BSNL ಇಂಟರ್‌ನೆಟ್ ಫೈಬರ್ ಟಿವಿ ಸೇವೆ ಶುರು: 'ಸೆಟ್-ಟಾಪ್ ಬಾಕ್ಸ್' ಇಲ್ಲದೇ 500 ಚಾನಲ್ ಉಚಿತ..
ಬೆಂಗಳೂರು, ಜನವರಿ 09: ಭಾರತಾದ್ಯಂತ ಟೆಲಿಕಾಂ ರಂಗದಲ್ಲಿ ಹೊಸತನಕ್ಕೆ ನಾಂದಿ ಹಾಡುತ್ತಿರುವ BSNL ಗ್ರಾಹಕ ಸ್ನೇಹಿ ಯೋಜನೆಗಳನ್ನು ಘೋಷಿಸುತ್ತಿದೆ. ಮಾತ್ರವಲ್ಲದೇ 5ಜಿಗೆ ಅಪ್‌ಗ್ರೇಡ್ ಆಗಲು ಸಜ್ಜಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಸೇವೆ ಆರಂಭಿಸಿದೆ. ಇಂಟರ್‌ನೆಟ್ ಪ್ರೋಟೋಕಾಲ್ ಆಧಾರಿತ IFTV (Intranet Fibre TV) ಸೇವೆಯನ್ನು ಪರಿಚಯಿಸಿದೆ.
BSNL ಕೆಲವು ದಿನಗಳ ಹಿಂದಷ್ಟೇ ದೇಶದ ಇನ್ನೊಂದು ರಾಜ್ಯದಲ್ಲಿ ಇಂಟರ್‌ನೆಟ್ ಪ್ರೋಟೋಕಾಲ್ ಆಧಾರಿತ ಐಎಫ್‌ಟಿವಿ ಸೇವೆ ನೀಡಲು ಶುರು ಮಾಡಿದೆ. ಈ ಸೇವೆ ಪಡೆದ ಗ್ರಾಹಕರು 500 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ವಿಶೇಷವೆಂದರೆ 'ಸೆಟ್-ಟಾಪ್ ಬಾಕ್ಸ್' ಅಗತ್ಯವಿಲ್ಲದೇ ಈ ಸೇವೆಯನ್ನು ನೀಡುತ್ತಿದೆ.

ಈ ಹಳೆಯ ಟಿವಿಗಳಲ್ಲೂ ಹೊಸ ಸೇವೆ ಲಭ್ಯ
ಗ್ರಾಹಕರು ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಎಚ್‌ಡಿ ಗುಣಮಟ್ಟ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಈ ಸೇವೆ ಅನುಕೂಲ ಮಾಡಿಕೊಟ್ಟಿದೆ. ಈ ರಾಜ್ಯದಲ್ಲಿ ಮತ್ತಷ್ಟು ಗ್ರಾಹಕರು ಈ ಸೇವೆಯಡಿ ಬರುವ ವಿಶ್ವಾಸ ವ್ಯಕ್ತವಾಗಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಬಿಎಸ್‌ಎನ್‌ಎಲ್ ಸಂಸ್ಥೆಯ ಹೊಸ ಸೇವೆಗೆ ಸಾವಿರಾರು ಚಂದಾದಾರರನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಹಳೆಯ LCD ಅಥವಾ LED ಟಿವಿಗಳಲ್ಲಿ ಫೈರ್ ಸ್ಟಿಕ್ ಬಳಸುವ ಮೂಲಕವೂ ಈ IFTV ಸೇವೆಯನ್ನು ಪಡೆಯಬಹದು.
ಗುಜರಾತ್ ಸೇರಿ 4 ರಾಜ್ಯಗಳಲ್ಲಿ IFTV ಸೇವೆ
ಗುಜರಾತ್‌ನಲ್ಲಿ ಹೊಸ ಸೇವೆ ಆರಂಭಿಸಿರುವ ಕುರಿತು BSNL ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಹಿತಿ ನೀಡಿದೆ. ರಾಜ್ಯದ ಟೆಲಿಕಾಂ ವಲಯದಲ್ಲಿ ಹೊಸ ಸೇವೆ ಸಂಚಲನ ಸೃಷ್ಟಿಸುತ್ತಿದೆ. ಕಳೆದ ಬಾರಿ ಈ IFTV ಸೇವೆಯನ್ನು ಮಧ್ಯಪ್ರದೇಶ, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ಆರಂಭಿಸಲಾಗಿದೆ. ಪಂಜಾಬ್ ನಲ್ಲಿ ಟೆಲಿಕಾಂ ಸಂಸ್ಥೆಯು ಸ್ಕೈಪ್ರೊ ಜೊತೆ ಪಾಲುದಾರಿಕೆ ಹೊಂದಿದೆ.

