ಒಬಾಮಾ ಭೇಟಿ : ಬಾಂಬ್ ಬೆದರಿಕೆ ಒಡ್ಡಿದ್ದು ಯಾರು?
ಥಾಣೆ, ಜ. 22 : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಭೇಟಿಗೆ ವೇದಿಕೆ ಸಿದ್ಧವಾಗಿದ್ದು ರಾಸಾಯನಿಕ ಬಾಂಬ್ ಬಳಕೆ ಆತಂಕ ಎದುರಾಗಿದೆ. ಥಾಣೆ ಮೂಲದ 'ಮ್ಯಾನ್ ಗೆಟ್ ಗ್ಯಾಸ್' ಹ್ಯಾಂಡಲ್ ನ ಟ್ವಿಟ್ಟರ್ ಅಕೌಂಟವೊಂದು ರಾಸಾಯನಿಕ ಬಾಂಬ್ ಬಳಕೆ ಮಾಡುತ್ತೇನೆ ಎಂದು ಹೇಳಿದ್ದು ಕೇಂದ್ರ ಗುಪ್ತಚರದಳ ಆರೋಪಿಗಳ ಬೆನ್ನು ಹತ್ತಿದೆ.
ಈ ಟ್ವೀಟ್ ನಿಂದ ಎಚ್ಚೆತ್ತುಕೊಂಡಿರುವ ಭಾರತೀಯ ಗುಪ್ತಚರದಳ ಮತ್ತು ಪೊಲೀಸರು ಮುಂಬೈ ವಿಮಾಣ ನಿಲ್ದಾಣ ಸೇರಿದಂತೆ ಎಲ್ಲೆಡೆ ಭದ್ರತೆ ಹೆಚ್ಚಿಸಿದ್ದಾರೆ. ಥಾಣೆಯಿಂದ ತೆರಳಿದ್ದ ನಾಲ್ವರು ಯುವಕರು ಉಗ್ರಗಾಮಿ ಸಂಘಟನೆ ಐಸಿಸ್ ಸೇರಿ ಹಿಂದಿರುಗಿದ್ದರು. ಹಾಗಾಗಿ ಇದನ್ನು ಉಗ್ರಗಾಮಿ ಸಂಘಟನೆ ಸೇರಿದ್ದ ಯುವಕನೊಬ್ಬ ಬೇಕಂತಲೇ ಮಾಡಿರುವ ಕಿಡಿಗೇಡಿತನ ಎಂದು ಹೇಳಲಾಗಿದೆ.[ಅಮೆರಿಕನ್ನರದ್ದು ರಕ್ತ, ಭಾರತೀಯರದ್ದು ಟೊಮ್ಯಾಟೋ ಸಾಸಾ?]

ಟ್ವೀಟ್ ನಲ್ಲಿ ಏನಿದೆ?
ಮುಸ್ಲಿಮರ ವೈರಿ ಭಾರತಕ್ಕೆ ಬರುತ್ತಿದ್ದಾನೆ. ಭಾರತೀಯ ಮುಸ್ಲಿಮರು ರಾಸಾಯನಿಕ ಬಾಂಬ್ ಬಳಕೆ ಮಾಡಬಹುದು. ಅಲ್ಲದೇ ವೈರಿಯ ಅಂತ್ಯಕ್ಕೆ ಇದೊಂದು ಉತ್ತಮ ಉಪಾಯ ಎಂದು ಟ್ವೀಟ್ ಮಾಡಲಾಗಿದೆ.
ಹ್ಯಾಂಡಲ್ ಮೇಲೆ ಕಣ್ಣು
ಟ್ವೀಟ್ ಮಾಡಿರುವ 'ಮ್ಯಾನ್ ಗೆಟ್ ಗ್ಯಾಸ್' ಮೂಲ ಯಾವುದು ಎಂದು ಕಂಡುಹಿಡಿಯಲಾಗುತ್ತಿದೆ. ಉಗ್ರಗಾಮಿ ಸಂಘಟನೆಯಿಂದ ಹಿಂದಿರುಗಿದವ ಮಾಡಿದ ಕುತಂತ್ರ ಇದು ಎಂದು ಶಂಕಿಸಲಾಗಿದೆ. ಟ್ವೀಟ್ ಮೂಲವನ್ನು ಪತ್ತೆ ಹಚ್ಚಲಾಗುವುದು ಎಂದು ಗುಪ್ತವರ ದಳದ ಅಧಿಕಾರಿಗಳು ತಿಳಿಸಿದ್ದಾರೆ.[ಐಎಸ್ಐಎಸ್ ಸರ್ವನಾಶಕ್ಕೆ ಸಿದ್ಧರಾಗಿ: ಒಬಾಮಾ ಕರೆ]
ಕಿಡಿಗೇಡಿತನವೇ?
ಮುಂಬೈ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಂತೆ ಇದು ಸಹ ಕಿಡಿಗೇಡಿತನವೇ? ಎಂಬ ಪ್ರಶ್ನೆಯೂ ಎದುರಾಗಿದೆ.ಇಲಾಖೆಯ ಗಮನವನ್ನು ಬೇರೆಡೆ ಸೆಳೆಯಲು ಇಂಥ ಪ್ರಯತ್ನ ಮಾಡಲಾಗುತ್ತಿದೆ. ಉಗ್ರಗಾಮಿಗಳು ಸಾಮಾನ್ಯವಾಗಿ ತಮ್ಮ ಯೋಜನೆಗಳನ್ನು ಸಾರ್ವಜನಿಕ ವಲಯದಲ್ಲಿ ಯಾವ ಕಾರಣಕ್ಕೂ ಹರಿಯಬಿಡುವುದಿಲ್ಲ. ಆದರೆ, ಇಂಥ ವದಂತಿಗಳನ್ನು ನಿರ್ಲಕ್ಷಿಸಲೂ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣ್ಯರು ಬರುವಾಗ ಇದು ಸಾಮಾನ್ಯ
ಭಾರತಕ್ಕೆ ಗಣ್ಯರು ಭೇಟಿ ನೀಡುವಾಗ ಇಂಥ ಬೆದರಿಕೆಗಳನ್ನು ಹಾಕಲಾಗುತ್ತದೆ. ಈಗ ಸಾಮಾಜಿಕ ಜಾಲತಾಣಗಳು ಅವುಗಳಿಗೊಂದು ವೇದಿಕೆ ಒದಗಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟುಹಾಕುವ ಮೂಲಕ ನಾಗರಿಕರ ನೆಮ್ಮದಿ ಹಾಳು ಮಾಡುವುದೇ ಉಗ್ರರ ಉದ್ದೇಶ ಎಂದು ಗುಪ್ತಚರದಳದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications