Chandrayaan-3: ‘ಚಂದ್ರಯಾನ-3’ ಬಗ್ಗೆ ಚೀನಾ ವಿಜ್ಞಾನಿ ಹೇಳಿದ್ದೇನು?
ಚೀನಾ ಹೊಸ ಕಿರಿಕ್ ತೆಗೆದಂತೆ ಕಾಣ್ತಿದೆ. ಚೀನಾ ಮೂಲದ ವಿಜ್ಞಾನಿಯೊಬ್ಬರು ಭಾರತದ 'ಚಂದ್ರಯಾನ-3' ಬಗ್ಗೆ ನೀಡಿರುವ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ. ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿತ್ತು. ಈ ಮೂಲಕ ಜಗತ್ತಿನ ಯಾವುದೇ ದೇಶ ಕೂಡ ಮಾಡಲಾಗದ ಸಾಧನೆ ಮಾಡಿತ್ತು. ಆದರೆ ಈಗ ಚೀನಾದ ವಿಜ್ಞಾನಿ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಹೌದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಾವುದೇ ದೇಶ ಈವರೆಗೆ ಲ್ಯಾಂಡರ್ ಇಳಿಸಿರಲಿಲ್ಲ. ಭಾರತವೇ ಈ ಸಾಧನೆ ಮಾಡಿದ ಮೊದಲ ದೇಶ. ಆದರೆ ಈ ಮಾತೇ ಸುಳ್ಳು ಎಂಬಂತೆ ಈಗ ಚೀನಾ ಮೂಲದ ವಿಜ್ಞಾನಿ ಮಾತನಾಡಿದ್ದಾರೆ. ಪದೇ ಪದೆ ಗಡಿ ವಿಚಾರಕ್ಕೆ ಚೀನಾ ಕಿರಿಕ್ ಮಾಡೋದು ಮಾಮೂಲಿ. ಆದರೆ ಈಗ ಬಾಹ್ಯಾಕಾಶ ವಿಜ್ಞಾನದ ವಿಚಾರದಲ್ಲೂ ಚೀನಾ ಮೂಲದ ವಿಜ್ಞಾನಿ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಚೀನಾದ ವಿಜ್ಞಾನಿ ಇಸ್ರೋ ಸಾಧನೆ ಬಗ್ಗೆ ನೀಡಿರುವ ಹೇಳಿಕೆ ಏನು?

ದಕ್ಷಿಣ ಧ್ರುವದಲ್ಲಿ ಇಳಿಸಿದ್ದು ಸುಳ್ಳಾ?
ಇನ್ನು ಚೀನಾ ವಿಜ್ಞಾನಿ ಪ್ರಕಾರ ಇಸ್ರೋ 'ಚಂದ್ರಯಾನ-3' ಯೋಜನೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಿಂದ 619 ಕಿಲೋ ಮೀಟರ್ ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ಚಂದ್ರನ ದಕ್ಷಿಣ ಧ್ರುವ ಎಂದು ಕರೆಯಲು ಆಗುವುದಿಲ್ಲ ಎಂದಿದ್ದಾರೆ. ಚೀನಾ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಝಿಯಾನ್ ನೀಡಿರುವ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಮೊದಲೇ ಗಡಿ ವಿವಾದ ಸೃಷ್ಟಿಯಾಗಿರುವ ಭಾರತ & ಚೀನಾದ ನಡುವೆ ಮತ್ತೊಂದು ವಿವಾದ ಎಂಟ್ರಿಯಾಗಿದೆ.
ಇನ್ನು ಚೀನಾ ವಿಜ್ಞಾನ ಅಕಾಡೆಮಿ ಸದಸ್ಯ ಒಯಾಂಗ್ ಸೈನ್ಸ್ ಟೈಮ್ಸ್‌ಗೆ ನೀಡಿದ ಸಂದರ್ಶನ ವೇಳೆ ಈ ಮಾತು ಆಡಿದ್ದಾರೆ. 'ಚಂದ್ರಯಾನ-3' ಲ್ಯಾಂಡರ್ ಇಳಿದಿರುವ ಸ್ಥಳ ಚಂದ್ರನ ದಕ್ಷಿಣ ಧ್ರುವ ಅಲ್ಲ. ಆದರೆ ಅದು ಅಂಟಾರ್ಟಿಕ್ ಪೊಲಾರ್ ಪ್ರದೇಶ ಎಂದು ಕರೆಯಲಾಗುತ್ತೆ ಎಂದು ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಹೇಳಿಕೆಯ ಬೆನ್ನಲ್ಲೇ ಹೊಸ ವಿವಾದದ ಕಿಡಿ ಕೂಡ ಸಿಡಿದಿದೆ.

