IIT ಟ್ಯಾಗ್ ಇಲ್ಲ, ಡಿಗ್ರಿಯೂ ಇಲ್ಲ: ಎಐ ಸ್ಟಾರ್ಟಪ್‌ಗಳಲ್ಲಿ ಕೆಲಸ ಮಾಡುತ್ತಾ ತಿಂಗಳಿಗೆ 4.8 ಲಕ್ಷ ರೂ. ಗಳಿಸುತ್ತಿರುವ 22ರ ಯುವಕ
ನಮ್ಮ ದೇಶದಲ್ಲಿ ಒಂದು ಒಳ್ಳೆಯ ಉದ್ಯೋಗ ಹಾಗೂ ಕೈತುಂಬಾ ಸಂಬಳ ಪಡೆಯಲು ಐಐಟಿ ಅಥವಾ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಪದವಿ ಕಡ್ಡಾಯ ಎಂಬ ಸಾಮಾನ್ಯ ನಂಬಿಕೆಯಿದೆ. ಹಾಗೆಯೇ ಹೆಚ್ಚಿನವರ ಪಾಲಿಗೆ ಇದು ನಿಜ ಕೂಡ ಹೌದು. ಆದರೆ, ಉತ್ತರ ಪ್ರದೇಶದ 22 ವರ್ಷದ ಈ ಯುವಕನೊಬ್ಬ ಇಂಜಿನಿಯರಿಂಗ್ ಪದವಿಯನ್ನ ಅರ್ಧದಲ್ಲೇ ಬಿಟ್ಟು, ಕೇವಲ ಕೌಶಲ್ಯ ಮತ್ತು ಪ್ರಾಯೋಗಿಕ ಅಂದರೆ ಪ್ರಾಕ್ಟಿಕಲ್ ಜ್ಞಾನದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ಮೂಲಕ ಜನರ ಈ ನಂಬಿಕೆಯನ್ನ ಹುಸಿಗೊಳಿಸಿದ್ದಾರೆ.
ಬಿ.ಟೆಕ್ ಡ್ರಾಪ್‌ಔಟ್ ಆಗಿರುವ ಲಾವಣ್ಯ ಜೈನ್ ಪ್ರಸ್ತುತ ಜಾಗತಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ಗಳೊಂದಿಗೆ ಕೆಲಸ ಮಾಡುತ್ತಿದ್ದು, ಮಾಸಿಕ ಸುಮಾರು 4.8 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಉತ್ತರ ಪ್ರದೇಶದ ಶಾಮ್ಲಿ ಮೂಲದ ಲಾವಣ್ಯ ಜೈನ್, 12ನೇ ತರಗತಿಯಲ್ಲಿ ಇರುವಾಗ ಗಣಿತದಲ್ಲಿ 100ಕ್ಕೆ 100 ಅಂಕ ಸೇರಿದಂತೆ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದರು. ನಂತರ ಎರಡು ಬಾರಿ ಜೆಇಇ ಪರೀಕ್ಷೆ ಬರೆದರೂ ಕೂಡ ಅವರು ಅಂದುಕೊಂಡ ಯಶಸ್ಸು ಸಿಗಲಿಲ್ಲ. ಆ ಬಳಿಕ ನೋಯ್ಡಾದ ಜೆಪಿ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿ.ಟೆಕ್‌ಗೆ ಪ್ರವೇಶ ಪಡೆದರು.
ಆದರೆ ಕಾಲೇಜು ವ್ಯಾಸಂಗದ ವೇಳೆ ಅವರಿಗೆ ಈ ಸಾಂಪ್ರದಾಯಿಕ ಇಂಜಿನಿಯರಿಂಗ್‌ಗಿಂತ ಸ್ಟಾರ್ಟ್‌ಅಪ್ ಬೆಳವಣಿಗೆ, ಮಾರ್ಕೆಟಿಂಗ್, ಕಂಟೆಂಟ್ ಡಿಸ್ಟ್ರಿಬ್ಯೂಷನ್ ಮತ್ತು ಟೆಕ್ನಾಲಜಿ ಮೇಲೆ ಹೆಚ್ಚು ಆಸಕ್ತಿ ಮೂಡಿತು. ಹೀಗಾಗಿ ತಮ್ಮ ಕೊನೆಯ ಸೆಮಿಸ್ಟರ್‌ನಲ್ಲಿ ಇರುವಾಗ ಬಿ.ಟೆಕ್ ತೊರೆದ ಲಾವಣ್ಯ, ಕಾಲೇಜು ಬಿಟ್ಟಿದ್ದು ತಮ್ಮ ಜೀವನದ ಅತ್ಯುತ್ತಮ ನಿರ್ಧಾರ ಎಂದು ಹೇಳಿಕೊಂಡಿದ್ದಾರೆ.
