ಚುನಾವಣೆ ಸಮೀಪದಲ್ಲೇ ಹಾರುತ್ತಿವೆ ವಿಕೆಟ್, ಖಾಲಿಯಾಗುತ್ತಿದೆ ಬಿಆರ್‌ಎಸ್- ತೆಲಂಗಾಣದ ಮೇಲೆ ಕರ್ನಾಟಕದ ಪ್ರಭಾವ
ಹೈದರಾಬಾದ್, ಅಕ್ಟೋಬರ್ 06: ತೆಲಂಗಾಣದ ಆಡಳಿತ ಪಕ್ಷ ಭಾರತ ರಾಷ್ಟ್ರ ಸಮಿತಿಯನ್ನು (ಬಿಆರ್‌ಎಸ್) ಈಗಾಗಲೇ ಹಲವು ಪ್ರಮುಖ ನಾಯಕರು ತೊರೆದಿದ್ದಾರೆ. ಇದು ಶುಕ್ರವಾರವೂ ಮುಂದುವರಿದಿದೆ. ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ ನಡೆಯುತ್ತಿರುವ ಬೆಳವಣಿಗೆಗಳು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ತೆಲಂಗಾಣದ ಖಾನಾಪುರ ಶಾಸಕಿ ರೇಖಾ ನಾಯ್ಕ್ ಅವರು ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಬಿಆರ್‌ಎಸ್ ಪಕ್ಷದಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಸಚಿವ ಕೆ ಟಿ ರಾಮರಾವ್ ಅವರು ತಮ್ಮ ಸ್ನೇಹಿತರಿಗೆ ಟಿಕೆಟ್ ನೀಡುತ್ತಿದ್ದಾರೆ. ಇಷ್ಟು ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಆದರೆ, ನನಗೆ ಟಿಕೆಟ್ ನೀಡುವ ಬದಲು ಜಾನ್ಸನ್ ರಾಥೋಡ್ ಅವರಿಗೆ ಟಿಕೆಟ್ ಘೋಷಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಖಾನಾಪುರ ಕ್ಷೇತ್ರದಿಂದ ಬಿಆರ್‌ಎಸ್ ಅಭ್ಯರ್ಥಿಯಾಗಿ ಜಾನ್ಸನ್ ರಾಥೋಡ್ ನಾಯ್ಕ್ ಅವರು ಕಣಕ್ಕಿಳಿಯಲಿದ್ದಾರೆ.
'ಮಹಿಳಾ ಮೀಸಲಾತಿ ಮಸೂದೆಗಾಗಿ ನಾನು ಕವಿತಾ ಜೊತೆಗೂಡಿ ಹೋರಾಡಿದೆ. ಪಕ್ಷದಲ್ಲಿ ಮಹಿಳೆಯರಿಗೆ ಕೊಡುವ ಗೌರವ ಇದೇನಾ? ಅವರಿಗೆ ತಕ್ಕ ಪಾಠ ಕಲಿಸುತ್ತೇನೆ' ಎಂದು ಕಣ್ಣೀರು ಹಾಕಿದ್ದಾರೆ.
ನಾನು ಖಂಡಿತವಾಗಿಯೂ ಕಣದಲ್ಲಿ ಉಳಿಯುತ್ತೇನೆ. ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸುತ್ತೇನೆ. ನನ್ನ ಕ್ಷೇತ್ರದ ಜನರಿಗೆ ಬಿಆರ್‌ಎಸ್ ಮಾಡಿದ ಎಲ್ಲಾ ಅನ್ಯಾಯಗಳನ್ನು ನಾನು ಎತ್ತಿ ತೋರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬಿಆರ್‌ಎಸ್‌ನಿಂದ ಖಾನಾಪುರ ಅಭ್ಯರ್ಥಿಯಾಗಿರುವ ಜಾನ್ಸನ್ ನಾಯ್ಕ್ ಅವರು ಎಸ್‌ಟಿ ಸಮುದಾಯದವರಲ್ಲ. ಅವರು ತೆಲಂಗಾಣ ಚಳವಳಿಯಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ದಯವಿಟ್ಟು ನನಗೆ ತೋರಿಸಿ ಎಂದು ರೇಖಾ ಹರಿಹಾಯ್ದಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.

ಮಾಜಿ ಎಂಎಲ್‌ಸಿ ಕಾಸಿರೆಡ್ಡಿ ನಾರಾಯಣರೆಡ್ಡಿ ಕಾಂಗ್ರೆಸ್ ಸೇರ್ಪಡೆ
ಬಿಆರ್‌ಎಸ್ ಮಾಜಿ ಎಂಎಲ್‌ಸಿ ಕಾಸಿ ನಾರಾಯಣರೆಡ್ಡಿ ಅವರು ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ಮಾಧ್ಯದವರೊಂದಿಗೆ ಮಾತನಾಡಿದ ಅವರು, 'ಎಂಪಿಟಿಸಿ, ಜಿಪಿಟಿಸಿ, ಸರಪಂಚ್‌ಗಳು ಸೇರಿದಂತೆ ಪ್ರಮುಖ ಮುಖಂಡರು ನನ್ನೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ತೆಲಂಗಾಣ ರಚನೆಯ ನಂತರ ಯುವಕರು ಉದ್ಯೋಗ ಮತ್ತು ರಾಜ್ಯದ ಅಭಿವೃದ್ಧಿ ಬಯಸಿದ್ದರು. ಆದರೆ, ಯಾವುದೇ ಅಭಿವೃದ್ಧಿಯಾಗಿಲ್ಲ' ಎಂದು ಹೇಳಿದ್ದಾರೆ.
'ಯೋಜನೆಗೆ ಕಲವಕುರ್ತಿ ಎಂದು ಹೆಸರಿಟ್ಟರೂ ಅಲ್ಲಿಗೆ ನೀರು ಹರಿಯಲಿಲ್ಲ. ಭೂಸ್ವಾಧೀನ ಮಾಡಿ ಇನ್ನೂ ಹಣ ನೀಡಿಲ್ಲ. ಜನರು ಜಮೀನು ಕಳೆದುಕೊಂಡರು. ಆ ಕಾಲುವೆಯಲ್ಲಿ ನೀರು ಬರಲೇ ಇಲ್ಲ. ಜಮೀನು ಕಳೆದುಕೊಂಡ ರೈತರಿಗೆ ರೈತ ಬಂಧು ಸಿಗುತ್ತಿಲ್ಲ. ನಾನು ಓದಿದ ಶಾಲೆಯಲ್ಲಿ ಜೂನಿಯರ್ ಕಾಲೇಜು ನಡೆಯುತ್ತಿದೆ. ಪದವಿ ಕಾಲೇಜುಗಳಿಲ್ಲ. ಎಂಎಲ್‌ಸಿ ಹುದ್ದೆ ಇದ್ದರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಆ ಪಕ್ಷದಲ್ಲಿ ಶಾಸಕರಿಗೆ ಮಾತ್ರ ಆದ್ಯತೆ ಸಿಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಘೋಷಿಸಿದ ಆರು ಭರವಸೆಗಳು ರಾಜ್ಯದ ಜನರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ನಾನು ನಂಬುತ್ತೇನೆ ಎಂದು ನಾರಾಯಣರೆಡ್ಡಿ ಪ್ರತಿಪಾದಿಸಿದ್ದಾರೆ.
ಅದಕ್ಕಾಗಿಯೇ ನಾನು ಕಾಂಗ್ರೆಸ್ ಸೇರಿದ್ದೇನೆ. ಜನರು ನನ್ನನ್ನು ಇಲ್ಲಿಗೆ ಕರೆತಂದರು. ನನ್ನ ಗೆಲುವನ್ನು ಖಚಿತಪಡಿಸುವ ಜವಾಬ್ದಾರಿ ಜನರ ಮೇಲಿದೆ. ಕಾಂಗ್ರೆಸ್ ಪಕ್ಷ ನನಗೆ ಶಾಸಕನಾಗಿ ಅವಕಾಶ ನೀಡಿದರೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ತುಮ್ಮಲ ನಾಗೇಶ್ವರ ರಾವ್ ಮತ್ತು ಮೈನಂಪಲ್ಲಿ ಹನುಮಂತ ರಾವ್ ಸೇರಿದಂತೆ ಹಲವು ಪ್ರಭಾವಿ ನಾಯಕರು ಬಿಆರ್‌ಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.












Click it and Unblock the Notifications