Telangana Election: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಆರ್‌ಎಸ್
ಹೈದರಾಬಾದ್: ದಕ್ಷಿಣ ಭಾರತದ ಮತ್ತೊಂದು ಪ್ರಮುಖ ರಾಜ್ಯ ಚುನಾವಣೆಗೆ ಸಜ್ಜಾಗಿದೆ. ತೆಲಂಗಾಣ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಭಾರತ ರಾಷ್ಟ್ರ ಸಮಿತಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಅಚ್ಚರಿ ಮೂಡಿಸಿದೆ. ಬಿಆರ್‌ಎಸ್ ಅಧ್ಯಕ್ಷರೂ ಆಗಿರುವ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ.
ತೆಲಂಗಾಣ ನೂತನ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ನಂತರ ಚಂದ್ರಶೇಖರ್ ರಾವ್ ಅವರು ಸತತವಾಗಿ 2 ಬಾರಿ ಸಿಎಂ ಆಗಿದ್ರು. ಈ ಬಾರಿ ಕೂಡ ಗೆಲ್ಲುವ ಹುಮ್ಮಸ್ಸಿನಲ್ಲೇ ಇದೆ BRS ಪಕ್ಷ. ಹೀಗೆ ತೆಲಂಗಾಣ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ ಬಿಆರ್‌ಎಸ್ ಪಕ್ಷ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ತೆಲಂಗಾಣ ಸಿಎಂ ಕೆಸಿಆರ್ ಅಕ್ಟೋಬರ್ 16ರಂದು ವಾರಂಗಲ್‌ನಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತೆಲಂಗಾಣ ಚುನಾವಣೆಗೆ ರಣಕಹಳೆ ಮೊಳಗಿದೆ.

ಚುನಾವಣೆಗೆ ಈಗಲೇ ತಯಾರಿ ಶುರು
ಅಂದಹಾಗೆ ತೆಲಂಗಾಣ ರಾಜ್ಯದಲ್ಲಿ 119 ಕ್ಷೇತ್ರಗಳಿವೆ. ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಬೇಕಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಭಾರತ ರಾಷ್ಟ್ರ ಸಮಿತಿ ಪಕ್ಷವು 88 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಒಟ್ಟು 19 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. ಈ ಬಾರಿ ಚುನಾವಣೆಗೆ ಮೊದಲೇ ತಯಾರಿ ಆರಂಭಿಸಿದೆ BRS ಪಕ್ಷ. ಈ ಕಾರಣಕ್ಕೆ ಬೇಗ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಜೊತೆಗೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರನ್ನು ಪಕ್ಷದಿಂದ ಹೊರಹಾಕುತ್ತೇವೆ ಎಂದು ಹೇಳಿದ್ದಾರೆ KCR. ಈ ಮೂಲಕ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಎಸ್‌ಸಿ & ಎಸ್‌ಟಿ ಸಮುದಾಯಕ್ಕೆ 30 ಸ್ಥಾನ
ಬೋತ್, ಖಾನಾಪುರ, ವೈರಾ, ಕೋರುಟ್ಲಾ, ಉಪ್ಪಲ್, ಆಸಿಫಾಬಾದ್ ಮತ್ತು ಮೆಟ್‌ಪಲ್ಲಿ ಸೇರಿ ಏಳು ಸ್ಥಾನಗಳಲ್ಲಿ ಬಿಆರ್‌ಎಸ್ ಅಭ್ಯರ್ಥಿಗಳನ್ನು ಬದಲಾಯಿಸಿದೆ. ಹಾಗೇ ಆಡಳಿತ ಪಕ್ಷ ಗೋಶಾಮಹಲ್, ನಾಂಪಲ್ಲಿ, ಜನಾಂವ್ & ನರಸಾಪುರ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ನಿರ್ಧರಿಸಿಲ್ಲ. ಇನ್ನು 115 ಸ್ಥಾನಗಳಲ್ಲಿ ಒಟ್ಟಾರೆ 30 ಸ್ಥಾನಗಳಿಗೆ ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ 119 ಸದಸ್ಯ ಬಲದ ತೆಲಂಗಾಣದಲ್ಲಿ ಬಿಆರ್‌ಎಸ್ 88 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಒಟ್ನಲ್ಲಿ ಕರ್ನಾಟಕ ಚುನಾವಣೆ ಬಳಿಕ ಮತ್ತೊಂದು ಪ್ರಮುಖ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಗೆ ತಯಾರಿ ಸಾಗಿದೆ. ಕೆಸಿಆರ್ ನೇತೃತ್ವದಲ್ಲಿ ಬಿಆರ್‌ಎಸ್ ಪಕ್ಷವು ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಕಾಮರೆಡ್ಡಿ ಹಾಗೂ ಗಜ್ವೇಲ್ ಕ್ಷೇತ್ರಗಳಿಂದ ಸಿಎಂ ಕೆಸಿಆರ್ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹಾಗೇ ಸಚಿವ ಕೆ.ಟಿ. ರಾಮರಾವ್ ಸಿರ್ಸಿಲ್ಲಾ ಕ್ಷೇತ್ರದಲ್ಲಿ ಎಲೆಕ್ಷನ್ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ. ಲೋಕಸಭೆ ಚುನಾವಣೆಗೂ ಮೊದಲು ಹೈವೋಲ್ಟೇಜ್ ಚುನಾವಣೆ ನೋಡಲಿರುವ ನೆರೆ ರಾಜ್ಯ ತೆಲಂಗಾಣ, ಈ ಬಾರಿ ಯಾವ ರೀತಿಯ ಫಲಿತಾಂಶ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications