ಶೀಘ್ರದಲ್ಲೇ ಒಂದೇ ವೇದಿಕೆಯಲ್ಲಿ ಪ್ರತಿಪಕ್ಷಗಳ ಘರ್ಜನೆ?
ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ವಿಪಕ್ಷಗಳಲ್ಲಿ ಒಗ್ಗಟ್ಟಿನ ಆಟ ಶುರುವಾಗಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಘರ್ಜಿಸಲು, ವಿಪಕ್ಷ ನಾಯಕರು ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಈ ಮೂಲಕ ಶೀಘ್ರದಲ್ಲೇ ಒಂದೇ ವೇದಿಕೆಯಲ್ಲಿ ಪ್ರತಿಪಕ್ಷ ನಾಯಕರು ತೊಡೆ ತಟ್ಟುವುದು ಪಕ್ಕಾ ಆಗಿದ್ದು, ಕಾಂಗ್ರೆಸ್ ಈ ಬಗ್ಗೆ ಮಾಹಿತಿ ನೀಡಿದೆ.
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಮೈತ್ರಿ ರೂಪಿಸಲು ಪ್ರಯತ್ನ ಸಾಗಿದೆ. ಇದರ ಮುಂದಾಳತ್ವ ವಹಿಸಿಕೊಂಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ದೇಶಾದ್ಯಂತ ಸಂಚರಿಸಿ ವಿರೋಧ ಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ & ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಹೀಗೆ ಕಾಂಗ್ರೆಸ್ ವರಿಷ್ಠರ ಜೊತೆಗೆ ಮಹತ್ವದ ಚರ್ಚೆ ನಡೆದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಸರ್ಪ್ರೈಸ್ ನೀಡಿದೆ!

ವೇದಿಕೆ ಸಿದ್ಧ ಮಾಡಿದ ಪ್ರತಿಪಕ್ಷಗಳು?
'ಪ್ರತಿಪಕ್ಷಗಳು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಲು ಸ್ಥಳ ಹಾಗೂ ಸಮಯವನ್ನ ಒಂದೆಡೆರಡು ದಿನಗಳಲ್ಲಿ ಪ್ರಕಟಿಸುತ್ತೇವೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ 2024ರಲ್ಲಿ ಒಗ್ಗಟ್ಟಿನ ಹೋರಾಟ ಪ್ರದರ್ಶಿಸೋದಕ್ಕೆ ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದು ಕನ್ಫರ್ಮ್ ಆಗಿದೆ. ಅದರಲ್ಲೂ ಬಿಹಾರ ಸಿಎಂ ನಿತೀಶ್ ಕುಮಾರ್ ಭೇಟಿ ನಂತರ ಇಂತಹ ಮಹತ್ವದ ಸುದ್ದಿ ಹೊರಬಿದ್ದಿದೆ.
'ದೇಶ ಒಗ್ಗೂಡುತ್ತಿದೆ' ಎಂದ ಖರ್ಗೆ
ಮತ್ತೊಂದ್ಕಡೆ ಈ ಬಗ್ಗೆ ಟ್ವೀಟ್ ಮಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಈಗ ದೇಶ ಒಗ್ಗೂಡುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ಸಂದೇಶ ಸಾರುವುದೇ ನಮ್ಮ ಆಶಯ. ಇಂದು ನಿತೀಶ್ ಕುಮಾರ್ ಜೊತೆ ನಾನು ಮತ್ತು ರಾಹುಲ್ ಗಾಂಧಿ ಅವರು ದೇಶವನ್ನ ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುವ ಬಗ್ಗೆ ಚರ್ಚಿಸಿದ್ದೇವೆ' ಎಂದು ತಿಳಿಸಿದ್ದರು. ಇದೆಲ್ಲವೂ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿ, 2024ರ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವ ಬಗ್ಗೆ ಹಿಂಟ್ ನೀಡಿದೆ.

ಶರದ್ ಪವಾರ್ & ರಾಹುಲ್ ಭೇಟಿ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಧ್ಯೆ ಕಳೆದ ತಿಂಗಳು ವಿಪಕ್ಷಗಳ ಒಗ್ಗಟ್ಟಿನ ವಿಚಾರವಾಗಿ ಚರ್ಚೆ ನಡೆದಿತ್ತು. ಸಂಸತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯುವ ಸಲುವಾಗಿ ಎನ್‌ಸಿಪಿ ವರಿಷ್ಠ ಪವಾರ್ ಭೇಟಿ ನೀಡಿ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕು ಎಂಬ ವಿಷಯ ಮೊದಲಿನಿಂದ ಚರ್ಚೆಯಲ್ಲಿತ್ತು. ಇದೀಗ ನಿತೀಶ್ ಕುಮಾರ್ ಮತ್ತೊಮ್ಮೆ ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚಿಸಿದ್ದಾರೆ.
ಮಮತಾ ಬ್ಯಾನರ್ಜಿ ಸಾಥ್!
ಬಿಹಾರ ಸಿಎಂ ವಿರೋಧ ಪಕ್ಷಗಳ ನಾಯಕರನ್ನ ಒಗ್ಗೂಡಿಸುವ ಕೆಲಸ ಮಾಡುತ್ತಿದ್ರೆ, ಮತ್ತೊಂದು ಕಡೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಕಾರ್ಯಕ್ಕೆ ಹೆಗಲು ನೀಡುತ್ತಿದ್ದಾರೆ. ಹೀಗೆ ವಿಪಕ್ಷ ನಾಯಕರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಿದ್ದಾರೆ. ಆ ಮೂಲಕ ಮುಂಬರುವ ದಿನಗಳಲ್ಲಿ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಆದ್ರೆ ಇದೆಲ್ಲಾ ಎಲ್ಲಿಯವರೆಗೂ? ಎಂಬ ಮಾತು ಪ್ರಶ್ನೆ ಕೂಡ ಮೂಡಿದೆ.

ಒಟ್ನಲ್ಲಿ ಕರ್ನಾಟಕ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಇಲ್ಲಿ ಸರ್ಕಾರ ರಚನೆ ಮಾಡಿರುವುದು ವಿಪಕ್ಷಗಳ ನಾಯಕರಿಗೂ ಹೊಸ ಹುರುಪು ನೀಡಿದೆ. ಕೆಲ ದಿನದ ಹಿಂದಷ್ಟೇ ಕರ್ನಾಟಕ ಚುನಾವಣೆಯ ಗೆಲುವನ್ನ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬಣ್ಣಿಸಿದ್ದರು, ದೇಶಕ್ಕೆ ಕರ್ನಾಟಕದ ಮಾದರಿ ಬೇಕು ಎಂದಿದ್ದರು. ಈ ಬೆನ್ನಲ್ಲೇ ವಿಪಕ್ಷ ನಾಯಕರ ಒಗ್ಗಟ್ಟಿನ ಮಂತ್ರ ಮತ್ತಷ್ಟು ಜೋರಾಗಿದೆ.












Click it and Unblock the Notifications