ಡಿಸೆಂಬರ್ ವೇಳೆಗೆ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್‌ನ ಶೇಕಡಾ 80ರಷ್ಟು ನಿಧಿ ಬಳಕೆ ಮಾಡಲು ಸೂಚನೆ
2024ರಲ್ಲಿ ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್‌ನ (ಕೆಪೆಕ್ಸ್) ಶೇಕಡ 80ರಷ್ಟು ಮೊತ್ತವನ್ನು ವೆಚ್ಚ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಣಕಾಸು ವರ್ಷದಲ್ಲಿ ಪ್ರತಿ ಸಚಿವಾಲಯಕ್ಕೂ ಬಜೆಟ್ ಸಂದರ್ಭದಲ್ಲಿ ನಿಗದಿತ ನಿಧಿಯನ್ನು ಹಂಚಿಕೆ ಮಾಡಲಾಗಿರುತ್ತದೆ. ಹಂಚಿಕೆಯಾಗಿರುವ ನಿಧಿಯಲ್ಲಿ 80 ಪ್ರತಿಶತ ನಿಧಿಯನ್ನು ಡಿಸೆಂಬರ್ ವೇಳೆಗೆ ಬಳಕೆ ಮಾಡುವುದು ಕೇಂದ್ರದ ಗುರಿಯಾಗಿದೆ.
ಕೇಂದ್ರ ಸರ್ಕಾರದ ಕೆಲವು ಸಚಿವರ ತಮ್ಮ ಖಾತೆಗೆ ಒಂದು ವರ್ಷದ ಅವಧಿಗೆ ಹಂಚಿಕೆ ಮಾಡಿರುವ ನಿಧಿಯಲ್ಲಿ ಶೇಕಡಾ 45-46 ರಷ್ಟು ಮಾತ್ರ ಬಳಕೆ ಮಾಡಿದ್ದಾರೆ. ಆದರೆ ಇನ್ನೂ ಕೆಲವು ಸಚಿವಾಲಯಗಳಿಗೆ ಹಂಚಿಕೆಯಾಗಿರುವ ನಿಧಿ ಸದ್ಭಳಕೆ ಆಗಿಲ್ಲ. ಈ ಸಚಿವಾಲಯಗಳಿಗೆ ಡಿಸೆಂಬರ್ ವೇಳೆಗೆ ನಿಧಿಯನ್ನು ಸದ್ಭಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಸಚಿವಾಲಯಗಳಿಗೆ ಈ ಆದೇಶ ನೀಡಲಾಗಿದೆ. ಡಿಸೆಂಬರ್ ಒಳಗಾಗಿ ಎಲ್ಲ ಸಚಿವಾಲಯಗಳು ತಮ್ಮ ಖಾತೆಗೆ ಹಂಚಿಕೆ ಮಾಡಲಾದ ಒಟ್ಟು ನಿಧಿಯ ಪೈಕಿ ಮೂರನೇ ಎರಡರಷ್ಟು ನಿಧಿಯನ್ನು ಬಳಕೆ ಮಾಡಬೇಕಿದೆ.
ಡಿಸೆಂಬರ್ ವೇಳೆಗೆ ಶೇಕಡಾ 80 ರಷ್ಟು ನಿಧಿಯನ್ನು ವೆಚ್ಚ ಮಾಡಿದರೆ ಉಳಿದ ಮೊತ್ತವನ್ನು ಜನವರಿ- ಮಾರ್ಚ್ ಸಂದರ್ಭದಲ್ಲಿ ಬಳಕೆ ಮಾಡಬೇಕಾಗುತ್ತದೆ. ಯಾವ ಸಚಿವಾಲಯ ಈ ಹಣಕಾಸು ವರ್ಷದಲ್ಲಿ ಹಂಚಿಕೆ ಮಾಡಿದ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ ಮುಂದಿನ ಬಜೆಟ್‌ನಲ್ಲಿ ನಿಧಿ ಹಂಚಿಕೆಯಲ್ಲಿ ಕಡಿತ ಮಾಡಲಾಗುತ್ತದೆ. ಯಾವ ಸಚಿವಾಲಯ ಅಧಿಕ ನಿಧಿಯನ್ನು ವೆಚ್ಚ ಮಾಡಿರುತ್ತದೆಯೋ ಆ ಸಚಿವಾಲಯಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗಲಿದೆ.
ಹಣಕಾಸು ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದಲ್ಲಿ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಅಥವಾ ಕೆಪೆಕ್ಸ್ ಶೇಕಡ 55ರಷ್ಟು ಏರಿಕೆಯಾಗಿದೆ. ಇದು 2.7 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಬಜೆಟ್‌ನ ಶೇಕಡ 27ಕ್ಕಿಂತ ಹೆಚ್ಚಿನ ನಿಧಿಯನ್ನು ಈಗಾಗಲೇ ಬಳಕೆ ಮಾಡಲಾಗಿದೆ.
ನಿಧಿ ಬಳಕೆಯಲ್ಲಿ ಹಿಂದುಳಿದ ಸಾರ್ವಜನಿಕ ಉದ್ದಿಮೆಗಳು
ಕೇಂದ್ರದ ಸಾರ್ವಜನಿಕ ಉದ್ದಿಮೆಗಳು ನಿಧಿಯನ್ನು ಬಳಕೆ ಮಾಡುವಲ್ಲಿ ಹಿಂದೆ ಬಿದ್ದಿವೆ. ಸಾರ್ವಜನಿಕ ಉದ್ದಿಮೆಗಳಲ್ಲಿ ವೆಚ್ಚ ಮಾಡುವುದು ಮುಖ್ಯವಾಗಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಈಗಾಗಲೇ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. ರಫ್ತು ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತಗೊಂಡಿದ್ದು, ಖಾಸಗಿ ಹೂಡಿಕೆ ಪ್ರಮಾಣ ಕಡಿಮೆಯಾಗಿದೆ ಇದು ದೇಶದ ಆರ್ಥಿಕತೆ ಬೆಳವಣಿಗೆ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಕೆಪೆಕ್ಸ್ ಹೆಚ್ಚಳ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ವೆಚ್ಚವನ್ನು ಅಧಿಕ ಮಾಡುವುದರಿಂದ ಕೇಂದ್ರಕ್ಕೂ ಅನುಕೂಲವಾಗಲಿದೆ.
ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವುದು. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಕೊಟ್ಟು, ಪ್ರಚಾರ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದಲೇ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications