ತಕ್ಷಣದಿಂದಲೇ ಜಾರಿ; ಎಲ್‌ಪಿಜಿ ಸಿಲಿಂಡರ್ ದರ 25 ರೂ. ಏರಿಕೆ
ಬೆಂಗಳೂರು, ಮಾರ್ಚ್ 01: ಕ್ಯಾಲೆಂಡರ್ ಹೊಸ ವರ್ಷದ ಮೂರನೇ ತಿಂಗಳ ಮೊದಲ ದಿನವೇ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಸಿಲಿಂಡರ್ ದರಗಳನ್ನು ಏರಿಕೆ ಮಾಡಲಾಗಿದೆ. ಇದರಿಂದಾಗಿ ಹೋಟೆಲ್‌ಗಳಲ್ಲಿಯೂ ದರ ಹೆಚ್ಚಾಗುವ ನಿರೀಕ್ಷೆಇದೆ.
ಮಾರ್ಚ್ 1ರ ಶುಕ್ರವಾರದಿಂದಲೇ ಜಾರಿಗೆ ಬರುವಂತೆ 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪ್ರತಿ ತಿಂಗಳ ಮೊದಲ ದಿನವೇ ಸಿಲಿಂಡರ್ ಬೆಲೆಯಲ್ಲಿ ಏರಿಳಿತ ಆಗುತ್ತದೆ. ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ. ಅಲ್ಲದೇ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಶುಕ್ರವಾರದಿಂದಲೇ ಸಿಲಿಂಡರ್‌ಗೆ ಹೆಚ್ಚು ಹಣ ಪಾವತಿ ಮಾಡಬೇಕಿದೆ.
ಯಾವ ನಗರದಲ್ಲಿ ಎಷ್ಟು ದರ?: ಪರಿಷ್ಕೃತ ದರ ಜಾರಿಯಾದ ಬಳಿಕ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1795 ರೂ.ಗಳಿಗೆ ಏರಿಕೆಯಾಗಿದೆ. ಹೋಟೆಲ್‌ಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಗ್ರಾಹಕರ ಮೇಲೆ ಹಾಕುವ ಸಾಧ್ಯತೆ ಇದ್ದು, ಊಟ, ಉಪಹಾರದ ದರದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ.
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ 2023ರಲ್ಲಿ ನಿರಂತರ ಏರಿಕೆ ಕಂಡಿತ್ತು. ಆದರೆ ಡಿಸೆಂಬರ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ರೂ. 39.50 ಕಡಿತಗೊಳಿಸಿದ್ದು, ಜನರಿಗೆ ನೆಮ್ಮದಿ ತಂದಿತ್ತು.
ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದರು. ಬಜೆಟ್ ದಿನವೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 14 ರೂ. ಏರಿಕೆ ಮಾಡಲಾಗಿತ್ತು.
ಪ್ರತಿ ತಿಂಗಳ ಮೊದಲ ದಿನವೇ ತೈಲ ಕಂಪನಿಗಳು ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್‌ಗಳ ದರಗಳಲ್ಲಿ ಏರಿಕೆ, ಇಳಿಕೆ ಮಾಡುತ್ತವೆ. ಫೆಬ್ರವರಿಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 14 ರೂ. ಮತ್ತು ಮಾರ್ಚ್‌ನಲ್ಲಿ 25 ರೂ. ಏರಿಕೆಯಾಗಿದೆ.
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಮಾರ್ಚ್ ತಿಂಗಳ 10ರ ಬಳಿಕ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇಂತಹ ಸಮಯದಲ್ಲಿಯೇ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರದಲ್ಲಿ ಏರಿಕೆ ಕಂಡುಬಂದಿದೆ.
ಈ ಹಿಂದೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಂಗಳಿನಲ್ಲಿ ಎರಡು ಬಾರಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿಗಳ ಬೆಲೆಯನ್ನು ಪರಿಷ್ಕರಣೆ ಮಾಡಲು ಅವಕಾಶವಿತ್ತು. ಆದರೆ ಈಗ ತಿಂಗಳ ಮೊದಲ ದಿನವೇ ದರಗಳನ್ನು ಪರಿಷ್ಕರಣೆ ಮಾಡುತ್ತವೆ.












Click it and Unblock the Notifications