Chandrayaan-3: ‘ಚಂದ್ರಯಾನ-3’ ಈಗ ಎಲ್ಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ!
ಬಾಹ್ಯಾಕಾಶ ಲೋಕದಲ್ಲಿ ಮಿಂಚುತ್ತಿರುವ, ಭಾರತ ಕೈಗೊಂಡ ಮಹತ್ವದ 'ಚಂದ್ರಯಾನ-3' ಯೋಜನೆ ಇನ್ನೇನು ಅಂತಿಮ ಘಟ್ಟ ಪ್ರವೇಶಿಸುತ್ತಿದೆ. ಅದರಲ್ಲೂ ಚಂದ್ರನ ಮೇಲೆ ರೋವರ್ ಇಳಿಸಿ, ಹೊಸ ಇತಿಹಾಸ ಬರೆಯಲು 'ಇಸ್ರೋ' ಸಜ್ಜಾಗಿದೆ. ಹಾಗಾದರೆ ಈಗ ಚಂದ್ರಯಾನ-3 ನೌಕೆ ಎಲ್ಲಿದೆ? ಬಾಹ್ಯಾಕಾಶದಲ್ಲಿ ಭಾರತದ ನೌಕೆ ಭೂಮಿಯಿಂದ ಎಷ್ಟು ದೂರ ಹಾರುತ್ತಿದೆ? ಬನ್ನಿ ತಿಳಿಯೋಣ.
'ಚಂದ್ರಯಾನ-3' ಯೋಜನೆ ಭಾರತಕ್ಕೆ ಅಥವಾ ಭಾರತೀಯರಿಗೆ ಮಾತ್ರ ಸೀಮಿತವಾಗಿಲ್ಲ. ಈ ಯೋಜನೆ ಇಡೀ ಮನುಕುಲಕ್ಕೆ ಒಳಿತನ್ನ ಮಾಡಲಿದೆ. ಹೀಗಾಗಿಯೇ ಚಂದ್ರಯಾನ-3 ಕುರಿತಾಗಿ ಇಡೀ ಜಗತ್ತು ಕುತೂಹಲ ಹೊಂದಿದೆ. ಹೀಗಾಗಿ ಪೋಲೆಂಡ್‌ನ ಅತ್ಯಾಧುನಿಕ ದೂರದರ್ಶಕದ ಸಹಾಯದಿಂದ ಚಂದ್ರಯಾನ-3 ನೌಕೆಯ ಸಂಚಾರವನ್ನು ವೀಕ್ಷಿಸಲಾಗಿದೆ. ಹೀಗೆ ಟೆಲಿಸ್ಕೋಪ್ ಮೂಲಕ ನೋಡಿದಾಗ ಅಚ್ಚರಿಯೊಂದು ಬಯಲಾಗಿದೆ. ಜಗತ್ತಿನಾದ್ಯಂತ ಆ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಭಾರತ ಉಡಾಯಿಸಿದ ಚಂದ್ರನ ಬಾಹ್ಯಾಕಾಶ ನೌಕೆ ಕ್ಷಣಕ್ಷಣಕ್ಕೂ ಹೊಸ ಹೊಸ ಸವಾಲು ಎದುರಿಸುತ್ತಾ ಮುನ್ನುಗ್ಗುತ್ತಿದೆ. ಆ ವಿಡಿಯೋ ಇಲ್ಲಿದೆ ಮುಂದೆ ಓದಿ.

ಏನಿದು ಹೆಜ್ಜೆ ಹೆಜ್ಜೆಗೂ ಅಪಾಯ?
ಹೌದು, ಬಾಹ್ಯಾಕಾಶ ಪಯಣ ಅಂದರೆ ಹೀಗೆ ಇರುತ್ತದೆ. ಅಲ್ಲಿ ಕ್ಷಣಕ್ಷಣಕ್ಕೂ ಅಪಾಯ ಇದ್ದೇ ಇರುತ್ತದೆ. ಯಾವ ಕ್ಷಣದಲ್ಲಿ ಎಲ್ಲಿಂದ ಯಾವ ಕ್ಷುದ್ರಗ್ರಹ ಅಥವಾ ಧೂಮಕೇತುಗಳು ಬಂದು ಬಡಿಯುತ್ತವೋ ಗೊತ್ತಿಲ್ಲ. ಆದರೆ ಇದೆಲ್ಲವನ್ನೂ ಅಂದಾಜು ಮಾಡಿಯೇ ಬಾಹ್ಯಾಕಾಶ ನೌಕೆ ಮುನ್ನುಗ್ಗಬೇಕು. ಒಂದು ಕ್ಷಣದಲ್ಲಿ ಎದುರಾಗುವ ಎಡವಟ್ಟು, ಹತ್ತಾರು ವರ್ಷದ ಶ್ರಮವನ್ನೇ ಹಾಳು ಮಾಡುತ್ತದೆ. ಇದೀಗ ಭಾರತದ 'ಚಂದ್ರಯಾನ-3' ನೌಕೆ ಕೂಡ ಆ ರೀತಿಯ ಸವಾಲು ಎದುರಿಸುತ್ತಾ ಮುನ್ನುಗ್ಗಿದೆ. ಪೋಲೆಂಡ್‌ನ ಅತ್ಯಾಧುನಿಕ ದೂರದರ್ಶಕದಲ್ಲಿ ಸೆರೆ ಹಿಡಿದಿರುವ ವಿಡಿಯೋದಲ್ಲಿ, ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸಣ್ಣ ಚುಕ್ಕೆಯಂತೆ ಮುಂದೆ ನುಗ್ಗುತ್ತಿರುವುದು ಕಂಡು ಬರುತ್ತದೆ.
We're thrilled to see #Chandrayan3 (@isro) observed by @astro_agn at ROTUZ (Panoptes-4) telescope (J. Gil Institute of Astronomy University of Zielona Góra), operated by @sybilla_tech . Trajectory via @coastal8049 with STRF by @cgbassa and members of the @SatNOGS . Godspeed! pic.twitter.com/8ifW94lOJQ
— Sybilla Technologies (@sybilla_tech) July 25, 2023
ಈಗ ಎಲ್ಲಿದೆ 'ಚಂದ್ರಯಾನ-3' ನೌಕೆ?
'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಇದೀಗ 1,27,609 ಕಿಮೀ x 228 ಕಿಮೀ ಕಕ್ಷೆ ತಲುಪಿದೆ. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಇದೀಗ ಬಾಹ್ಯಾಕಾಶ ನೌಕೆ ಕಕ್ಷೆ ಏರಿಸುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಮುಂದಿನ ಫೈರಿಂಗ್, ಟ್ರಾನ್ಸ್‌ಲೂನಾರ್ ಇಂಜೆಕ್ಷನ್ ಆಗಸ್ಟ್ 1 ರಂದು ಮಧ್ಯರಾತ್ರಿ 12 ಹಾಗೂ ಬೆಳಗ್ಗೆ 1 ಗಂಟೆಯ ನಡುವೆ ನಡೆಸಲು ಯೋಜಿಸಲಾಗಿದೆ.

ಆಗಸ್ಟ್ 23ರಂದು ನಡೆಯಲಿದೆ ಅಂತಿಮ ಆಟ!
ಬಾಹ್ಯಾಕಾಶ ಲೋಕದಲ್ಲಿ ಭಾರತದ ಹೆಸರು ರಾರಾಜಿಸಿದೆ. ಅದ್ರಲ್ಲೂ ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಹಲವು ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗುತ್ತಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಇದೇ ಕಾರಣಕ್ಕೆ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿತ್ತು ಭಾರತ. ಬಾಹ್ಯಾಕಾಶ ನೌಕೆ ಚಂದ್ರನಿಗೆ ಹತ್ತಿರ ಸಾಗಿದಷ್ಟೂ, ಭಾರತೀಯರ ಕನಸು ನನಸಾಗುತ್ತಿದೆ.
ಒಟ್ನಲ್ಲಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಭಾರತದ ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರ ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ದಿನದಲ್ಲಿ ತನ್ನ ಗುರಿ ತಲುಪಿ, ಆಗಸ್ಟ್ 23ರಂದು ಚಂದ್ರನ ಮೇಲೆ ರೋವರ್ ಇಳಿಸಲಿದೆ. ಹೀಗಾಗಿ ಇಸ್ರೋ ವಿಜ್ಞಾನಿಗಳು ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಶ್ರಮಕ್ಕೆ ಉತ್ತರ ಇನ್ನು ಕೇವಲ ಒಂದು ತಿಂಗಳ ಒಳಗೆ ಸಿಗಲಿದೆ. ಅಲ್ಲದೆ ಭಾರತ ಈ ಬಾರಿ ಸಕ್ಸಸ್ ಆಗುವುದು ಬಹುತೇಕ ಖಚಿತ ಅಂತಿದ್ದಾರೆ ಅಂತಾರಾಷ್ಟ್ರೀಯ ವಿಜ್ಞಾನಿಗಳು.












Click it and Unblock the Notifications