Kedarnath: ಕೇದಾರನಾಥದಲ್ಲಿ 2 ರೋಪ್‌ವೇ ಯೋಜನೆಗೆ ಕೇಂದ್ರದ ಅನುಮೋದನೆ
ನವದೆಹಲಿ, ಮಾರ್ಚ್ 06: ಉತ್ತರಾಖಂಡ ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ 6,811 ಕೋಟಿ ರೂಪಾಯಿ ವೆಚ್ಚದಲ್ಲಿ ಕೇದಾರನಾಥ ರೋಪ್‌ವೇ ಯೋಜನೆ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರವು ಉತ್ತರಾಖಂಡದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸಲು 6,811 ಕೋಟಿ ರೂಪಾಯಿ ವೆಚ್ಚದ ಎರಡು ರೋಪ್‌ವೇ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಈ ಯೋಜನೆಗಳು ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸಲಿವೆ, ಪ್ರಯಾಣವನ್ನು ಸುಲಭಗೊಳಿಸಲಿವೆ. ಸೋನ್‌ಪ್ರಯಾಗ್- ಕೇದಾರನಾಥ್(12.9 ಕಿ.ಮೀ.) ಮತ್ತು ಹೇಮಕುಂಡ್ ಸಾಹಿಬ್- ಗೋವಿಂದಘಾಟ್(12.4 ಕಿ.ಮೀ.) ನಡುವಿನ ಈ ಯೋಜನೆಗಳನ್ನು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಕೇದಾರನಾಥ್‌ನಿಂದ ಸೋನ್‌ಪ್ರಯಾಗ್ ನಡುವಿನ ರೋಪ್‌ವೇ ಅನ್ನು 4,081 ಕೋಟಿ ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್ ಡಿಟ್ಯಾಚೇಬಲ್ ಗೊಂಡೋಲ (3ಎಸ್) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18 ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಹೇಮಕುಂಡ್‌ಗೆ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ದುರ್ಗಮವಾಗಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ನಡೆಯಲಾರದವರನ್ನು ಕುದುರೆಗಳ ಮೇಲೆ ಕೈರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಕಠಿಣವಾಗುತ್ತಿತ್ತು.
ಹೇಮಕುಂಡ್ ಸಾಹಿಬ್ ಜಿ ಮತ್ತು ಗೋವಿಂದಘಾಟ್ ನಡುವಿನ ರೋಪ್‌ವೇ 2,730 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕೇದಾರನಾಥ್ ಹೋಗುವಾಗ ಭಕ್ತಾಧಿಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರು. ಈ ಕಷ್ಟಗಳನ್ನ ತಪ್ಪಿಸಲು ಕೇಂದ್ರ ಸರ್ಕಾರ ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗಲು ಈ ರೋಪ್‌ವೇ ನಿರ್ಮಾಣ ಮಾಡಲು ಮುಂದಾಗಿದೆ. ಅಲ್ಲದೇ ಈ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.
ಈ ರೋಪ್‌ವೇ ಯೋಜನೆಯು ಕೇದಾರನಾಥಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವರದಾನವಾಗಲಿದೆ. ಏಕೆಂದರೆ ಇದು ಪರಿಸರ ಸ್ನೇಹಿ, ಆರಾಮದಾಯಕ, ಕಡಿಮೆ ಸಮಯವನ್ನ ತೆಗೆದುಕೊಳ್ಳುತ್ತದೆ. ಮತ್ತು ಒಂದು ದಿಕ್ಕಿನಲ್ಲಿ ಪ್ರಯಾಣದ ಸಮಯವನ್ನು ಸುಮಾರು 8 ರಿಂದ 9 ಗಂಟೆಗಳಿಂದ ಸುಮಾರು 36 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ ಹೇಳಲಾಗಿದೆ. ರೋಪ್‌ವೇ ಯೋಜನೆಗಳ ಅಭಿವೃದ್ಧಿಯು ಸಮತೋಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ, ತ್ವರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಕೇದಾರನಾಥ ದೇವಸ್ಥಾನಕ್ಕೆ ಪ್ರಯಾಣವು ಗೌರಿಕುಂಡದಿಂದ 16 ಕಿ.ಮೀ ನಷ್ಟು ಚಾರಣವಾಗಿದ್ದು, ಪ್ರಸ್ತುತ ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳು, ಪಲ್ಲಕ್ಕಿಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ತಲುಪಬಹುದಾಗಿತ್ತು. ಇದೀಗ ರೋಪ್‌ವೇ ಮೂಲಕ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವನ್ನು ಒದಗಿಸಲು ಮತ್ತು ಸೋನ್‌ಪ್ರಯಾಗ ಮತ್ತು ಕೇದಾರನಾಥ ನಡುವೆ ಎಲ್ಲಾ ಹವಾಮಾನ ಸಂದರ್ಭದಲ್ಲಿ ರೋಪ್ ವೇ ಅನುಕೂಲಕರವಾಗಲಿದೆ.












Click it and Unblock the Notifications