CBSE 10th Results 2026: ಹತ್ತನೇ ತರಗತಿ ನಂತರ ನಿಮ್ಮ ಆಯ್ಕೆ ಏನಾಗಿರಬೇಕು? ಮುಂದಿನ ಹಾದಿ ಹೀಗಿರಲಿ
10ನೇ ತರಗತಿಯ ನಂತರ ಸರಿಯಾದ ವಿಭಾಗವನ್ನು ಆಯ್ಕೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನವನ್ನು ನಿರ್ಧರಿಸುವುದು ಸುಲಭವಾಗುತ್ತದೆ. CBSE ಅಥವಾ ಯಾವುದೇ ಬೋರ್ಡ್ ಆಗಿರಲಿ 10 ನೇ ತರಗತಿಯ ನಂತರ ಸ್ಟ್ರೀಮ್ ಅನ್ನು ಆಯ್ಕೆ ಮಾಡುವುದು ವೃತ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಂತೆ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2026ನೇ ಸಾಲಿನ 10ನೇ ತರಗತಿಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.ಫಲಿತಾಂಶ ಘೋಷಣೆಯ ನಂತರ, ಯಾವ ಸ್ಟ್ರೀಮ್ ಅನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಅನೇಕ ವಿದ್ಯಾರ್ಥಿಗಳಿಗೆ ಇರುತ್ತದೆ. ಕಲೆ/ವಿಜ್ಞಾನ/ವಾಣಿಜ್ಯ ಹೀಗೆ ಯಾವ ವಿಭಾಗ ತಮಗೆ ಸೂಕ್ತ ಎನ್ನು ಗೊಂದಲ ಮನೆ ಮಾಡಿರುತ್ತದೆ. ಭವಿಷ್ಯದಲ್ಲಿ ಡಾಕ್ಟರ್ ಆಗಬೇಕು ಅಥವಾ ಎಂಜಿನಿಯರ್ ಆಗಬೇಕು ಎನ್ನುವ ವಿದ್ಯಾರ್ಥಿಗಳು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡುತ್ತಾರೆ. ಫೈನಾನ್ಸ್ ವಿಭಾಗದಲ್ಲಿ ತಮ್ಮ ವೃತ್ತಿ ಬದುಕು ಕಂಡುಕೊಳ್ಳಬೇಕು ಅಂದುಕೊಳ್ಳುವವರು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡುತ್ತಾರೆ. ಇನ್ನು ಮಾನವೀಯ ವಿಷಯಗಳಲ್ಲಿ ಆಸಕ್ತಿ ಹೊಂದಿರುವವರು ಕಲಾ ವಿಭಾಗವನ್ನು ಆಯ್ಕೆ ಮಾಡುತ್ತಾರೆ. 10ನೇ ತರಗತಿಯ ನಂತರ ಸರಿಯಾದ ವಿಭಾಗವನ್ನು ಆಯ್ಕೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನವನ್ನು ನಿರ್ಧರಿಸುವುದು ಸುಲಭವಾಗುತ್ತದೆ.

ಸ್ಟ್ರೀಮ್‌ಗಳನ್ನು ಹೇಗೆ ನಿರ್ಧರಿಸುವುದು?
ತಜ್ಞ ಸಲಹೆಗಾರರಿಂದ ಬಂದ ಸಲಹೆಗಳ ಪ್ರಕಾರ, ಹತ್ತನೇ ತರಗತಿಯ ನಂತರ ಯಾವ ವಿಭಾಗದಲ್ಲಿ ಮುಂದುವರಿಯಬೇಕು ಎಂದು ಆಯ್ಕೆ ಮಾಡುವಾಗ ಕುಟುಂಬದ ಜೊತೆಗೆ ನಡೆಸುವ ಚರ್ ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ಆ ಬಗ್ಗೆ ಸಂಶೋಧನೆಯೂ ಬಹಳ ಮುಖ್ಯ.ಆರ್ಥಿಕ ಸಂಪನ್ಮೂಲಗಳು, ಭವಿಷ್ಯದ ನಿರೀಕ್ಷೆಗಳು, ನಿಮ್ಮ ಸಾಮರ್ಥ್ಯ ಮತ್ತು ಒಲವು ಮುಂತಾದವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಇನ್ನು ಯಾವ ವಿಭಾಗವನ್ನು ಆಯ್ಕೆ ಮಾಡಬೇಕು ಎನ್ನುವುದು ವಿದ್ಯಾರ್ಥಿ ಪಡೆದ ಅಂಕಗಳನ್ನಷ್ಟೇ ಅವಲಂಬಿಸಿರಬಾರದು. ಬದಲಿಗೆ ಇಲ್ಲಿ ವಿದ್ಯಾರ್ಥಿಯ ಬಯಕೆ, ಆಸಕ್ತಿ ಕೂಡಾ ಬಹಳ ಮುಖ್ಯವಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ನಂತರ ಲಭ್ಯವಿರುವ ವೃತ್ತಿ ಆಯ್ಕೆಗಳ ಬಗ್ಗೆಯೂ ಅರಿತುಕೊಳ್ಳುವುದು ಮುಖ್ಯವಾಗುತ್ತದೆ.
ವೃತ್ತಿ ಆಯ್ಕೆಗಳನ್ನು ಅನ್ವೇಷಿಸಿಕೊಳ್ಳಿ:
CBSE ಅಥವಾ ಯಾವುದೇ ಬೋರ್ಡ್ ಆಗಿರಲಿ 10 ನೇ ತರಗತಿಯ ನಂತರ ಸ್ಟ್ರೀಮ್ ಅನ್ನು ಆಯ್ಕೆ ಮಾಡುವುದು ವೃತ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಂತೆ. ವಿದ್ಯಾರ್ಥಿಗಳು ಯಾವ ಸ್ಟ್ರೀಮ್ ಆಯ್ಕೆ ಮಾಡಿಕೊಂಡರೂ ವೃತ್ತಿಜೀವನವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಸ್ಟ್ರೀಮ್‌ಗಳ ಆಧಾರದ ಮೇಲೆಯೇ ವೃತ್ತಿ ಮಾರ್ಗವನ್ನು ಆಯ್ಕೆ ಮಾಡುತ್ತಾರೆ. ವಿಜ್ಞಾನ, ವಾಣಿಜ್ಯ ಮತ್ತು ಆರ್ಟ್ಸ್ ಸ್ಟ್ರೀಮ್‌ಗಳನ್ನು ಆಯ್ಕೆ ಮಾಡುವಾಗ ವಿದ್ಯಾರ್ಥಿಗಳು ಅದಕ್ಕೆ ಸಂಬಂಧಿಸಿದ ವೃತ್ತಿ ಆಯ್ಕೆಗಳ ಬಗ್ಗೆ ಸಂಶೋಧನೆ ಮಾಡಬೇಕು. ಮಾತ್ರವಲ್ಲ ಈ ವಿಷಯಗಳಲ್ಲಿ ತಮ್ಮದೇ ಆದ ಆಸಕ್ತಿಯನ್ನು ಹೊಂದಿರಬೇಕು. ಉದಾಹರಣೆಗೆ, ಗಣಿತ ಮತ್ತು ಅರ್ಥಶಾಸ್ತ್ರವು ಡೇಟಾ ಅನಾಲಿಟಿಕ್ಸ್ ಕೋರ್ಸ್, ಮಾರ್ಕೆಟಿಂಗ್ ಕೋರ್ಸ್, ಬಿಎ ಮತ್ತು ಬಿಎಸ್ಸಿ ಪದವಿಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ಮತ್ತೊಬ್ಬರನ್ನು ಅನುಸರಿಸಬೇಡಿ:
ನಿಮ್ಮ ಸ್ನೇಹಿತ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದಾದರೆ ಅದು ಆತನ ಆಸಕ್ತಿ ಆಗಿರಬಹುದು. ಹಾಗಂತ ನೀವು ಕೂಡಾ ಅದೇ ಹಾದಿಯಲ್ಲಿ ಮುಂದುವರಿಯಬೇಕು ಎಂದೇನಿಲ್ಲ. ಸ್ನೇಹಿತರಿಂದ ಪ್ರಭಾವಿತರಾಗಿ ನಿಮ್ಮ ಆಸಕ್ತಿಗಳು ಅಥವಾ ಕೌಶಲ್ಯಗಳಿಗೆ ಹೊಂದಿಕೆಯಾಗದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ. ಅಂಥಹ ನಿರ್ಧಾರವು ಭವಿಷ್ಯದಲ್ಲಿ ವೃತ್ತಿಜೀವನದ ನಿರೀಕ್ಷೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ತಮ್ಮ ಸ್ವಂತ ಆಸಕ್ತಿ, ಸಾಮರ್ಥ್ಯ ಮತ್ತು ಸಾಮರ್ಥ್ಯಕ್ಕೆ ಹೊಂದಿಕೆಯಾಗುವ ಸ್ಟ್ರೀಮ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ.
