Cauvery Water: ಕಾವೇರಿ ನೀರು ಬಿಡುವಂತೆ ತಮಿಳುನಾಡು ಮತ್ತೆ ಖ್ಯಾತೆ: ಸಿದ್ದರಾಮಯ್ಯ ಹೇಳಿದ್ದೇನು?
ಮೈಸೂರು, ಆಗಸ್ಟ್ 12: ತಮಿಳುನಾಡು ಕಾವೇರಿ ನೀರು ಬಿಡುವಂತೆ ಮತ್ತೆ ಖ್ಯಾತೆ ಆರಂಭಿಸಿದೆ.ಈ ಬಾರಿ ನೀರಿಕ್ಷಿತ ಮಟ್ಟದ ಮಳೆಯಾಗಿಲ್ಲ, ಹೀಗಾಗಿ ಸಂಕಷ್ಟದ ಸೂತ್ರವನ್ನು ಎರೆಡು ರಾಜ್ಯಗಳು ಪಾಲಿಸಬೇಕಿದೆ. ಆದರೂ ತಮಿಳುನಾಡು ನೀರು ಬಿಡುವಂತೆ ಖ್ಯಾತೆ ಶುರು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಈ ಕುರಿತು ಶನಿವಾರ ಮೈಸೂರಿನಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 40% ಕಮಿಷನ್ ಬಗ್ಗೆ ತನಿಖೆಯಾಗದೇ ಬಿಲ್ ಬಿಡುಗಡೆ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಇದೀಗ ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದೇ ಇರುವವರಿಗೆ ಬಿಲ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿರುವವರಿಗೆ ಆ ಬಗ್ಗೆ ಭಯ ಇರುತ್ತದೆ. ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯವರಿಗೆ ಏನು ವಿಚಾರ ಇಲ್ಲದೇ ಇರುವುದರಿಂದ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

40% ಕಮಿಷನ್ ಗಾಗಿಯೇ ಜನರು ಅವರನ್ನು ತಿರಸ್ಕರಿಸಿದ್ದಾರೆ. ಅಂದು ನಾವು ಮಾಡಿರುವ ಆರೋಪವನ್ನು ಈಗ ಸಾಬೀತು ಮಾಡಬೇಕಿದೆ, ಇದೇ ಕಾರಣದಿಂದ ನಾಲ್ಕು ಟೀಂ ತನಿಖೆ ಮಾಡುತ್ತಿವೆ.
ನಡೆದಿರುವ ಕಾಮಗಾರಿಗಳೆಲ್ಲಾ ಮೂರು ವರ್ಷದ ಹಿಂದೆ ಮುಕ್ತಾಯವಾಗಿವೆ. ಈಗ ಬಿಲ್ ಗಾಗಿ ಆತುರ ಪಟ್ಟರೆ ಹೇಗೆ ಎಂದು ಕೇಳಿದರು.
ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಬಿದ್ದ ಪ್ರಕರಣದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. 40% ಗಿಂತ ಕಡಿಮೆ ಗಾಯವಾಗಿರುವವರಿಗೆ ತೊಂದರೆ ಇಲ್ಲ. ಒಬ್ಬರಿಗೆ 40% ಗಿಂತ ಹೆಚ್ಚು ಗಾಯವಾಗಿದೆ. ಎಲ್ಲಾ ಗಾಯಾಳುಗಳಿಗೂ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಮಾತನಾಡಿ, ಇದಕ್ಕಾಗಿ ಒಂದು ಸಮಿತಿ ಮಾಡಿದ್ದೇವೆ. ಶಾಸಕರಿಗೂ ಇದರಲ್ಲಿ ಸ್ಥಾನ ಕೊಡಬೇಕಿದೆ, ಯಾವ ಅನುಪಾತದಲ್ಲಿ ಇದನ್ನು ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ವಿಚಾರವಾಗಿ ಮಾತನಾಡಿ, ವಾರ್ಡ್‌ಗಳ ಪುನರ್ ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಗಡುವು ನೀಡಿದೆ. ಆ ಗಡುವಿನೊಳಗೆ ವರದಿಗಳು ಸಿದ್ಧವಾಗಲಿವೆ, ಅದನ್ನು ಕೋರ್ಟಿಗೆ ನಾವು ನೀಡುತ್ತೇವೆ. ಚುನಾವಣೆ ವಿಚಾರದಲ್ಲಿ ನಾವು ಯಾವುತ್ತೂ ಹಿಂದೆ ಬಿದ್ದಿಲ್ಲ, ಬಿಜೆಪಿಯವರು ಚುನಾವಣೆಗಳನ್ನು ಮುಂದೂಡುತ್ತಿದ್ದರು. ನಾವು ಆ ರೀತಿ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ ಎಂದು ಹೇಳಿದರು.ಕೇಂದ್ರ ಸರ್ಕಾರದಿಂದ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿ, ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ನಮ್ಮ ವಿರೋಧವಿದೆ. ಕೇರಳದಲ್ಲೂ ಈಗಾಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ನಾವೂ ಸಹ ಇದಕ್ಕೆ ವಿರೋಧ ಇದ್ದೇವೆ ಎಂದು ಹೇಳಿದರು.
ಹುಟ್ಟಹಬ್ಬ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು. ಒಂದು ನನ್ನ ಮೇಷ್ಟ್ರು ಬರೆಸಿರೋದು.ಇನ್ನೊಂದು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರೆಸಿರೋದು. ಹೀಗಾಗಿ ಎರಡೂ ದಿನಾಂಕಗಳು ತಪ್ಪು. ನನ್ನ ಜನ್ಮ ದಿನಾಂಕ ನನಗೇ ಸರಿಯಾಗಿ ಗೊತ್ತಿಲ್ಲ, ಹೀಗಾಗಿ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ತಿಳಿಸಿದರು.
ಸಿಜೆ ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕ ವಿಚಾರವಾಗಿ ಮಾತನಾಡಿ, ಇದೊಂದು ಷಡ್ಯಂತ್ರ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟು ತಮಗೆ ಬೇಕಾದವರನ್ನು ಚುನಾವಣಾ ಆಯುಕ್ತರನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. ಐಪಿಸಿ ಸೇರಿದಂತೆ ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಐಪಿಸಿ 1861ರಲ್ಲಿ ರಚನೆಯಾದ ಕಾನೂನು. ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.
ಗೃಹ ಲಕ್ಷ್ಮಿ ಯೋಜನೆ ಜಾರಿ ವಿಚಾರವಾಗಿ ಮಾತನಾಡಿ, ನೋಂದಣಿ ಮುಗಿದ ಮೇಲೆ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. ಗೃಹ ಲಕ್ಷ್ಮಿ ಯೋಜನೆಗೆ 1.33 ಕೋಟಿ ಜನರ ನೋಂದಣಿ ಆಗಬೇಕು. ಇದುವರೆಗೆ 1.6 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿ ಬಾಕಿ ಇದೆ, ನೋಂದಣಿ ಪ್ರಕ್ರಿಯೆ ಮುಗಿಯಬೇಕು. ಆಗಸ್ಟ್ ಅಂತ್ಯದಲ್ಲೇ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತೇವೆ. ಈಗಾಗಲೇ ದಿನಾಂಕ ಮುಂದೂಡಿಕೆ ಆಗಿಲ್ಲ. ರಾಹುಲ್ ಗಾಂಧಿ ಅವರ ಸಮಯ ಕೇಳಿದ್ದೇವೆ, ಇನ್ನೂ ಟೈಮ್ ಕೊಟ್ಟಿಲ್ಲ ಎಂದು ಹೇಳಿದರು.












Click it and Unblock the Notifications