Chennai Cyclone Michaung: ಚೆನ್ನೈ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ!
ಚೆನ್ನೈ ಡಿಸೆಂಬರ್ 3: ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳು ಸೇರಿದಂತೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
IMD ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಈ ನಾಲ್ಕು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಚೆನ್ನೈನ ನುಂಗಂಬಾಕ್ಕಂ ಪ್ರದೇಶದಲ್ಲಿ 5.88 ಸೆಂ.ಮೀ ಮಳೆಯಾಗಿದ್ದು, ಮೀನಂಬಾಕ್ಕಂನಲ್ಲಿ 7.12 ಸೆಂ.ಮೀ ಮಳೆಯಾಗಿದೆ ಎಂದು IMD ಡೇಟಾ ತೋರಿಸುತ್ತದೆ. ಶುಕ್ರವಾರದಂದು ನೈಋತ್ಯ ಬಂಗಾಳ ಕೊಲ್ಲಿಗೆ ಹೊಂದಿಕೊಂಡಂತೆ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದಿಂದಾಗಿ ನಗರದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ.
ಡಿಸೆಂಬರ್ 4ರ ಸಂಜೆಯ ಸುಮಾರಿಗೆ ಸೈಕ್ಲೋನಿಕ್ ಚಂಡಮಾರುತ ಆಂಧ್ರಪ್ರದೇಶದ ಚೆನ್ನೈ ಮತ್ತು ಮಚಲಿಪಟ್ಟಣಂ ನಡುವೆ ದಕ್ಷಿಣ ಆಂಧ್ರಪ್ರದೇಶ ಮತ್ತು ಪಕ್ಕದ ಉತ್ತರ ತಮಿಳುನಾಡು ಕರಾವಳಿಯನ್ನು ದಾಟಲಿದೆ ಎಂದು IMD ಮುನ್ಸೂಚನೆ ನೀಡಿದೆ.
ಹೆಚ್ಚುವರಿಯಾಗಿ ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಶನಿವಾರ ಬೆಳಿಗ್ಗೆಯಿಂದ ತಿರುವಳ್ಳೂರಿನ ವಿವಿಧ ಸ್ಥಳಗಳಲ್ಲಿ, ವಿಶೇಷವಾಗಿ ಪಳವೆರ್ಕಾಡು, ಪೊನ್ನೇರಿ, ಗುಮ್ಮಿಡಿಪೂಂಡಿ, ಪೆರಿಯಪಾಳ್ಯಂ, ಶೋಲವರಂ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದಿದೆ ಎಂದು ವರದಿ ಮಾಡಿದೆ.
ಹೀಗಾಗಿ ತಗ್ಗು ಪ್ರದೇಶಗಳು ಹಾಗೂ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ತಿರುವಳ್ಳೂರು ಕಲೆಕ್ಟರ್ ಪ್ರಭುಶಂಕರ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕದಲ್ಲಿ ಮಳೆ:-
ಇಂದು ಬೆಳಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಕಳೆದ ದಿನವೂ ರಾಜ್ಯದ ಹಲವೆಡೆ ಮಳೆಯಾಗಿದ್ದು ಬೆಂಗಳೂರಿನಲ್ಲಿ ಇಂದು ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಇದು ಸಂಜೆವರೆಗೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಇಂದು ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲೂ ಅಧಿಕ ಮಳೆಯಾಗಲಿದೆ. ಇನ್ನೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆ ಸಾಧ್ಯತೆ ಇದೆ. ಹಿಂಗಾರು ಮಳೆ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆದ್ರೂ ಈ ವೇಳೆಯ ಭಾರೀ ಮಳೆ ಬರಬಹುದು ಎಂದು ಸೂಚನೆ ನೀಡಿದೆ ಹವಾಮಾನ ಇಲಾಖೆ.












Click it and Unblock the Notifications