ಸಿಬಿಐನಲ್ಲಿ ಲಂಚ ಪ್ರಕರಣ: ಡಿಎಸ್‌ಪಿ ದೇವೇಂದರ್ ಕುಮಾರ್ ಬಂಧನ
ನವದೆಹಲಿ, ಅಕ್ಟೋಬರ್ 22: ತನ್ನ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರು ಭಾಗಿಯಾಗಿರುವ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದರ್ ಕುಮಾರ್ ಅವರನ್ನು ಸಿಬಿಐ ಬಂಧಿಸಿದೆ.
ಮಾಂಸ ರಫ್ತುದಾರ ಮೋಯಿನ್ ಖುರೇಷಿ ಅವರ ಪ್ರಕರಣದಲ್ಲಿ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ಸತೀಶ್ ಸಾನ ಅವರ ಹೇಳಿಕೆಯ ದಾಖಲೆಯನ್ನು ಫೋರ್ಜರಿ ಮಾಡಿದ ಆರೋಪದಡಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಥಾನ ಅವರ ನೇತೃತ್ವದ ತನಿಖಾ ತಂಡವು 2018ರ ಸೆಪ್ಟೆಂಬರ್ 26ರಂದು ಸಾನ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾಗಿ ತಿಳಿಸಲಾಗಿತ್ತು. ಆದರೆ, ಬಳಿಕ ಸಿಬಿಐ ನಡೆಸಿದ ತನಿಖೆಯಲ್ಲಿ ಅಂದು ಅವರು ಹೈದರಾಬಾದ್‌ನಲ್ಲಿ ಇದ್ದರು ಎನ್ನುವುದು ತಿಳಿದುಬಂದಿತ್ತು.

ಈ ಹೇಳಿಕೆಯಲ್ಲಿ ಸಾನ ಅವರು, ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ ರಾಜ್ಯ ಸಭಾ ಸದಸ್ಯ ಸಿ.ಎಂ. ರಮೇಶ್ ಜೂನ್‌ನಲ್ಲಿ ಸಿಬಿಐ ನಿರ್ದೇಶಕರೊಂದಿಗೆ ಮಾತನಾಡಿ ತಮ್ಮ ವಿರುದ್ಧ ಮತ್ತೆ ಸಿಬಿಐ ಸಮನ್ಸ್ ಹೊರಡಿಸುವುದಿಲ್ಲ ಎಂಬ ಭರವಸೆ ನೀಡಿದ್ದರು ಎಂದು ದಾಖಲಿಸಲಾಗಿತ್ತು.
ಜೂನ್ ತಿಂಗಳಿನಿಂದಲೂ ನನಗೆ ಸಿಬಿಐನಿಂದ ಕರೆ ಬಂದಿಲ್ಲ. ನನ್ನ ವಿರುದ್ಧದ ತನಿಖೆ ಮುಕ್ತಾಯಗೊಂಡಿದೆ ಎಂದೇ ನಾನು ಭಾವಿಸಿದ್ದೆ ಎಂದು ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಕುಮಾರ್ ತಿದ್ದಿದ್ದರು. ಆಸ್ಥಾನ ಅವರ ನೇತೃತ್ವದ ತನಿಖಾ ತಂಡದ ಇತರೆ ಸದಸ್ಯರ ಪಾತ್ರದ ಬಗ್ಗೆಯೂ ಸಂಸ್ಥೆ ವಿಚಾರಣೆ ನಡೆಸಲಿದೆ ಎಂದು ಸಿಬಿಐ ತಿಳಿಸಿದೆ.












Click it and Unblock the Notifications