ದೇಶದಾದ್ಯಂತ ಜನಗಣತಿಯೊಂದಿಗೆ ಜಾತಿಗಣತಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ
ನವದೆಹಲಿ, ಏಪ್ರಿಲ್ 30: ಮುಂದಿನ ಜನಗಣತಿಯ ಜೊತೆಯಲ್ಲಿ ಜಾತಿಗಣತಿಯೂ ಒಂದು ಭಾಗವಾಗಿರಲಿದೆ ಎಂದು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸಹ ಪಾರದರ್ಶಕ ರೀತಿಯಲ್ಲಿ ನಡೆಸಿ, ವರದಿಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಜನಗಣತಿಯಲ್ಲಿ ಜಾತಿಗಣತಿ ವರದಿಯನ್ನು ಸೇರಿಸಲು ಕೇಂದ್ರ ನಿರ್ಧರಿಸಿದೆ ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, ಕಾಂಗ್ರೆಸ್ ಸರ್ಕಾರಗಳು ಯಾವಾಗಲೂ ಜಾತಿ ಜನಗಣತಿಯನ್ನು ವಿರೋಧಿಸುತ್ತಲೇ ಬಂದಿವೆ. 2010ರಲ್ಲಿ, ಮನಮೋಹನ್ ಸಿಂಗ್ ಅವರು ಸಂಸತ್ತಿನಲ್ಲಿ ಜಾತಿ ಜನಗಣತಿಯ ವಿಷಯವನ್ನು ಸಚಿವ ಸಂಪುಟದಲ್ಲಿ ಪರಿಗಣಿಸಬೇಕು ಎಂದು ಹೇಳಿದರು. ಈ ವಿಷಯವನ್ನು ಪರಿಗಣಿಸಲು ಸಚಿವರ ಗುಂಪನ್ನು ರಚಿಸಲಾಯಿತು. ಹೆಚ್ಚಿನ ರಾಜಕೀಯ ಪಕ್ಷಗಳು ಜಾತಿ ಜನಗಣತಿಯನ್ನು ಶಿಫಾರಸು ಮಾಡಿವೆ. ಇದರ ಹೊರತಾಗಿಯೂ, ಕಾಂಗ್ರೆಸ್ ಬೇರೆ ಸಮೀಕ್ಷೆಯನ್ನು ನಡೆಸುವುದು ಸೂಕ್ತ ಎಂದು ಭಾವಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವರು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಜಾತಿ ಜನಗಣತಿಯನ್ನು ಕೇವಲ ರಾಜಕೀಯ ಸಾಧನವಾಗಿ ಬಳಸಿಕೊಂಡಿದ್ದಾರೆ ಎಂಬುದು ಚೆನ್ನಾಗಿ ಅರ್ಥವಾಗುತ್ತದೆ. ಜನಗಣತಿಯ ವಿಷಯವನ್ನು ಸಂವಿಧಾನದ 246ನೇ ವಿಧಿಯ ಕೇಂದ್ರ ಪಟ್ಟಿಯ ಸರಣಿ ಸಂಖ್ಯೆ 69ರಲ್ಲಿ ಉಲ್ಲೇಖಿಸಲಾಗಿದೆ ಮತ್ತು ಇದು ಕೇಂದ್ರದ ವಿಷಯವಾಗಿದೆ. ಆದರೆ ಕೆಲವು ರಾಜ್ಯಗಳು ಜಾತಿಗಳನ್ನು ಎಣಿಸಲು ಸಮೀಕ್ಷೆಗಳನ್ನು ನಡೆಸಿವೆ. ಕೆಲವು ರಾಜ್ಯಗಳು ಇದನ್ನು ಉತ್ತಮವಾಗಿ ಮಾಡಿದ್ದರೆ, ಇನ್ನು ಕೆಲವು ರಾಜ್ಯಗಳು ಅಂತಹ ಸಮೀಕ್ಷೆಗಳನ್ನು ರಾಜಕೀಯ ದೃಷ್ಟಿಕೋನದಿಂದ ಪಾರದರ್ಶಕವಲ್ಲದ ರೀತಿಯಲ್ಲಿ ನಡೆಸಿವೆ ಎಂದು ಕೇಂದ್ರ ಸಚಿವರು ಪರೋಕ್ಷವಾಗಿ ಕರ್ನಾಟಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇನ್ನು ಜನಗಣತಿ ಕಾರ್ಯ ಏಪ್ರಿಲ್ 2020ರಲ್ಲಿ ಪ್ರಾರಂಭವಾಗಬೇಕಿತ್ತು ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. 10 ವರ್ಷಗಳ ವೇಳಾಪಟ್ಟಿಯ ಪ್ರಕಾರ ಈ ಕಾರ್ಯ ನಡೆದಿದ್ದರೆ, ವರದಿಯು 2021 ರಲ್ಲಿ ಪ್ರಕಟವಾಗುತ್ತಿತ್ತು. ಹಲವು ವರ್ಷಗಳ ಬೇಡಿಕೆಯಾದ ಜನ ಗಣತಿಯ ಜೊತೆಗೆ ಜಾತಿಗಣತಿಗೆ ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವ ಸಮಯದಲ್ಲಿ ಕೇಂದ್ರ ಸರ್ಕಾರ ಅಸ್ತು ಎಂದಿದೆ.












Click it and Unblock the Notifications