ಹರ್ಯಾಣ ವಿಧಾನಸಭೆ ಚುನಾವಣೆ: ಬಿಜೆಪಿಗೆ ಅಧಿಕಾರ ತಪ್ಪಿಸಲು ರಾಹುಲ್ ಮಾಸ್ಟರ್ ಪ್ಲಾನ್!
ನವದೆಹಲಿ, ಸೆಪ್ಟೆಂಬರ್ 03: ಹರ್ಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆಯೇ?. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೊಂಡಿದೆ. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಮೂಲಗಳ ಮಾಹಿತಿ ಪ್ರಕಾರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿದ್ದಾರೆ. ಸೋಮವಾರ ನಡೆದ ಪಕ್ಷ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನು ಅವರು ಕೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದವು. ಹರ್ಯಾಣದಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಇದೇ ಮಾದರಿಯಲ್ಲಿ ಗುಜರಾತ್, ಗೋವಾ, ದೆಹಲಿ ಮ್ತು ಚಂಡೀಗಢ್‌ನಲ್ಲಿ ಮೈತ್ರಿಯಾಗಿತ್ತು. ಈಗ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಗೆ ಕಾಂಗ್ರೆಸ್ ಮುಂದಾಗಿದೆ.
ಹರ್ಯಾಣದಲ್ಲಿ 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಹೆಚ್‌ಎಲ್‌ಪಿ 1, 7 ಪಕ್ಷೇತರರು ಮತ್ತು ಇತರರು 1 ಸ್ಥಾನದಲ್ಲಿ ಜಯಗಳಿಸಿದ್ದರು. ಈಗ ಪ್ರಕಟವಾಗುತ್ತಿರುವ ಹರ್ಯಾಣ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಗಳು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಅಂದಾಜಿಸಿವೆ.
28 ಹಾಲಿ ಶಾಸಕರಿಗೆ ಟಿಕೆಟ್?; ದೆಹಲಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಹರ್ಯಾಣದ 28 ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಚರ್ಚೆಗಳು ನಡೆದಿವೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ 90 ಕ್ಷೇತ್ರದಲ್ಲಿ 28 ಕ್ಷೇತ್ರದಲ್ಲಿ ಹಾಲಿ ಶಾಸಕರನ್ನೇ ಕಣಕ್ಕಿಳಿಸಲಾಗುತ್ತದೆ. ಬುಧವಾರ ಮತ್ತೊಂದು ಸುತ್ತಿನ ಸಭೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿದ್ದು, ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
"ಕೇವಲ ನಾಯಕರು ಮಾತ್ರವಲ್ಲ, ಕೆಲವು ಕಾರ್ಯಕರ್ತರಿಗೂ ಸಹ ವಿಧಾನಸಭೆ ಚುನಾವಣೆ ಟಿಕೆಟ್ ನೀಡಬೇಕು" ಎಂದು ಸಭೆಯಲ್ಲಿ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ರಾಜ್ಯಸಭೆ ಸದಸ್ಯರು, ಸಂಸದರನ್ನು ಸಹ ವಿಧಾನಸಭೆ ಚುನಾವಣೆ ಕಣಕ್ಕಿಳಿಸಲು ಪಕ್ಷ ಬಯಸಿದೆ. ಆದರೆ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಹರ್ಯಾಣ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಾಬಾರಿಯಾ, "ಸ್ಕ್ರೀನಿಂಗ್ ಕಮಿಟಿಗೆ 49 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನೀಡಲಾಗಿದೆ. ಇವುಗಳಲ್ಲಿ 34 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ" ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗ ಮೊದಲು ಅಕ್ಟೋಬರ್ 1ರಂದು ಮತದಾನ ಮತ್ತು ಅಕ್ಟೋಬರ್ 4ರಂದು ಮತ ಎಣಿಕೆ ಎಂದು ದಿನಾಂಕ ನಿಗದಿ ಮಾಡಿತ್ತು. ಆದರೆ ಭಿಷ್ಣೋಯಿ ಸಮುದಾಯ ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿರುವ ಹಬ್ಬದ ಕಾರಣ ಮತದಾನದ ದಿನಾಂಕವನ್ನು ಬದಲಾವಣೆ ಮಾಡುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿತ್ತು. ಆದ್ದರಿಂದ ಆಯೋಗ ಮತದಾನ, ಮತ ಎಣಿಕೆ ದಿನಾಂಕವನ್ನು ಬದಲಾವಣೆ ಮಾಡಿದೆ.












Click it and Unblock the Notifications