ಕೇಂದ್ರ ಬಜೆಟ್ 2022: ದೇಶದ ಸಾಮಾನ್ಯ ಪ್ರಜೆಗಳಿಗೆ ಸಿಕ್ಕಿದ್ದು ಏನು?
ನವದೆಹಲಿ, ಫೆಬ್ರವರಿ 1: ಭಾರತದಲ್ಲಿ ಅಗತ್ಯ ಸಂದರ್ಭದಲ್ಲಿ ನೇರ ತೆರಿಗೆ ಮೂಲಕ ನಾಗರಿಕರಿಗೆ ಸಹಾಯ ಮಾಡಿದ ಮತ್ತು ಸರ್ಕಾರದ ಕೈಗೆ ಶಕ್ತಿ ತುಂಬಿದ ಪ್ರತಿಯೊಬ್ಬ ತೆರಿಗೆದಾರರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಭಾಷಣದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಪಾವತಿದಾರರಿಗೆ ಧನ್ಯವಾದ ತಿಳಿಸಿದರು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಉಪಯುಕ್ತ ಆಗುವಂತಹ ದೊಡ್ಡ ಪ್ರಮಾಣದ ಯೋಜನೆಗಳೇನೂ ಇಲ್ಲ. ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎನ್ನುವುದು ಒಂದೇ ಸಮಾಧಾನಕರ ಸಂಗತಿ ಆಗಿದೆ. ಆದರೆ ತೆರಿಗೆದಾರರು ನಿರ್ದಿಷ್ಟ ವರ್ಷದ ಆದಾಯ ತೆರಿಗೆ ರಿಟರ್ನ್‌ನಲ್ಲಿ ಸರ್ಕಾರ ನಮೂದಿಸಿದ್ದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಿದ್ದರೆ ನವೀಕರಿಸಿದ ರಿಟರ್ನ್ಸ್ ಪ್ರಕಾರ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ನಿರ್ಮಲಾ ಸೀತಾರಾಮನ್ ಮಂಡಿಸಿದ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭಿಸಿದರು. ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು. ಕಳೆದ ವರ್ಷದಂತೆ ಕಾಗದರಹಿತ ರೂಪದಲ್ಲಿ 2022-23ನೇ ಸಾಲಿನ ಬಜೆಟ್ ಅನ್ನು ಮಂಡಿಸಲಾಗಿದ್ದು, ಇದರಿಂದ ದೇಶದ ಸಾಮಾನ್ಯ ಪ್ರಜೆಗಳಿಗೆ ಏನು ಲಾಭ ಎಂಬುದರ ಕುರಿತು ವಿವರಣೆ ಇಲ್ಲಿದೆ ಓದಿ.

ರಿಟರ್ನ್ಸ್ ಸಲ್ಲಿಕೆಯಲ್ಲಿ ತಪ್ಪಾದರೆ ಏನು ಮಾಡುವುದು?:
ಬಾಕಿ ತೆರಿಗೆ ಪಾವತಿಯನ್ನು ಅಂದಾಜಿಸುವುದರಲ್ಲಿ ತಪ್ಪಿದ್ದಲ್ಲಿ, ತೆರಿಗೆದಾರರು ಮೌಲ್ಯಮಾಪನ ವರ್ಷದ ಎರಡು ವರ್ಷಗಳಲ್ಲಿ 'ನವೀಕರಿಸಿದ ರಿಟರ್ನ್ಸ್' ಅನ್ನು ಸಲ್ಲಿಸಬಹುದು. "ಪ್ರಸ್ತುತ ಆದಾಯ ತೆರಿಗೆ ನೀತಿ ಪ್ರಕಾರ, ಇಲಾಖೆ ಮೌಲ್ಯಮಾಪಕದಿಂದ ಕೆಲವು ಆದಾಯದ ಬಗ್ಗೆ ಲೆಕ್ಕ ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸುವುದಕ್ಕೆ ಸುದೀರ್ಘ ಪ್ರಕ್ರಿಯೆಯನ್ನು ಪಾಲಿಸಬೇಕಾಗಿತ್ತು. ಅದರ ಬದಲಿಗೆ ತೆರಿಗೆದಾರರಲ್ಲಿ ವಿಶ್ವಾಸ ಮೂಡಿಸಲಾಗುವುದು. ತೆರಿಗೆದಾರರು ರಿಟರ್ನ್ಸ್ ಸಲ್ಲಿಸುವಾಗ ಈ ಹಿಂದೆ ತಪ್ಪಾಗಿರುವ ಲೆಕ್ಕದ ಕುರಿತು ತೆರಿಗೆದಾರರೇ ಘೋಷಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಹಣಕಾಸೂ ಮಸೂದೆಯಲ್ಲಿ ಈ ಪ್ರಸ್ತಾವನೆ ಕುರಿತು ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ," ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವೇತನ ಪಡೆಯುವ ವರ್ಗದ ನಿರೀಕ್ಷೆಗಳು ಹುಸಿ:
ನೇರ ತೆರಿಗೆ ಸಂಗ್ರಹಣೆಯಲ್ಲಿನ ಹೆಚ್ಚಳದ ಜೊತೆಗೆ ಸಾಮಾನ್ಯ ಜನರು ಮೂಲ ವಿನಾಯಿತಿ ಮಿತಿಯಲ್ಲಿ ಏರಿಕೆ ಮಾಡುವುದು. ಸಂಬಳದ ವರ್ಗದ ಪ್ರಮಾಣಿತ ಕಡಿತದಲ್ಲಿ ಹೆಚ್ಚಳವನ್ನು ನಿರೀಕ್ಷಿಸಿದ್ದರು. ದೀರ್ಘ ಕಾಲದಿಂದ ಪರಿಷ್ಕರಿಸದೇ ಉಳಿದಿರುವ ವೇತನ ವರ್ಗದವರಿಗೆ ಭತ್ಯೆ ವಿನಾಯಿತಿ ಮಿತಿಯಲ್ಲಿ ಸ್ವಲ್ಪ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ ಬಜೆಟ್ ಮೇಲಿನ ಈ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ.
Recommended Video
ಬಜೆಟ್‌ನಲ್ಲಿ ವೈಯಕ್ತಿಕ ತೆರಿಗೆಯ ಮೇಲೆ ಹೆಚ್ಚಿನ ಕೊಡುಗೆ ಇಲ್ಲ:
"ಕೇಂದ್ರ ಬಜೆಟ್‌ನಲ್ಲಿ ವೈಯಕ್ತಿಕ ತೆರಿಗೆಯ ಮೇಲೆ ಹೆಚ್ಚಿನ ಕೊಡುಗೆಗಳಿಲ್ಲ. ಆದಾಗ್ಯೂ, ಕೊವಿಡ್ 19 ರ ಚಿಕಿತ್ಸೆಗೆ ತಗಲುವ ವೆಚ್ಚಕ್ಕಾಗಿ ಹಣವನ್ನು ಪಡೆದ ವ್ಯಕ್ತಿಗಳಿಗೆ ಪರಿಹಾರ ಒದಗಿಸಲಾಗಿದೆ. ಅಂತೆ, ವ್ಯಕ್ತಿಯ ಮರಣದ ನಂತರ ಕುಟುಂಬದ ಸದಸ್ಯರಿಗೆ 10 ಲಕ್ಷ ರೂಪಾಯಿವರೆಗೂ ನೆರವು ನೀಡಲಾಗುತ್ತದೆ," ಎಂದು ತೆರಿಗೆ ತಜ್ಞ ಬಲವಂತ ಜೈನ್ ಹೇಳಿದ್ದಾರೆ.
ಬಜೆಟ್ ಮೂಲಕ ಸಾಮಾನ್ಯ ಜನರಿಗೆ ಏನು ಲಾಭ?
ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ, 400 ಹೊಸ ವಂದೇ ಭಾರತ್ ರೈಲುಗಳು, 2023 ರಲ್ಲಿ 5G ಸ್ಪೆಕ್ಟ್ರಮ್ ಹರಾಜು, "ಫ್ಯೂಚರಿಸ್ಟಿಕ್ ತಂತ್ರಜ್ಞಾನ" ಹೊಂದಿರುವ ಇ-ಪಾಸ್‌ಪೋರ್ಟ್‌ಗಳು, ನಿಗದಿತ ವಾಣಿಜ್ಯ ಬ್ಯಾಂಕ್‌ಗಳ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಅಂತಿಮವಾಗಿ ಭವಿಷ್ಯದಲ್ಲಿ ಸಾಮಾನ್ಯ ಪ್ರಜೆಗಳಿಗೆ ಅನುಕೂಲಕರವಾಗುವ ಭರವಸೆಯನ್ನು ಹುಟ್ಟು ಹಾಕಿವೆ.












Click it and Unblock the Notifications