2024ರಲ್ಲಿ ಈ ಹೊಸ ಸೇವೆ ಬಗ್ಗೆ BSNL ಘೋಷಣೆ ಮಾಡಿತ್ತು. ಅದರಂತೆ ಒಂದೊಂದೆ ರಾಜ್ಯಕ್ಕೆ ಸೇವೆ ವಿಸ್ತರಿಸುತ್ತಿದೆ. ಇತ್ತೀಚೆಗೆ ಪುದುಚೇರಿಯಲ್ಲಿ BiTV ಎಂದು ಕರೆಯಲ್ಪಡುವ ಡೈರೆಕ್ಟ್-ಟು-ಮೊಬೈಲ್ (D2M) ಸೇವೆಯನ್ನು BSNL ಪ್ರಾರಂಭಿಸಿದೆ. ಇದರಿಂದ 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ಗ್ರಾಹಕರು ಮೊಬೈಲ್ ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.
ಹೆಚ್ಚುವರಿ ವೆಚ್ಚ ಭರಸಬೇಕಿಲ್ಲ
ಹೊಸ IFTV ಸೇವೆಯು ಶುರುವಾದ ರಾಜ್ಯಗಳಲ್ಲಿ ತಡೆರಹಿತ ಸಂಪರ್ಕ ಮತ್ತು ಡಿಜಿಟಲ್ ಮನರಂಜನೆ ನೀಡುತ್ತಿದೆ. ದೇಶದ ಮೊದಲ ಫೈಬರ್ ಆಧಾರಿತ ಇಂಟರ್ನೆಟ್ ಟಿವಿ ಸೇವೆ ಇದಾಗಿದೆ. ಗ್ರಾಹಕರು ಗುಣಮಟ್ಟದ ಸೇವೆನಯಲ್ಲಿ ಕಡಿಮೆ ಬೆಲೆಗೆ ಆನಂದಿಸುತ್ತಿದ್ದಾರೆ. ಇದಕ್ಕೆ ಹೆಚ್ಚುವರಿ ವೆಚ್ಚ ಭರಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
4ಜಿ ಇಂಟರ್‌ನೆಟ್ ಸೇವೆ ನೀಡುವಲ್ಲಿ ನಿರತವಾಗಿರುವ ಟೆಲಿಕಾಂ ಸಂಸ್ಥೆಯು 5ಜಿ ಸೇವೆಗೆ ಅಪ್‌ಗ್ರೇಡ್ ಆಗಲು ತಯಾರಿ ನಡೆಸಿದೆ. ಇದರ ಕಾರ್ಯ ನಿರ್ವಹಣೆ, ಅಡೆತಡೆ ಇಲ್ಲದ ಇಂಟರ್‌ನೆಟ್ ಸೇವೆಗಾಗಿ ದೇಶಾದ್ಯಂತ 100,000 ಕ್ಕೂ ಹೆಚ್ಚು ಹೊಸ ಮೊಬೈಲ್ ಟವರ್ ನಿರ್ಮಿಸಲಾಗುತ್ತಿದೆ. ಈಗಾಗಲೇ 60,000ಕ್ಕೂ ಹೆಚ್ಚು ಮೊಬೈಲ್ ಟವರ್ ನಿರ್ಮಾಣ ಕಾರ್ಯ ನಡೆದಿದೆ.












Click it and Unblock the Notifications