₹25 ಸಾವಿರ ಕೋಟಿ ಒಪ್ಪಂದದಲ್ಲಿ ಭಾರಿ ಅವ್ಯವಹಾರ? ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ!
ನವದೆಹಲಿ: ಪಿಎಂ ಮೋದಿ ಅವರ ಅಮೆರಿಕ ಪ್ರವಾಸದಲ್ಲಿ ಹಲವು ಪ್ರಮುಖ ಒಪ್ಪಂದಕ್ಕೆ ಎರಡು ರಾಷ್ಟ್ರಗಳು ಸಹಿ ಹಾಕಿವೆ. ಈ ಪೈಕಿ MQ-9B ಡ್ರೋನ್‌ಗಳ ಖರೀದಿ ಕೂಡ ಸೇರಿದೆ. ಆದರೆ ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಕಮ್ಮಿ ಬೆಲೆಗೆ ಸಿಗುತ್ತಿದ್ದ ಡ್ರೋನ್‌ಗಳಿಗೆ ಇಷ್ಟೊಂದು ದುಡ್ಡು ಕೊಟ್ಟಿದ್ದೇಕೆ? ಎಂದು ಪ್ರಶ್ನೆ ಮಾಡಿದೆ.
ಅಂದಹಾಗೆ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಹಲವು ಕಾರಣಕ್ಕೆ ಸುದ್ದಿಯಾಗಿತ್ತು. ಅದರಲ್ಲೂ ಅಮೆರಿಕದ ಜೊತೆ ಹಿಂದೆ ಕೂಡ ಭಾರತ ಹಲವು ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ರಷ್ಯಾ ಜೊತೆ ಭಾರತ ಹತ್ತಿರವಾಗುತ್ತಿದೆ ಎಂದು ಆರೋಪಿಸಿ ಅಮೆರಿಕ ಮತ್ತು ಭಾರತದ ನಡುವೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳ ಪೈಕಿ ಕೆಲವು ಬಾಕಿ ಉಳಿದಿದ್ದವು. ಹೀಗೆ MQ-9B ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ಭಾರತ ಹಾಗೂ ಅಮೆರಿಕ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಸುಮಾರು ₹25,200 ಕೋಟಿ ರೂಪಾಯಿ ವೆಚ್ಚದ ಒಪ್ಪಂದಕ್ಕೆ ಮೊನ್ನೆ ಮೊನ್ನೆ ಇನ್ನೂ ಅಂತಿಮವಾದ ಮುದ್ರೆ ಬಿದ್ದಿತ್ತು. ಆದರೆ ಈ ಒಪ್ಪಂದದಲ್ಲಿ ಅನ್ಯಾಯ ಆಗಿದೆಯಂತೆ!

ಜಾಸ್ತಿ ಬೆಲೆ ಕೊಟ್ಟು ಡ್ರೋನ್ ಖರೀದಿ?
ಅಂದಹಾಗೆ ಭಾರತದ ರಕ್ಷಣಾ ವಲಯದಲ್ಲಿ 'MQ-9B' ಡ್ರೋನ್ ಗೇಮ್ ಚೇಂಜರ್ ಎಂದು ಕರೆಯಲಾಗುತ್ತಿದೆ. ಆದರೆ ಅಮೆರಿಕ ಉತ್ಪಾದಿಸುವ 31 'ಎಂಕ್ಯೂ-9ಬಿ ಪ್ರಿಡೇಟರ್ ಯುಎವಿ' ಡ್ರೋನ್‌ಗಳನ್ನ ಹೆಚ್ಚಿನ ಬೆಲೆಗೆ ಖರೀದಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಮೂಲಕ ಅಮೆರಿಕ & ಭಾರತ ನಡುವಿನ ಡ್ರೋನ್ ಖರೀದಿ ಒಪ್ಪಂದಕ್ಕೆ ಹೊಸ ವಿವಾದವು ಅಂಟಿಕೊಂಡಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ, 'ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಡ್ರೋನ್‌ಗಳ ಖರೀದಿಗೆ ಅಮೆರಿಕದ ಜೊತೆ ಭಾರತ ಮಾಡಿಕೊಂಡ ಒಪ್ಪಂದ ಪಾರದರ್ಶಕವಾಗಿ ಇರಬೇಕು' ಎಂದು ಆಗ್ರಹಿಸಿದ್ದಾರೆ. ಇದರ ಜೊತೆ ಇನ್ನೂ ಹಲವು ಆರೋಪಗಳನ್ನ ಖೇರಾ ಮಾಡಿದ್ದು, ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ.
ಕಾಂಗ್ರೆಸ್ ಮಾಡುತ್ತಿರುವ ಆರೋಪ ಏನು?
ಅಷ್ಕಕ್ಕೂ ಕಾಂಗ್ರೆಸ್ ಆರೋಪದ ಪ್ರಕಾರ 'ರಾಷ್ಟ್ರದ ಭದ್ರತೆ ಮುಖ್ಯ ಎಂಬುದರಲ್ಲಿ ಬೇರೆಯ ಮಾತಿಲ್ಲ. ಆದರೆ ಪ್ರಿಡೇಟರ್ ಡ್ರೋನ್ ಖರೀದಿ ಹಲವು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರದ ಹಿತಾಸಕ್ತಿಗೆ ಅಪಾಯ ತಂದೊಡ್ಡುವ ಕೆಲಸ ಮಾಡುತ್ತದೆ. ರಫೇಲ್ ಖರೀದಿ ವೇಳೆಯೂ ಇದು ಗೊತ್ತಾಗಿದೆ. ಈ ಯುದ್ಧ ವಿಮಾನಗಳ ತಂತ್ರಜ್ಞಾನ ಎಚ್‌ಎಎಲ್‌ಗೆ ವರ್ಗಾಯಿಸುವುದನ್ನು ಹೇಗೆ ನಿರಾಕರಿಸಲಾಯಿತು? ಎಂಬುದನ್ನು ನೋಡಿದ್ದೇವೆ. ರಕ್ಷಣಾ ಖರೀದಿ ಸಮಿತಿ ಹಾಗೂ ವಾಯುಪಡೆಯ ಆಕ್ಷೇಪಗಳನ್ನು ನಿರ್ಲಕ್ಷಿಸಿದ ಸರ್ಕಾರ ರಕ್ಷಣಾ ವ್ಯವಸ್ಥೆ ಖರೀದಿಗೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ರಫೇಲ್ ಖರೀದಿ ಬಗ್ಗೆ ಫ್ರಾನ್ಸ್‌ನಲ್ಲಿ ಇನ್ನೂ ತನಿಖೆ ನಡೆಯುತ್ತಿದೆ' ಎಂದು ಖೇರಾ ಆರೋಪಿಸಿದ್ದಾರೆ.
25,200 ಕೋಟಿ ರೂಪಾಯಿ ಒಪ್ಪಂದ!
ಅಲ್ಲದೆ ಇದೀಗ ಖರೀದಿಗೆ ಒಪ್ಪಂದ ಮಾಡಿಕೊಂಡುವ 31 ಡ್ರೊನ್‌ಗಳ ಬಗ್ಗೆಯೂ ಕಾಂಗ್ರೆಸ್ ಗಂಭೀರ ಆರೋಪವನ್ನ ಮಾಡಿದೆ. '31 ಡ್ರೋನ್‌ಗಳ ಬೆಲೆ ಮತ್ತು ಖರೀದಿ ಷರತ್ತುಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅಮೆರಿಕದ ಕಂಪನಿ ಹಾಗೂ ಇತರ ದೇಶಗಳು ನೀಡಿದ ಬೆಲೆಯನ್ನು ಪರಿಶೀಲಿಸಿ ನಂತರ ಖರೀದಿ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈಗ ಒಪ್ಪಂದದ ಪ್ರಕಾರ ಹೆಚ್ಚಿನ ಹಣನೀಡಿ ಡ್ರೋನ್ ಖರೀದಿ ಮಾಡಿದ್ದಾರೆ' ಎಂದು ಕಾಂಗ್ರೆಸ್ ಆರೋಪ ಮಾಡಿದೆ. 25,200 ಕೋಟಿ ರೂಪಾಯಿ ವೆಚ್ಚದ ಒಪ್ಪಂದ ಇದಾಗಿದ್ದು, ದೇಶದ ವಾಯುಪಡೆ ಮತ್ತು ಭೂಸೇನೆಗೆ ಈ ಡ್ರೋನ್‌ಗಳು ಅತ್ಯಗತ್ಯವಾಗಿವೆ. ಹಾಗಾದರೆ ಭಾರತಕ್ಕೆ ಈ ಡ್ರೋನ್‌ಗಳು ಏಕೆ ಅಗತ್ಯ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಪಾಕಿಸ್ತಾನ ವಿರುದ್ಧ ಪ್ರಮುಖ ಅಸ್ತ್ರ!
ನಮ್ಮ ದೇಶದ ಭವಿಷ್ಯಕ್ಕೆ ಮತ್ತು ಶತ್ರುಗಳಿಂದ ರಕ್ಷಣೆಗೆ ಈ MQ-9B ಡ್ರೋನ್ ಖರೀದಿ ಅತ್ಯಗತ್ಯ ಎನ್ನುವುದು ತಜ್ಞರ ವಾದ. ಏಕೆಂದರೆ ಪಾಕಿಸ್ತಾನ ಹಾಗೂ ಚೀನಾ ಸೇನೆಯಿಂದ ಭಾರತ ಸೇನೆ ಪದೇ ಪದೆ ಗಡಿ ಭದ್ರತಾ ಸವಾಲು ಎದುರಿಸುತ್ತಿದೆ. ಅದ್ರಲ್ಲೂ ಪಾಕಿಸ್ತಾನದ ಗಡಿಯಲ್ಲಿ ಉಗ್ರರು ಒಳ ನುಸುಳುವುದು, ಕಳ್ಳ ಸಾಗಾಣಿಕೆ ಹಾಗೂ ಗಡಿ ವಿವಾದಗಳಂತಹ ಸಮಸ್ಯೆ ತೀವ್ರವಾಗಿಯೇ ಕಾಡುತ್ತಿದೆ. ಹೀಗಾಗಿ ಇಂತಹ ಸವಾಲಿನ ಕೆಲಸ ನಿರ್ವಹಿಸಲು MQ-9B ಪ್ರಿಡೇಟರ್ ಡ್ರೋನ್‌ಗಳು ಸಹಾಯ ಮಾಡುತ್ತವೆ. ಗಡಿ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟು ಕಾಯಲು ಇದರಿಂದ ಸಹಾಯ ಆಗುತ್ತದೆ. ಆದ್ರೆ ವಾಸ್ತವ ಬೆಲೆಗಿಂತ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಲಾಗಿದೆ ಎಂದು ಈಗ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಕರಾವಳಿ ಕಾಯಲು ಡ್ರೋನ್ ಬೇಕು!
