Single Cigarettes : ಸರ್ಕಾರದಿಂದ ಸಿಂಗಲ್ ಸಿಗರೇಟ್ ಮಾರಾಟಕ್ಕೆ ನಿಷೇಧ?
ನವದೆಹಲಿ, ಡಿಸೆಂಬರ್ 12: ನೀವು ಧೂಮಪಾನ ಮಾಡುತ್ತಿದ್ದರೆ ಮತ್ತು ಚಿಲ್ಲರೆಯಾಗಿ ಸಿಗರೇಟ್ ಖರೀದಿಸಲು ಬಯಸಿದರೆ ಈ ಮಾಹಿತಿಯು ನಿಮಗೆ ಮುಖ್ಯವಾಗಿದೆ. ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು, ಸಿಂಗಲ್ ಸಿಗರೇಟ್ ಮಾರಾಟವನ್ನು ಕಾನೂನುಬಾಹಿರಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ತಂಬಾಕು ಸೇವನೆಯನ್ನು ಕಡಿಮೆ ಮಾಡಲು ಸಂಸತ್ತಿನ ಸ್ಥಾಯಿ ಸಮಿತಿಯು ಸಿಂಗಲ್ ಸಿಗರೇಟ್ ಮಾರಾಟ ಮಾಡದಂತೆ ಸಲಹೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಹಲವಾರು ವರದಿಗಳ ಪ್ರಕಾರ, ಸಂಸತ್ತಿನ ಸ್ಥಾಯಿ ಸಮಿತಿಯು ತಂಬಾಕು ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡಲು ಸಿಂಗಲ್ ಸಿಗರೇಟ್ ಮಾರಾಟದ ಮೇಲೆ ನಿರ್ಬಂಧವನ್ನು ಶಿಫಾರಸು ಮಾಡಿದೆ.
ಆರೋಗ್ಯ ಸಚಿವಾಲಯದ ಸಲಹೆಯ ಮೇರೆಗೆ ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ಇ-ಸಿಗರೇಟ್ ಮಾರಾಟ ಮತ್ತು ಬಳಕೆಯನ್ನು ಕಾನೂನುಬಾಹಿರಗೊಳಿಸಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಯ ಪ್ರಕಾರ, ಚಿಲ್ಲರೆಯಾಗಿ ಸಿಂಗಲ್ ಸಿಗರೇಟ್ ಮಾರಾಟವು ತಂಬಾಕು ಬಳಕೆಯ ವಿರುದ್ಧದ ಹೋರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸುಗಳಿಗೆ ಅನುಗುಣವಾಗಿ ಭಾರತ ಸರ್ಕಾರವು ತಂಬಾಕು ಸರಕುಗಳ ಮೇಲೆ 75% ಜಿಎಸ್‌ಟಿ ಅನ್ನು ಜಾರಿಗೊಳಿಸಬೇಕು. ಇತ್ತೀಚಿನ ತೆರಿಗೆ ಹಂತಗಳ ಪ್ರಕಾರ ದೇಶವು ಬೀಡಿಗಳ ಮೇಲೆ 22% ಜಿಎಸ್‌ಟಿ, ಸಿಗರೇಟ್‌ಗಳ ಮೇಲೆ 53% ಜಿಎಸ್‌ಟಿ ಮತ್ತು ಹೊಗೆರಹಿತ ತಂಬಾಕಿನ ಮೇಲೆ 64% ಜಿಎಸ್‌ಟಿಯನ್ನು ವಿಧಿಸುತ್ತದೆ.

ಜಿಎಸ್‌ಟಿ ಜಾರಿಯಾದರೂ ತಂಬಾಕು ವಸ್ತುಗಳ ಮೇಲಿನ ತೆರಿಗೆ ಗಣನೀಯವಾಗಿ ಏರಿಕೆಯಾಗಿಲ್ಲ ಎಂದು ಸ್ಥಾಯಿ ಸಮಿತಿ ಗಮನಿಸಿದೆ. ತಂಬಾಕು ಮತ್ತು ಮದ್ಯಪಾನ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಮಿತಿ ಒತ್ತಿ ಹೇಳಿದೆ. ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಈಗಾಗಲೇ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘನೆಗಾಗಿ 200 ರೂ.ವರೆಗೆ ದಂಡ ವಿಧಿಸಬಹುದು. ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನೂ ಸರ್ಕಾರ ನಿಷೇಧಿಸಿದೆ.












Click it and Unblock the Notifications