ಕ್ಯಾಂಪಸ್ ಪ್ಲೇಸ್‌ಮೆಂಟ್ ಬದಲು ಫ್ರೀಲ್ಯಾನ್ಸಿಂಗ್ ಮತ್ತು ಎಐ ಸ್ಟಾರ್ಟ್‌ಅಪ್‌ಗಳಲ್ಲಿ ಯಶಸ್ಸು
ಕಾಲೇಜಿನ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಕಾಯದೆ, ಓದುತ್ತಿರುವಾಗಲೇ ಫ್ರೀಲ್ಯಾನ್ಸಿಂಗ್ ಆರಂಭಿಸಿದ ಲಾವಣ್ಯ ಜೈನ್, ಪ್ರಾಡಕ್ಟ್ ಮಾರ್ಕೆಟಿಂಗ್, ಎಸ್‌ಇಒ ಮತ್ತು ಗ್ರೋತ್ ಸ್ಟ್ರಾಟಜಿ ಕ್ಷೇತ್ರಗಳಲ್ಲಿ ತಮ್ಮನ್ನಾ ತಾವು ತೊಡಗಿಸಿಕೊಂಡರು. ಡಿಆರ್‌ಡಿಒ, ಲ್ಯಾಂಗ್‌ಡಿಬಿ, ಡುಯಲೈಟ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಅನುಭವ ಇವರಿಗಿದೆ.
ವಿಶೇಷವಾಗಿ 'ರನಬಲ್' ಎಂಬ ಎಐ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುವಾಗ, ಕೇವಲ 10 ದಿನಗಳಲ್ಲಿ ಕಂಪನಿಯ ವಾರ್ಷಿಕ ಆದಾಯವನ್ನ ಸೊನ್ನೆಯಿಂದ 1 ಮಿಲಿಯನ್ ಡಾಲರ್‌ಗೆ ಏರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಜಾಗತಿಕ ಎಐ ಸ್ಟಾರ್ಟ್‌ಅಪ್‌ಗಳಲ್ಲಿ ನಾಯಕತ್ವದ ಹುದ್ದೆಗಳನ್ನ ನಿಭಾಯಿಸುತ್ತಿರುವ ಇವರು, ಐದು ಪ್ರತ್ಯೇಕ ಆದಾಯದ ಮೂಲಗಳನ್ನ ಹೊಂದಿದ್ದಾರೆ.
ಐಐಟಿ ಎಂಬುದು ಕೇವಲ ಒಂದು ಟ್ಯಾಗ್ ಅಷ್ಟೇ..
ಇತ್ತೀಚೆಗೆ ಎಕ್ಸ್ ಖಾತೆಯಲ್ಲಿ ತಮ್ಮ ಆದಾಯದ ಬ್ಯಾಂಕ್ ಸ್ಕ್ರೀನ್‌ಶಾಟ್‌ಗಳನ್ನ ಹಂಚಿಕೊಂಡಿರುವ ಲಾವಣ್ಯ, ತಿಂಗಳಿಗೆ 4.86 ಲಕ್ಷ ರೂ. ಪಾವತಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. "ನಾನು ಯಾವುದೇ ಐಐಟಿಯಿಂದ ಬಂದವನಲ್ಲ, ಇಂಜಿನಿಯರಿಂಗ್ ಡಿಗ್ರಿಯೂ ಇಲ್ಲ. ಆದರೂ ನಮ್ಮ ಕಾಲೇಜಿನ ಅತ್ಯುನ್ನತ ಪ್ಲೇಸ್‌ಮೆಂಟ್ ಪ್ಯಾಕೇಜ್‌ಗಿಂತಲೂ ಹೆಚ್ಚು ಆದಾಯವನ್ನ ಪಾರ್ಟ್-ಟೈಮ್ ಕೆಲಸದ ಮೂಲಕವೇ ಗಳಿಸುತ್ತಿದ್ದೇನೆ. ಐಐಟಿ ಎಂಬುದು ಕೇವಲ ಒಂದು ಟ್ಯಾಗ್ ಅಷ್ಟೇ. ಪ್ರಸ್ತುತ ಇಬ್ಬರು ಐಐಟಿ ಪದವೀಧರರು ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ" ಎಂದು ಅವರು ಬರೆದುಕೊಂಡಿದ್ದಾರೆ.
ಲಾವಣ್ಯ ಜೈನ್ ಅವರ ಈ ಕಥೆಯು ಪ್ರತಿಯೊಬ್ಬರೂ ಕಾಲೇಜು ಬಿಡಬೇಕು ಎಂಬುದನ್ನ ಹೇಳುತ್ತಿಲ್ಲ. ಆದರೆ ಇಂದಿನ ಡಿಜಿಟಲ್ ಹಾಗೂ ಎಐ ಯುಗದಲ್ಲಿ ಕೇವಲ ಪದವಿ ಪ್ರಮಾಣಪತ್ರಗಳಿಗಿಂತ ಜಗತ್ತಿನಲ್ಲಿರುವ ನಿಜವಾದ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ಕುತೂಹಲ ಮತ್ತು ನಿರಂತರ ಕಲಿಕೆಗೆ ಮಾರುಕಟ್ಟೆಯಲ್ಲಿ ಎಷ್ಟು ಹೆಚ್ಚಿನ ಮೌಲ್ಯವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ.


Click it and Unblock the Notifications