ಚೀನಾ ವಿಜ್ಞಾನಿಯ ವಿವರಣೆ ಏನು?
ಇನ್ನು ಒಯಾಂಗ್ ಝಿಯಾನ್ ನೀಡಿರುವ ವೈಜ್ಞಾನಿಕ ವಿವರಣೆ ಪ್ರಕಾರ, ಚಂದ್ರನ ದಕ್ಷಿಣ ಭಾಗದ 69 ಡಿಗ್ರಿ ಅಕ್ಷಾಂಶದಲ್ಲಿ ಭಾರತದ 'ಚಂದ್ರಯಾನ-3' ಲ್ಯಾಂಡರ್ ಇಳಿದಿದೆ. ಆದರೆ ಈ ಪ್ರದೇಶ ಚಂದ್ರನ ದಕ್ಷಿಣದ ಒಂದು ಭಾಗ, ದಕ್ಷಿಣ ಧ್ರುವ ಅಲ್ಲ. ಚಂದ್ರನ ದಕ್ಷಿಣ ಧ್ರುವ 88.5 ರಿಂದ 90 ಡಿಗ್ರಿ ಅಕ್ಷಾಂಶದಲ್ಲಿದೆ ಎಂದಿದ್ದಾರೆ. ಇನ್ನು ಭೂಮಿ ತಿರುಗುವ ಅಕ್ಷಾಂಶವು ಸೂರ್ಯನೆಡೆಗೆ 23.5 ಡಿಗ್ರಿ ವಾಲಿದೆ. ಹೀಗಾಗಿ ದಕ್ಷಿಣ ಧ್ರುವ 66.5ರಿಂದ 90 ಡಿಗ್ರಿವರೆಗೆ ಇದೆ. ಆದರೆ ಚಂದ್ರ ಕೇವಲ 1.5 ಡಿಗ್ರಿ ವಾಲಿದ ಕಾರಣ ಚಂದ್ರನ ದಕ್ಷಿಣ ಧ್ರುವದ ಪ್ರದೇಶ ಚಿಕ್ಕದು ಎಂದು ವಾದಿಸಿದ್ದಾರೆ ಚೀನಾ ವಿಜ್ಞಾನಿ.
ನಾಸಾ ನೀಡುವ ವಿವರಣೆ ಏನು?
ಚೀನಾ ವಿಜ್ಞಾನಿ ವಿವರಣೆ ಒಂದು ಕಡೆಯಾದರೆ, ಅಮೆರಿಕದ ನಾಸಾ ಹೇಳುವಂತೆ ಚಂದ್ರನ ದಕ್ಷಿಣ ಧ್ರುವ 80ರಿಂದ 90 ಡಿಗ್ರಿ ದಕ್ಷಿಣದಲ್ಲಿ ಇದೆಯಂತೆ. ಒಟ್ನಲ್ಲಿ ಚೀನಾ ವಿಜ್ಞಾನಿ ಈಗ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಇದೆಲ್ಲಾ ಏನೇ ಇರಲಿ ಭಾರತದ ಸಾಧನೆ ಮಾಡಲು ಜಗತ್ತಿನ ಯಾವುದೇ ದೇಶದ ಕೈಯಲ್ಲೂ ಆಗಲ್ಲ ಎಂಬುದು ಮಾತ್ರ ನಿಶ್ಚಿತ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಭಾರತ ಇದೀಗ ಚಂದ್ರನ ಮೇಲೆ ಮಾಡಿರುವ ಸಾಧನೆಯು ಬಾಹ್ಯಾಕಾಶ ಲೋಕದಲ್ಲಿ ಅಚ್ಚಳಿಯದೆ ಉಳಿಯಲಿದೆ. ಇದೀಗ ನಿದ್ದೆಯಲ್ಲಿರುವ ಭಾರತದ ಲ್ಯಾಂಡರ್ ಮತ್ತು ರೋವರ್ ಎದ್ದೇಳಿಸುವ ಕೆಲಸ ಕೂಡ ಸಾಗಿದೆ. ಮುಂದೆ ಇದು ಸಾಧ್ಯ ಆಗಿದ್ದೇ ನಿಜವಾದರೆ ಭಾರತ ಮತ್ತೊಂದು ಮೈಲಿಗಲ್ಲು ತಲುಪಲಿದೆ.












Click it and Unblock the Notifications