Supreme Court: ಜೈಲಿನಲ್ಲೂ ಜಾತಿ ತಾರತಮ್ಯ: ಸುಪ್ರೀಂ ಕೋರ್ಟ್‌ನಿಂದ ಮತ್ವದ ಆದೇಶ
ಭಾರತದಲ್ಲಿ ಜಾತಿತಾರತಮ್ಯ ಎಲ್ಲಾ ರಂಗದಲ್ಲೂ ಹಾಗೂ ಎಲ್ಲಾ ರಾಜ್ಯಗಳಲ್ಲೂ ಇಂದಿಗೂ ಮುಂದುವರಿದಿದೆ. ಭಾರತ ಅಭಿವೃದ್ಧಿಯಾಗುತ್ತಿದ್ದಂತೆಯೇ ಜಾತಿತಾರತಮ್ಯ ಇಳಿಕೆಯಾಗುತ್ತದೆ ಎಂದೇ ಭಾವಿಸಲಾಗಿತ್ತಾದರೂ, ಅದು ಈಡೇರಿಲ್ಲ. ಇದೀಗ ಆಘಾತಕಾರ ಸುದ್ದಿಯೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಸಹ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಜಾತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತಾರತಮ್ಯವನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದೆ.
ದೇಶದ ಕೆಲವು ರಾಜ್ಯದ ಜೈಲುಗಳಲ್ಲೂ ಜಾತಿ ತಾರತಮ್ಯ ಬಗ್ಗೆ (ಜೈಲು ಕೈಪಿಡಿ ಅಥವಾ ಗೈಡ್‌ಲೈನ್ಸ್ ಬಗ್ಗೆ) ಇತ್ತೀಚಿನ ದಿನಗಳಲ್ಲಿ ದೂರು ಕೇಳಿ ಬಂದಿದೆ. ಇದೀಗ ಸುಪ್ರೀಂ ಕೋರ್ಟ್ ಈ ಬಗ್ಗೆ ಎಚ್ಚರಿಕೆ ನೀಡಿದೆ. ಜಾತಿ ಆಧಾರಿತ ತಾರತಮ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಜೈಲು ಕೈಪಿಡಿಯಲ್ಲಿ (ಗೈಡ್‌ಲೈನ್ಸ್)ಇರುವ ನಿಬಂಧನೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದೆ. ಜೈಲಿನಲ್ಲಿ ಇರುವವರು ಸಹ ಗೌರವದ ಬದುಕನ್ನು ಕಟ್ಟಿಕೊಳ್ಳಲು ಅರ್ಹರಾಗಿದ್ದಾರೆ. ಈ ರೀತಿಯ ತಾರತಮ್ಯವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಭಾರತದ ಯಾವುದೇ ರಾಜ್ಯದ ಯಾವುದೇ ಜೈಲಿನಲ್ಲೂ ಈ ರೀತಿ ತಾರತಮ್ಯ ಇರಬಾರದು. ಜೈಲು ಗೈಡ್‌ಲೈನ್ಸ್‌ನಲ್ಲಿ ಇರುವ ಲೋಪದೋಷಗಳನ್ನು ಕೂಡಲೇ ಸರಿಪಡಿಸಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯಗಳಿಗೆ ಎಚ್ಚರಿಕೆ: ಜೈಲುಗಳಲ್ಲಿ ಖೈದಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಲಬೇಕು. ಜಾತಿಯನ್ನು ಆಧಾರವಾಗಿ ಇರಿಸಿಕೊಂಡು ಯಾವುದೇ ರೀತಿಯ ತಾರತಮ್ಯವನ್ನೂ ಮಾಡಬಾರದು. ಈ ರೀತಿ ಮಾಡಿದರೆ ಅಥವಾ ಖೈದಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಬೆಳಕಿಗೆ ಬಂದರೆ ಸಂಬಂಧಪಟ್ಟ ರಾಜ್ಯವನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ದೇಶದ ಯಾವುದೇ ರಾಜ್ಯದ, ಯಾವುದೇ ಜೈಲಿನಲ್ಲೂ ಜಾತಿ ತಾರತಮ್ಯ ಇರಬಾರದು ಎಂದು ಹೇಳಲಾಗಿದೆ.
ಏನಿದು ಜೈಲಿನಲ್ಲೂ ಜಾತಿ ತಾರತಮ್ಯ
ಭಾರತದ ಕೆಲವು ಜೈಲುಗಳಲ್ಲೂ ಜಾತಿತಾರತಮ್ಯದ ಬಗ್ಗೆ ಆರೋಪ ಕೇಳಿ ಬಂದಿದೆ. ಜೈಲು ಗೈಡ್‌ಲೈನ್ಸ್ ಇದಕ್ಕೆ ಪ್ರೋತ್ಸಾಹ ನೀಡುವಂತೆ ಇದೆ ಎಂದು ಹೇಳಲಾಗಿದೆ. 2016ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಜೈಲಿನ ಕೈಪಿಡಿಯಲ್ಲಿ ಕೆಲವು ಲೋಪಗಳಿವೆ ಎಂದು ಹೇಳಲಾಗಿದೆ. ಜಾತಿಯ ಆಧಾರದ ಮೇಲೆ ಕೈದಿಗಳನ್ನು ಬೇರ್ಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಕೆಲವು ನಿರ್ದಿಷ್ಟ ಸಮುದಾಯದವರ ವಿರುದ್ಧವಾಗಿ ತಾರತಮ್ಯ ನಡೆದಿದೆ ಎಂದು ಹೇಳಲಾಗಿದೆ. ಅಲ್ಲದೇ ಶೌಚಾಲಯದ ಹೋಲ್ (ಗುಂಡಿ)ಹಾಗೂ ಒಳಚರಂಡಿ ಸೇರಿದಂತೆ ಯಾವುದೇ ರೀತಿಯ ಅಪಾಯಕಾರಿ ಕೆಲಸಕ್ಕೆ ಖೈದಿಗಳನ್ನು ಬಳಸಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಮೂರು ತಿಂಗಳಲ್ಲಿ ಸರಿಪಡಿಸಿ: ಮುಂದಿನ ಮೂರು ತಿಂಗಳ ಒಳಗಾಗಿ ಈ ತಪ್ಪನ್ನು ಸರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಸಂಬಂಧ ಹತ್ತು ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದ್ದು, ಜೈಲು ಗೈಡ್‌ಲೈನ್ಸ್ (ನಿಬಂಧನೆ) ಲೋಪವನ್ನು ಈ ಅವಧಿಯ ಒಳಗಾಗಿ ಸರಿಪಡಿಸಿಕೊಳ್ಳಬೇಕು. ಮೂರು ತಿಂಗಳ ನಂತರ ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಕೆ ಮಾಡಬೇಕು ಎಂದೂ ಹೇಳಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications