪೂರ ಸಹಾಯ ಮಾಡಿರುವ ಕರ್ನಾಟಕಕ್ಕೆ ಯಾವುದೇ ನೆರವಿನ ಹಸ್ತ ಚಾಚದೇ ಇರುವುದು ಬೇಸರದ ಸಂಗತಿ. ರಾಜ್ಯದಲ್ಲಿ 78 ಮಂದಿ ಕಾಂಗ್ರೆಸ್ ಶಾಸಕರು 10 ಕ್ಕೂ ಹೆಚ್ಚು ಸಂಸದರಿದ್ದಾರೆ. ಇವರಾದರೂ ತಮ್ಮ ತಿಂಗಳ ಸಂಬಳವನ್ನು ಕೊಡಗಿಗೆ ನೀಡಿದರೆ ಸಾಕಷ್ಟು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಿರ್ಣಯ ತೆಗೆದುಕೊಳ್ಳಬೇಕಿದೆ.












Click it and Unblock the Notifications