ಭಾರತ ಭೂ ಗಡಿಯ ಜೊತೆಗೆ ನೆರೆ ರಾಷ್ಟ್ರಗಳ ಜೊತೆ ಜಲ ಗಡಿಯನ್ನು ಹೊಂದಿದೆ. ಈ ಹಿನ್ನೆಲೆ ಭಾರತದ ಸಮುದ್ರ ಗಡಿಗಳ ರಕ್ಷಿಸಲು ಹಾಗೂ ಆರ್ಥಿಕ ವಲಯ ಕಾಪಾಡಲು ಈ ಡ್ರೋನ್‌ಗಳು ಅತ್ಯಗತ್ಯ ಎಂಬ ಮಾತು ಕೇಳಿಬಂದಿತ್ತು. ಏಕೆಂದ್ರೆ ಅಮೆರಿಕದ ಈ ಪ್ರಿಡೇಟರ್ ಡ್ರೋನ್‌ಗಳು ಅತ್ಯಾಧುನಿಕ ಸಮುದ್ರ ವಿಚಕ್ಷಣಾ ಸಾಮರ್ಥ್ಯ ಹೊಂದಿವೆ. ಹೀಗಾಗಿ ಕಳ್ಳ ಸಾಗಾಣಿಕೆ, ರಕ್ಷಣಾ ಕಾರ್ಯಾಚರಣೆಗೆ ಡ್ರೋನ್‌ಗಳು ಸಹಾಯ ಮಾಡಲಿವೆ. ಹೀಗಾಗಿ ಒಟ್ಟು 31 ಡ್ರೋನ್ ಖರೀದಿಗೆ ಅಮೆರಿಕದ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಖರೀದಿ ವೆಚ್ಚ 3 ಬಿಲಿಯನ್ ಅಂದರೆ ಸುಮಾರು 25 ಸಾವಿರ ಕೋಟಿ ರೂಪಾಯಿ ಆಗಬಹುದು. ಆದ್ರೆ ಈಗ ಕಾಂಗ್ರೆಸ್ ಈ ಒಪ್ಪಂದ ವಿಚಾರದಲ್ಲಿ ಗಂಭೀರ ಆರೋಪ ಮಾಡಿದೆ.
ಭಾರತದಲ್ಲೇ ತಯಾರಿಸಬಹುದು ಎಂಬ ವಾದ!
ಈಗ ಕಾಂಗ್ರೆಸ್ ಹೇಳುತ್ತಿರುವಂತೆ, ಭಾರತ 25 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ 31 ಡ್ರೋನ್ ಖರೀದಿ ಮಾಡುತ್ತಿದೆ. ಆ ಪ್ರಕಾರ ಪ್ರತಿ ಡ್ರೋನ್ ಬೆಲೆ ₹812 ಆಗಲಿದೆ. ಆದರೆ ಈ ಬೆಲೆಗಿಂತ ಶೇ 10ರಿಂದ 20ರಷ್ಟು ಕಡಿಮೆ ವೆಚ್ಚದಲ್ಲಿ, ಇಂಥದ್ದೇ ತಂತ್ರಜ್ಞಾನ ಹೊಂದಿರುವ ಡ್ರೋನ್‌ಗಳನ್ನು ಡಿಆರ್‌ಡಿಒ ತಯಾರಿಸಬಲ್ಲದು ಎಂಬುದು ಕಾಂಗ್ರೆಸ್ ವಾದ. ಈ ಕಾರಣಕ್ಕೆ ಕಾಂಗ್ರೆಸ್ ಆರೋಪದ ಬಗ್ಗೆ ಪರ, ವಿರೋಧದ ಚರ್ಚೆ ಆರಂಭವಾಗಿದೆ. ಆದರೆ ಈ ಕುರಿತು ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದ್ಕಡೆ ಭಾರತಕ್ಕೆ MQ-9B ಡ್ರೋನ್ಸ್ ಬಂದ ನಂತರ ಏನೆಲ್ಲಾ ಬದಲಾವಣೆ ಆಗಬಹುದು, ಸೇನೆಗೆ ಯಾವ ರೀತಿ ಪ್ರಯೋಜನ ಆಗಲಿದೆ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications