ಬೀದಿ ಬದಿ ಕಾಫಿ ಮಾರಿ ದಿನಕ್ಕೆ 18,000 ರೂ. ಗಳಿಕೆ, ಕಾರ್ಪೋರೇಟ್ ಕೆಲಸಕ್ಕಿಂತ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು!
Coffee Stall Video: ಸಾಮಾನ್ಯವಾಗಿ ಟೀ ಸ್ಟಾಲ್, ಕಾಫಿ ಸ್ಟಾಲ್ ಅಥವಾ ರಸ್ತೆ ಬದಿ ಅಂಗಡಿ ಇದೆ ಎಂದರೆ ಅವರ ಪುಟ್ಟ ಅಂಗಡಿ ನೋಡಿ ಅವರನ್ನು ಪಾಪ ಎನ್ನುವವರೇ ಜಾಸ್ತಿ. ಆದರೆ, ಅಲ್ಲಿ ಆಗುವ ವ್ಯಾಪಾರ, ಲಾಭ ಯಾರಿಗೂ ಗೊತ್ತಾಗಲ್ಲ. ಮುಖ ನೋಡಿ ಮಣೆ ಹಾಕಬಾರದು ಅಂತಾರಲ್ಲ ಹಾಗೆಯೇ ಇದು. ಅಂಗಡಿ ಸಣ್ಣದು ಎಂದ ಕೂಡಲೇ ಅವರ ಬಳಿ ಏನೂ ಇಲ್ಲ ಎಂದಲ್ಲ. ಒಂದು ಕಾಫಿ ಸ್ಟಾಲ್ ಇಟ್ಟುಕೊಂಡೇ ತಿಂಗಳಿಗೆ ಲಕ್ಷ ಲಕ್ಷ ಗಳಿಸಬಹುದು. ಇದನ್ನು ಕಂಟೆಂಟ್ ಕ್ರಿಯೇಟರ್ ದೇವಾಂಶ ತ್ಯಾಗಿ ಎನ್ನುವವರು ಮಾಡಿ ತೋರಿಸಿದ್ದಾರೆ.

Coffee Stall Vide: ಲಕ್ಷಗಳಲ್ಲಿ ಆದಾಯ
ಕಾರ್ಪೊರೇಟ್ ಕಂಪನಿಯಲ್ಲಿ ಒಂದೊಳ್ಳೆ ಪೋಸ್ಟ್‌ನಲ್ಲಿದ್ದರೆ ಅವರಿಗೆ ಲಕ್ಷ ಸಂಬಳ ಇರುವುದು ವಿಶೇಷ ಅಲ್ಲ. ಆದ್ರೆ, ಅದೇ ಕಾರ್ಪೊರೇಟ್ ಕಂಪನಿಯ ಹೊರಗೆ ಕಾಫಿ ಇಟ್ಟುಕೊಂಡವನಿಗೂ ಆದಾಯ ಲಕ್ಷಗಳಲ್ಲಿ ಅಂದರೆ ಸ್ವಲ್ಪ ವಿಶೇಷ. ಇದು ಸುಳ್ಳಲ್ಲ ಅಕ್ಷರಶಃ ಸತ್ಯ. ಈ ಸಣ್ಣ ಕಾಫಿ ಸ್ಟಾಲ್ ಇಟ್ಟುಕೊಂಡೇ ದೊಡ್ಡ ಆದಾಯ ಗಳಿಸಬಹುದು ಎನ್ನುವುದನ್ನು ಕಂಟೆಂಟ್ ಕ್ರಿಯೇಟರ್ ದೇವಾಂಶ ತ್ಯಾಗಿ ನಿರೂಪಿಸಿದ್ದಾರೆ.
ಸಂಜೆ ವಿಪರೀತ ರಶ್ :
ಇವರು ಕಾರ್ಪೊರೇಟ್ ಆಫೀಸಿನ ಹೊರಗೆ ಒಂದು ದಿನದ ಮಟ್ಟಿಗೆ ಒಂದು ಕಾಫಿ (coffee) ಸ್ಟಾಲ್ ಹಾಕಿದ್ದಾರೆ. ಕಾಫಿ ಮಾರುವ ಮೂಲಕ ಒಂದು ದಿನಕ್ಕೆ ಎಷ್ಟು ಸಂಪಾದಿಸಬಹುದು ನೋಡೋಣ ಎನ್ನುವ ಕುತೂಹಲಕ್ಕೆ ಅವರು ಹೀಗೆ ಮಾಡಿದ್ದು. ಬೆಳಗ್ಗೆ ಸ್ಟಾಲ್ ಓಪನ್ ಆಗ್ತಾ ಇದ್ದ ಹಾಗೆಯೇ ನಿಧಾನವಾಗಿ ಒಬ್ಬೊಬ್ಬರೇ ಬರುವುದಕ್ಕೆ ಶುರು ಮಾಡ್ತಾರೆ. ಬೆಳಿಗ್ಗೆ ಹೇಳಿಕೊಳ್ಳುವಂಥ ವ್ಯಾಪಾರ ಏನೂ ಇರಲಿಲ್ಲ. ಆದರೆ ಆಫೀಸ್ ಬ್ರೇಕ್ ಟೈಂ ಮತ್ತು ಸಂಜೆ ರಶ್ ಹೆಚ್ಚಾಗಿತ್ತು. ಒಂದು ಹಂತದಲ್ಲಿ ನಿರೀಕ್ಷೆಗೂ ಮೀರಿ ಜನ ಬರುವುದಕ್ಕೆ ಶುರುವಾದರು. ಕೊನೆಗೆ 450 ಕಪ್ ಕಾಫಿ ವ್ಯಾಪಾರದೊಂದಿಗೆ ಆ ದಿನ ಮುಗಿಯುತ್ತದೆ. ದೇವಾಂಶ ತ್ಯಾಗಿಯ ಈ ಸಣ್ಣ ಪ್ರಯೋಗ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬೆಳಗ್ಗಿನಿಂದಲೇ ಸ್ಟಾಲ್ ಓಪನ್ :
ದೇವಾಂಶ್ ತಮ್ಮ ಪ್ರಯೋಗದ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ (social media) ಶೇರ್ ಮಾಡಿದ್ದಾರೆ. ಈ ವಿಡಿಯೋದ ಪ್ರಕಾರ ಬೆಳಗ್ಗೆಯೇ ಅವರು ಟೇಬಲ್, ಗ್ಯಾಸ್ ಸ್ಟೌವ್, ಹಾಲು, ಇನ್ಸ್ಟೆಂಟ್ ಕಾಫಿ, ಕಪ್ ಎಲ್ಲವನ್ನೂ ರೆಡಿ ಮಾಡಿಕೊಂಡಿದ್ದರು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಅವರ ಸಣ್ಣ ಸ್ಟಾಲ್ ವ್ಯಾಪಾರಕ್ಕೆ ರೆಡಿಯಾಗಿ ನಿಂತಿತ್ತು. ಇನ್ನು ಗ್ರಾಹಕರನ್ನು ಸೆಳೆಯುವ ಸಲುವಾಗಿ ಅವರು ನಾಲ್ಕು ರೀತಿಯ ಬೇರೆ ಬೇರೆ ಕಾಫಿಗಳನ್ನು ಕೂಡಾ ಇಟ್ಟುಕೊಂಡಿದ್ದರು.
ಮೊದಲ ಎರಡು ಗಂಟೆಗಳಲ್ಲಿ 40 ಕಪ್ ಸೇಲ್ :
ಬೆಳಗಿನ ಕಚೇರಿ (office) ವಿರಾಮದ ಸಮಯದಲ್ಲಿ ಕ್ರೌಡ್ ಹೆಚ್ಚಾಗಿತ್ತು. ಅವರ ಪ್ರಕಾರ, ಆರಂಭ ಚೆನ್ನಾಗಿಯೇ ಇತ್ತು. ಮೊದಲ ಎರಡು ಗಂಟೆಗಳಲ್ಲಿ 40 ಕಪ್ ಕಾಫಿ ಮಾರಾಟವಾಗ್ತದೆ. ಮಧ್ಯಾಹ್ನದ ಹೊತ್ತಿಗೆ ವ್ಯಾಪಾರ ಸ್ವಲ್ಪ ಡಲ್ ಆಗುತ್ತದೆ. ಸಂಜೆ ಮತ್ತೆ ರಶ್. ಆದರೆ ಇಡೀ ದಿನ ಗ್ರಾಹಕರು ಬರುತ್ತಲೇ ಇದ್ದರು. ಬೆಳಗ್ಗೆಗೆ ಹೋಲಿಸಿದರೆ ಕಾಫಿಗೆ ಬೇಡಿಕೆ ಹೆಚ್ಚಾದದ್ದು ಸಂಜೆಯ ಹೊತ್ತಿನಲ್ಲಿಯೇ. ಆರ್ಡರ್‌ಗಳು ಹೆಚ್ಚಾಗ್ತದೆ. ದೇವಾಂಶ್ ಕಾಫಿ ಮಾಡೋ ಸ್ಪೀಡ್ ಕೂಡಾ ಡಬಲ್ ಆಗ್ತದೆ. ಒಂದು ಹಂತದಲ್ಲಿ ಅವರಿಗೆ ತಾನೇ ಕಾಫೀ ಮೆಷಿನ್ ಎನ್ನುವ ಹಾಗೆ ಅನ್ನಿಸುತ್ತದೆಯಂತೆ.