ಪ್ರವೇಶ ಆಧಾರಿತ ನಿರ್ಧಾರ ತೆಗೆದುಕೊಳ್ಳುವುದು:
ನಿಮ್ಮ ಮುಂದಿನ ಗುರಿ ಏನು ಎನ್ನುವುದನ್ನು ನಿಗದಿಪಡಿಸಿಕೊಳ್ಳಿ. ನಿಮ್ಮ ಮನಸ್ಸನ್ನು ಅದೇ ದಿಕ್ಕಿನಲ್ಲಿ ಕೇಂದ್ರೀಕರಿಸಿ. ಅದೇ ವಿಷಯದಲ್ಲಿ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಸಿದ್ದತೆ ಮಾಡಿಕೊಳ್ಳಿ. ಎರಡು ದೋಣಿಯ ಮೇಲೆ ಯಾವತ್ತೂ ಪ್ರಯಾಣ ಬೇಡ. ಸಂಪೂರ್ಣವಾಗಿ ವಿರುದ್ಧವಾದ ಎರಡು ವಿಭಿನ್ನ ಪರೀಕ್ಷೆಗಳಿಗೆ ತಯಾರಿ ಮಾಡುವುದು ಗೊಂದಲವನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳು ಸಾಮಾನ್ಯವಾಗಿ ತಾವು ಪ್ರವೇಶ ಪಡೆಯಲು ಬಯಸುವ ಕಾಲೇಜುಗಳ ಪಟ್ಟಿಯನ್ನು ತಯಾರಿಸುತ್ತಾರೆ. ಮಾತ್ರವಲ್ಲ ಎಲ್ಲಾ ಕಾಲೇಜುಗಳ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ಸಾಹಸಕ್ಕೆ ಕೈ ಹಾಕುತ್ತಾರೆ. ಉದಾಹರಣೆಗೆ ಬಿಎಂಎಸ್ ಮತ್ತು ಬಿಟೆಕ್ ಪ್ರವೇಶಗಳಿಗೆ ಒಟ್ಟಿಗೆ ತಯಾರಿ ಮಾಡುವುದು. ಇದು ಗೊಂದಲವನ್ನು ಸೃಷ್ಟಿಸುವುದಲ್ಲದೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಒತ್ತಡ ಮತ್ತು ಆತಂಕವನ್ನು ಉಂಟು ಮಾಡುತ್ತದೆ.
ಅನುಭವಿಗಳೊಂದಿಗೆ ಚರ್ಚಿಸಿ:
ಮುಂದೆ ಸಾಗಲು ಇರುವ ಪರಿಣಾಮಕಾರಿ ಮಾರ್ಗವೆಂದರೆ ಸಮುದಾಯದ ವಿಶ್ವಾಸಾರ್ಹ ಜನರಿಂದ ಮಾರ್ಗದರ್ಶನ ಪಡೆಯುವುದು. ಅದು ನಿಮ್ಮ ಪೋಷಕರಾಗಿರಲಿ, ಶಿಕ್ಷಕರಾಗಿರಲಿ ಅಥವಾ ವೃತ್ತಿಪರ ಸಲಹೆಗಾರರಾಗಿರಲಿ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವರೊಂದಿಗೆ ಮಾತನಾಡಿ. ನಿಮ್ಮ ಆಲೋಚನೆಗಳು, ಅಭಿಪ್ರಾಯಗಳನ್ನು ಚರ್ಚಿಸಿ ಮತ್ತು ಅವರ ಅಭಿಪ್ರಾಯವನ್ನು ಕೇಳಿ. ವಿದ್ಯಾರ್ಥಿಯ ಆಂತರಿಕ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಸುಲಭವಾಗಿ ನಿರ್ಣಯಿಸಬಲ್ಲ ಅನುಭವಿ ಜನರಲ್ಲಿ ಪೋಷಕರು ಮತ್ತು ಶಿಕ್ಷಕರು ಸೇರಿದ್ದಾರೆ. ಇಬ್ಬರೂ ಮಗುವಿನ ನಿರ್ಧಾರದ ಮೇಲೆ ಪ್ರಮುಖ ಪ್ರಭಾವ ಬೀರುತ್ತಾರೆ.ಇಲ್ಲಿ, ಪೋಷಕರು ತಮ್ಮ ನಿರ್ಧಾರವನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು, ಬದಲಿಗೆ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅನ್ವೇಷಿಸಲು ಸಹಾಯ ಮಾಡಬೇಕು ಎನ್ನುವುದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.
ಸಾಮರ್ಥ್ಯ ಆಧಾರಿತ ಆಯ್ಕೆ:
ವಿದ್ಯಾರ್ಥಿಗಳು ಸರಿಯಾದ ಕೋರ್ಸ್ ಅನ್ನು ಆಯ್ಕೆಮಾಡುವಾಗ ವಿಭಿನ್ನ ಮಾನದಂಡಗಳನ್ನು ಪರಿಗಣಿಸಬೇಕು.ನಿಮ್ಮ ಸ್ವಂತ ಸಾಮರ್ಥ್ಯಕ್ಕೆ ಹೊಂದಿಕೆಯಾಗುವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಇಲ್ಲಿ ಬಹಳ ಮುಖ್ಯ. ಒಬ್ಬರ ವೃತ್ತಿಜೀವನದ ಹಾದಿಯಲ್ಲಿ ಗಮನಾರ್ಹ ಸುಧಾರಣೆ ಸಾಧಿಸಲು, ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳು ಹೇರಳವಾಗಿ ಲಭ್ಯವಿರುವುದರಿಂದ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದಿಲ್ಲ. ಯಶಸ್ವಿ ಭವಿಷ್ಯವನ್ನು ನಿರ್ಮಿಸುವತ್ತ ಸರಿಯಾದ ಹೆಜ್ಜೆ ಇಡುವ ಜಾಣ್ಮೆ ಇದ್ದರೆ ಸಾಕು.
(ಬರಹ :ರಂಜಿತಾ ಆರ್.ಕೆ)












Click it and Unblock the Notifications