ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಪತ್ತೆ ಮಾಡಿದ ಚಂದ್ರಯಾನ-3ರ ರೋವರ್ ಪ್ರಗ್ಯಾನ್: ISRO
ಚಂದ್ರಯಾನ-3ರ ಮಿಷನ್ ರೋವರ್ ಪ್ರಗ್ಯಾನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ (Sulfur) ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ. ಇದನ್ನು ಚಂದ್ರಯಾನ-3 ರ ರೋವರ್ ಪ್ರಗ್ಯಾನ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣದಿಂದ ಮಾಪನಗಳನ್ನು ಮಾಡಲಾಗಿದೆ.
ಬಾಹ್ಯಾಕಾಶ ಸಂಸ್ಥೆ ಗಂಧಕದ ಉಪಸ್ಥಿತಿಯನ್ನು ಇನ್-ಸಿಟ್ ಮಾಪನಗಳು ದೃಢಪಡಿಸಿದೆ ಎಂದು ಹೇಳಿದೆ. ಮಾತ್ರವಲ್ಲದೆ ಇಲ್ಲಿ ಆಮ್ಲಜನಕ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಉಪಸ್ಥಿತಿಯೂ ಪತ್ತೆಯಾಗಿದ್ದು, ಜಲಜನಕದ ಬೇಟೆ ನಡೆಯುತ್ತಿದೆ.

ಪ್ರಾಥಮಿಕ ವಿಶ್ಲೇಷಣೆಗಳಲ್ಲಿ ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti), ಮ್ಯಾಂಗನೀಸ್ (Mn), ಸಿಲಿಕಾನ್ (Si) ಮತ್ತು ಆಮ್ಲಜನಕ (O) ಇರುವಿಕೆಯನ್ನು ಪ್ರಗ್ಯಾನ್ ಪತ್ತೆ ಮಾಡಿದೆ.
ಭಾರತವು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಮೊದಲ ದೇಶ ಎಂಬ ಇತಿಹಾಸವನ್ನು ಸೃಷ್ಟಿಸಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ರಷ್ಯಾ, ಯುಎಸ್ ಮತ್ತು ಚೀನಾ ದೇಶಗಳ ಪಟ್ಟಿಯನ್ನು ಸೇರಿದೆ.
ಇಂಜಿನ್ ವೈಫಲ್ಯದ ನಂತರ ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ವಿಫಲವಾಯಿತು. ಆದರೆ ಕೆಲವು ದಿನಗಳ ನಂತರ ಚಂದ್ರನ ಮೇಲೆ ಇಳಿಯುವ ಮೂಲಕ ಇಸ್ರೋ ಯಶಸ್ಸು ಸಾಧಿಸಿದೆ. ರಷ್ಯಾ ಕೂಡ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯುವ ಗುರಿಯನ್ನು ಹೊಂದಿದೆ. ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಸಂಶೋಧನೆಯನ್ನು ಆರಂಭಿಸಿದೆ. ಇದು 14 ದಿನಗಳವರೆಗೆ ಕೆಲಸ ಮಾಡುತ್ತದೆ.

ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಎರಡೂ ಚಂದ್ರನ ಮೇಲ್ಮೈಯಲ್ಲಿ ಸಂಪೂರ್ಣವಾಗಿ ಚೆನ್ನಾಗಿವೆ ಎಂದು ಇಸ್ರೋದಿಂದ ಟ್ವೀಟ್ ಮಾಡುವ ಮೂಲಕ ತಿಳಿಸಲಾಗಿದೆ. ಟ್ವೀಟ್‌ನಲ್ಲಿ, "ಹಲೋ ಅರ್ಥ್ಲಿಂಗ್ಸ್, ನಾನು ಚಂದ್ರಯಾನ 3 ರ ಪ್ರಗ್ಯಾನ್ ರೋವರ್, ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇವೆ." ಎಂದು ಇಸ್ರೋ ರೋವರ್ ಕೇಳಿದಂತೆ ಟ್ವೀಟ್ ಮಾಡಿದೆ.
ನಾನು ಚಂದ್ರನಿಗೆ ಸಂಬಂಧಿಸಿದ ರಹಸ್ಯಗಳನ್ನು ಬಹಿರಂಗಪಡಿಸಲಿದ್ದೇನೆ ಎಂಬುದನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾನು ಮತ್ತು ನನ್ನ ಸ್ನೇಹಿತ ವಿಕ್ರಮ್ ಲ್ಯಾಂಡರ್ ಪರಸ್ಪರ ಸಂಪರ್ಕದಲ್ಲಿದ್ದೇವೆ. ನಾವು ಆರೋಗ್ಯವಾಗಿದ್ದೇವೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಶೀಘ್ರದಲ್ಲೇ ಸಿಗಲಿದೆ ಎಂದು ರೋವರ್ ಸ್ಥಿತಿಗತಿಯ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ.
ಈ ಹಿಂದೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಇರುವುದನ್ನು ರೋವರ್ ಖಚಿತಪಡಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರೊಂದಿಗೆ Al, Ca, Fe, Cr, Ti, Mn, Si ಮತ್ತು O ಕೂಡ ನಿರೀಕ್ಷೆಯಂತೆ ಇಲ್ಲಿ ಕಂಡುಬರುತ್ತವೆ. ರೋವರ್‌ನಲ್ಲಿರುವ ಲಿಬ್ಸ್ ಚಂದ್ರನ ಮೇಲ್ಮೈಯಿಂದ ಈ ಮಾಹಿತಿಯನ್ನು ಸಂಗ್ರಹಿಸಿದೆ.












Click it and Unblock the Notifications