Manipur violence: ಮಣಿಪುರದಲ್ಲಿ 6 ಎಫ್‌ಐಆರ್‌ಗಳನ್ನು ದಾಖಲಿಸಿ, ತನಿಖಾ ತಂಡ ರಚಿಸಿದ ಸಿಬಿಐ
ನವದೆಹಲಿ, ಜೂನ್. 09: ಮಣಿಪುರ ಹಿಂಸಾಚಾರದ ಘಟನೆಗಳನ್ನು ತನಿಖೆ ಮಾಡಲು ಕೇಂದ್ರೀಯ ತನಿಖಾ ದಳ (ಸಿಬಿಐ) ಆರು ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಿದೆ. ಜೊತೆಗೆ ಇತ್ತೀಚಿನ ಹಿಂಸಾಚಾರದ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸಲು ಶುಕ್ರವಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಮಣಿಪುರದಲ್ಲಿ ಮೇ 3 ರಂದು ಪ್ರಾರಂಭವಾದ ಕುಕಿ ಮತ್ತು ಮೈತೀಸ್ ಸಮುದಾಯಗಳ ನಡುವಿನ ಹಿಂಸಾಚಾರ 100 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು 35,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮಣಿಪುರ ಸರ್ಕಾರವು ಸಿಬಿಐನ ತನಿಖೆಗಾಗಿ ಆಯ್ಕೆ ಮಾಡಿರುವ ಆರು ಪ್ರಕರಣಗಳಲ್ಲಿ ಜನಾಂಗೀಯ ಹಿಂಸಾಚಾರವು ಪೂರ್ವ ಯೋಜಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಮಾನ್ಯ ಪಿತೂರಿ ಪ್ರಕರಣವನ್ನು ಹಾಕಲಾಗಿದೆ.

ಹಿಂಸಾಚಾರ ಭುಗಿಲೆದ್ದ ನಂತರ ರಾಜ್ಯದಲ್ಲಿ ದಾಖಲಾದ 3,700 ಕ್ಕೂ ಹೆಚ್ಚು ಎಫ್‌ಐಆರ್‌ಗಳಿಂದ ಈ ಆರು ಎಫ್‌ಐಆರ್‌ಗಳನ್ನು ಹಾಕಲಾಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಕಾಂಗ್‌ಪೋಕ್ಪಿ ಮತ್ತು ಬಿಷ್ಣುಪುರ್ ಜಿಲ್ಲೆಗಳಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗಾ ಶಾಸಕರೊಂದಿಗಿನ ಸಭೆಯಲ್ಲಿ, ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ಕರೆ ನೀಡಿದ್ದಾರೆ.
ಪ್ರತ್ಯೇಕ ಆಡಳಿತಕ್ಕಾಗಿ ಕುಕಿ ಶಾಸಕರ ಬೇಡಿಕೆಗಳು ಮತ್ತು ನಾಗಾ ಶಾಸಕರು ಈ ಬೇಡಿಕೆಯಿಂದ ದೂರವಿದ್ದಾರೆ. ಅದರ ನಡುವೆಯೇ ಗೃಹ ಸಚಿವ ಅಮಿತ್ ಶಾ ಈ ಸಲಹೆ ನೀಡಿದ್ದಾರೆ. ಯಾವುದೇ ಕರ್ಫ್ಯೂ ವಿಧಿಸದ ಆರು ಬೆಟ್ಟದ ಜಿಲ್ಲೆಗಳು ಹೆಚ್ಚಾಗಿ ನಾಗಾ ಪ್ರಾಬಲ್ಯದ ಪ್ರದೇಶಗಳಾಗಿವೆ. ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್, ಮಣಿಪುರದಲ್ಲಿ ಪರಿಸ್ಥಿತಿಯು ಶಾಂತಿಯುತವಾಗಿ ಮತ್ತು ನಿಯಂತ್ರಣದಲ್ಲಿದೆ ಎಂದು ಸೂಚಿಸಿದ್ದಾರೆ.
ಮಣಿಪುರದಲ್ಲಿ ನಿರಾಶ್ರಿತ ಜನರಿಗೆ ಸಹಾಯ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ (MHA) 101.75 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಅನ್ನು ಅನುಮೋದಿಸಿದೆ ಎಂದು ಅವರು ಘೋಷಿಸಿದ್ದಾರೆ. ಹಿಂಸಾಚಾರ ಪ್ರಾರಂಭವಾದಾಗಿನಿಂದ, ಮಣಿಪುರದ ಪೊಲೀಸ್ ಶಸ್ತ್ರಾಸ್ತ್ರಗಳು ಮತ್ತು ಶಿಬಿರಗಳಿಂದ 4,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ.
ಭದ್ರತಾ ಪಡೆಗಳು ಮಣಿಪುರದಲ್ಲಿ ಇಲ್ಲಿಯವರೆಗೆ ಒಟ್ಟು 896 ಶಸ್ತ್ರಾಸ್ತ್ರಗಳು, 11,763 ಮದ್ದುಗುಂಡುಗಳು ಮತ್ತು 200 ವಿವಿಧ ರೀತಿಯ ಬಾಂಬ್‌ಗಳನ್ನು ವಶಪಡಿಸಿಕೊಂಡಿವೆ. ಇದರಲ್ಲಿ ಬುಧವಾರದಿಂದ 28 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಐದು ಕಣಿವೆ ಜಿಲ್ಲೆಗಳಲ್ಲಿ 12 ಗಂಟೆಗಳ ಕಾಲ ಮತ್ತು ನೆರೆಯ ಗುಡ್ಡಗಾಡು ಜಿಲ್ಲೆಗಳಲ್ಲಿ ಎಂಟರಿಂದ ಹತ್ತು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ.
ಇನ್ನು, ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಬುಡಕಟ್ಟು ಕುಕಿ ಪ್ರಾಬಲ್ಯದ ಹಳ್ಳಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಹೊಸ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರನೆ ಗಾಯಾಳು ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ರಕ್ಷಣಾ ಕಾರ್ಯಾಚರಣೆ ನಡೆಸಲು ಭದ್ರತಾ ಸಿಬ್ಬಂದಿ ಬಂದಿದ್ದಾರೆ ಎಂದು ಗ್ರಾಮಸ್ಥರು ಊಹಿಸಿದ್ದಾರೆ. ಭದ್ರತಾ ಪಡೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅವರು ಸಹಕರಿಸಿದ್ದಾರೆ. ಸ್ವಲ್ಪ ದೂರ ಹೋದ ಅವರು, ಇದ್ದಕ್ಕಿದ್ದಂತೆ ಗ್ರಾಮದ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ" ಎಂದು ಬುಡಕಟ್ಟು ಸಮುದಾಯದ ಹೆಸರೆಳಲು ಇಚ್ಚಿಸದ ನಾಯಕರು ತಿಳಿಸಿದ್ದಾರೆ.












Click it and Unblock the Notifications