ಒಂದೇ ದಿನಕ್ಕೆ 18,000 ರೂ. ಗಳಿಕೆ :
ವ್ಯಾಪಾರ ಇಷ್ಟು ಭರ್ಜರಿಯಾಗಿರುತ್ತದೆ ಎನ್ನುವ ಯೋಚನೆ ದೇವಾಂಶ್‌ಗೆ ಇರಲ್ಲ. ಅವರು ಒಂದು ಅಂದಾಜಿನ ಮೇಲೆ ಸಾಮಗ್ರಿ ತೆಗೆದುಕೊಂಡು ಬಂದಿದ್ದರು. ಹಾಗಾಗಿ ಸಂಜೆ ಕಾಫಿಗೆ ಬೇಡಿಕೆ ಇದ್ದರೂ ಸ್ಟಾಕ್ ಖಾಲಿಯಾಗಿತ್ತು. ಕೊನೆಗೆ ಅವರು ಒಟ್ಟು 450 ಕಪ್ ಕಾಫಿ ಮಾರಿದ್ದಾರಂತೆ. ಒಂದು ಕಪ್ ಕಾಫಿಗೆ 40 ರೂ. ಯಂತೆ 450 ಕಪ್‌ನಿಂದ 18,000 ರೂ ಗಳಿಸ್ತಾರೆ. ಇದೇ ಪೂರ್ತಿ ಲಾಭವಲ್ಲ, ಇದರಲ್ಲಿ ಹಾಲು, ಕಾಫಿ, ಕಪ್, ಗ್ಯಾಸ್ ಎಲ್ಲಾ ವೆಚ್ಚವೂ ಸೇರಿದೆ.
ಪ್ರತಿದಿನ ಇಷ್ಟೊಂದು ಹಣ ಗಳಿಸಲು ಸಾಧ್ಯವೇ ?
ದೇವಾಂಶ್ ಅವರ ಈ ಪ್ರಯೋಗ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಕೆಲವರು ಇದನ್ನು ಒಳ್ಳೆಯ ಬ್ಯುಸಿನೆಸ್ ಐಡಿಯಾ ಎಂದು ಹೇಳಿದರೆ, ಇನ್ನು ಕೆಲವರು ದಿನಕ್ಕೆ 450 ಕಪ್ ಕಾಫಿ ಮಾರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕೆಲವು ಬಳಕೆದಾರರು ಒಂದೇ ದಿನಕ್ಕೆ ಕಾರ್ಪೊರೇಟ್ ಉದ್ಯೋಗಿಗಳ ಬೆಂಬಲ ಪಡೆಯುವುದಕ್ಕೂ ಪರ್ಮನೆಂಟ್ ಗ್ರಾಹಕರಾಗುವುದಕ್ಕೂ ವ್ಯತ್ಯಾಸವಿದೆ, ಎಂದೂ ಬ್ಯುಸಿನೆಸ್ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಒಂದು ದಿನ ಇಷ್ಟು ವ್ಯಾಪಾರ ಆಯಿತು ಅಂದ ಮಾತ್ರಕ್ಕೆ ದಿನಾ ಹೀಗೆಯೇ ವ್ಯಾಪಾರ ಇರುತ್ತದೆ ಎಂದಲ್ಲ ಎನ್ನುವುದು ಇನ್ನು ಕೆಲವರ ವಾದ.
ಸರಿಯಾದ ಸ್ಥಳ, ಸರಿಯಾದ ಗ್ರಾಹಕರು ಮತ್ತು ಸರಿಯಾದ ಬೆಲೆ ಸಣ್ಣ ವ್ಯವಹಾರವನ್ನು ಎಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎನ್ನುವುದನ್ನು ತೋರಿಸುತ್ತದೆ. ಆದರೆ ದಿನಕ್ಕೆ 18,000 ರೂಪಾಯಿ ಸಂಪಾದನೆ ದಿನಾ ಆಗುತ್ತದೆ ಅಂತ ಅಂದುಕೊಳ್ಳುವುದು ಕೂಡಾ ಸರಿಯಲ್ಲ.


Click it and Unblock the Notifications
