310 ಮಂದಿಗೆ ವಂಚಿಸಿ 3.71 ಕೋಟಿ ರೂ. ಎಗರಿಸಿದ ಪೋಸ್ಟ್‌ಮಾಸ್ಟರ್! CBIನಿಂದ ಪ್ರಕರಣ ದಾಖಲು
ಜನರು ತಮ್ಮ ಭವಿಷ್ಯದ ಭದ್ರತೆಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಕಷ್ಟಕಾಲಕ್ಕೆ ಆಸರೆಯಾಗಲಿ ಎಂದು ಅಂಚೆ ಕಚೇರಿಗಳಲ್ಲಿ ವರ್ಷಗಟ್ಟಲೆ ಕಷ್ಟ ಪಟ್ಟು ದುಡಿದ ಹಣವನ್ನ ಉಳಿತಾಯ ಮಾಡುತ್ತಾರೆ. ಆದರೆ, ಅದೇ ಅಂಚೆ ಕಚೇರಿಯ ಅಧಿಕಾರಿಯೊಬ್ಬ ಗ್ರಾಹಕರಿಗೆ ನಂಬಿಕೆ ದ್ರೋಹ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ತಾಡಿಪತ್ರಿ ಬಜಾರ್ ಟೌನ್ ಉಪ ಅಂಚೆ ಕಚೇರಿಯ ಉಪ ಪೋಸ್ಟ್‌ಮಾಸ್ಟರ್ ಆಗಿದ್ದ ಚೆನ್ನಾ ರಾಮುಡು ಎಂಬಾತ ಬರೋಬ್ಬರಿ 3.71 ಕೋಟಿ ರೂಪಾಯಿಗಳನ್ನ ಅಕ್ರಮವಾಗಿ ಎಗರಿಸಿದ್ದಾನೆ. ಸದ್ಯ ಈ ತಾಡಿಪತ್ರಿ ಪೋಸ್ಟ್‌ಮಾಸ್ಟರ್ ಸಿಬಿಐ ಪ್ರಕರಣವೀಗ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಸಾಮಾನ್ಯವಾಗಿ ಗ್ರಾಹಕರು ತಮ್ಮ ಬ್ಯಾಂಕ್ ಹಾಗೂ ಅಂಚೆ ಖಾತೆಗಳಲ್ಲಿ ಇಡುವ ಹಣ ಸರ್ಕಾರಿ ವ್ಯವಸ್ಥೆಯಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂಬ ದೃಢವಾದ ನಂಬಿಕೆ ಮೇಲೆ ಇಟ್ಟಿರುತ್ತಾರೆ. ಆದರೆ, ತಾಡಿಪತ್ರಿಯಲ್ಲಿ ಉಪ ಪೋಸ್ಟ್‌ಮಾಸ್ಟರ್ ಆಗಿದ್ದ ಚೆನ್ನಾ ರಾಮುಡು ಈ ನಂಬಿಕೆಯನ್ನ ಸಂಪೂರ್ಣವಾಗಿ ಹುಸಿಯಾಗಿಸಿದ್ದಾನೆ.
ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈತ ಒಟ್ಟು 310 ಮಂದಿ ಗ್ರಾಹಕರ ಉಳಿತಾಯ ಖಾತೆಗಳಿಂದ ಅವರಿಗೆ ಕವಡೆಕಾಸಿನಷ್ಟು ಅನುಮಾನ ಬಾರದಂತೆ ನಿರಂತರವಾಗಿ ಹಣವನ್ನು ಹಿಂಪಡೆದಿದ್ದಾನೆ. ಈ ಅಂಚೆ ಕಚೇರಿ ವಂಚನೆ ಕೃತ್ಯದಲ್ಲಿ ಕೇವಲ ಒಂದೆರಡು ಲಕ್ಷಗಳಲ್ಲ, ಬದಲಾಗಿ ಒಟ್ಟು 3.71 ಕೋಟಿ ರೂಪಾಯಿಗಳನ್ನ ಅಕ್ರಮವಾಗಿ ವರ್ಗಾಯಿಸಿಕೊಂಡು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ.
ಆಂಧ್ರಪ್ರದೇಶ ಸಿಬಿಐ ದಾಳಿ
ಅಷ್ಟಕ್ಕೂ ಈತ ಯಾರಿಗೂ ಸಿಕ್ಕಿಬೀಳದಂತೆ ಹೇಗೆ ಇಷ್ಟು ದೊಡ್ಡ ಮಟ್ಟದ ವಂಚನೆ ಮಾಡುತ್ತಿದ್ದ ಎಂಬುದು ಅಚ್ಚರಿ ಮೂಡಿಸುತ್ತದೆ. ಗ್ರಾಹಕರಿಗೆ ಅರಿವಿಲ್ಲದಂತೆ ಅವರ ಖಾತೆಯಿಂದ ಹಣ ಡ್ರಾ ಮಾಡುತ್ತಿದ್ದ ಈತ, ಆ ಗ್ರಾಹಕರು ತಮ್ಮ ಖಾತೆಯಿಂದ ಹಣ ಪಡೆಯಲು ಅಂಚೆ ಕಚೇರಿಗೆ ಬಂದಾಗ, ತಾನು ಮೊದಲೇ ಎಗರಿಸಿದ ಹಣದಲ್ಲಿಯೇ ಒಂದಷ್ಟು ಭಾಗವನ್ನು ಅವರಿಗೆ ಹಿಂದಿರುಗಿಸುತ್ತಿದ್ದ. ಇದರಿಂದ ಗ್ರಾಹಕರಿಗೆ ತಮ್ಮ ಖಾತೆಯಲ್ಲಿ ಹಣವಿಲ್ಲ ಅಥವಾ ಹಣ ದುರ್ಬಳಕೆಯಾಗಿದೆ ಎಂಬ ಅನುಮಾನವೇ ಬರುತ್ತಿರಲಿಲ್ಲ.
ಈ ಖತರ್ನಾಕ್ ಐಡಿಯಾ ಬಳಸಿ ದಿನೇ ದಿನೇ ಲಕ್ಷಾಂತರ ರೂಪಾಯಿಗಳನ್ನ ಕಬಳಿಸುತ್ತಿದ್ದ. ಈತನ ಅಕ್ರಮಗಳ ಕುರಿತು ಖಚಿತ ಮಾಹಿತಿ ಲಭ್ಯವಾದ ತಕ್ಷಣವೇ ಎಚ್ಚೆತ್ತ ಕೇಂದ್ರ ತನಿಖಾ ದಳ, ಆಂಧ್ರಪ್ರದೇಶ ಸಿಬಿಐ ದಾಳಿ ಕಾರ್ಯಾಚರಣೆ ಕೈಗೊಂಡು ಆರೋಪಿ ಪೋಸ್ಟ್‌ಮಾಸ್ಟರ್ ನಿವಾಸದಲ್ಲಿ ವ್ಯಾಪಕ ಶೋಧ ನಡೆಸಿದೆ. ಸದ್ಯ ಈತನ ವಿರುದ್ಧ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಗ್ರಾಹಕರ ಹಣ ದುರ್ಬಳಕೆ ತನಿಖೆ
ಈ ಹಗರಣವು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ಬಂದ ನಂತರ ತನಿಖೆ ಚುರುಕುಗೊಂಡಿದೆ. ಅನಂತಪುರ ಅಂಚೆ ವಿಭಾಗದ ಪ್ರಾದೇಶಿಕ ಕಚೇರಿಯ ಅಧೀಕ್ಷಕರಾದ ಕೆ. ಅಮರನಾಥ್ ಅವರು ಈ ಗ್ರಾಹಕರ ಹಣ ದುರ್ಬಳಕೆ ಕುರಿತು ಅಧಿಕೃತವಾಗಿ ಸಿಬಿಐಗೆ ದೂರು ನೀಡಿದ್ದರು. ಅವರ ದೂರಿನ ಅನ್ವಯ, ಕರ್ನೂಲ್ ವಲಯದ ಅಂಚೆ ಸೇವೆಗಳ ನಿರ್ದೇಶಕರು ವೃತ್ತ ಮಟ್ಟದ ಆಂತರಿಕ ತನಿಖೆ ನಡೆಸಿದ್ದರು.
ಈ ತನಿಖೆಯ ವೇಳೆ ತಾಡಿಪತ್ರಿ ಬಜಾರ್ ಟೌನ್ ಉಪ ಅಂಚೆ ಕಚೇರಿಯಲ್ಲಿ ಉಪ ಪೋಸ್ಟ್‌ಮಾಸ್ಟರ್ ಆಗಿದ್ದ ಚೆನ್ನಾ ರಾಮುಡು ಅತ್ಯಂತ ವ್ಯವಸ್ಥಿತವಾಗಿ ಹಣ ದುರ್ಬಳಕೆ ಮಾಡಿರುವುದು ಸಾಬೀತಾಗಿದೆ. ಈ ವರದಿಯ ಆಧಾರದ ಮೇಲೆಯೇ ಇದೀಗ ಸಿಬಿಐ ತನ್ನ ತನಿಖೆಯನ್ನು ಮುಂದುವರಿಸಿದೆ.
ಸಾರ್ವಜನಿಕರ ಹಣವನ್ನು ರಕ್ಷಣೆ ಮಾಡಬೇಕಾದ ಉನ್ನತ ಅಧಿಕಾರಿಯೇ ಈ ರೀತಿ ಕಳ್ಳತನ ಮಾಡಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸಿಬಿಐ ತನಿಖೆ ಇದೀಗ ತೀವ್ರಗೊಂಡಿದ್ದು, ಈತನಿಗೆ ಕಚೇರಿಯ ಬೇರೆ ಯಾರಾದರೂ ಸಿಬ್ಬಂದಿ ಸಾಥ್ ನೀಡಿದ್ದಾರೆಯೇ, ಮತ್ತು ಅಕ್ರಮವಾಗಿ ಸಂಪಾದಿಸಿದ ಕೋಟ್ಯಂತರ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾನೆ ಎಂಬಿತ್ಯಾದಿ ಆಯಾಮಗಳಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications
