Bomb Threat to Ram Mandir: ಉದ್ಘಾಟನೆಗೂ ಮುನ್ನ ರಾಮಮಂದಿರಕ್ಕೆ ಬಾಂಬ್ ಬೆದರಿಕೆ: ಯೋಗಿ ಆದಿತ್ಯನಾಥ್ಗೂ ಪ್ರಾಣಕಂಠಕ!
ನವದೆಹಲಿ ಜನವರಿ 1: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಶುಭ ಗಳಿಗೆಯಲ್ಲಿ ದೇಶಾದ್ಯಂತದ ಸಂತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ ಈ ನಡುವೆಯೇ ದೇವಸ್ಥಾನಕ್ಕೆ ಬಾಂಬ್ ಹಾಕುವುದಾಗಿ ಇಮೇಲ್ ಮೂಲಕ ಬೆದರಿಕೆಯ ಸಂದೇಶವೊಂದು ಬಂದಿದೆ.
ಈ ಸಂದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್‌ಗೂ ಬೆದರಿಕೆಯನ್ನು ಹಾಕಲಾಗಿದೆ. ಬೆದರಿಕೆ ಸಂದೇಶ ಕಳುಹಿಸಿದವರು ಐಎಸ್‌ಐ ಜೊತೆ ಸಂಬಂಧ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ ಪೊಲೀಸರು ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಇಮೇಲ್ ಭದ್ರತೆ ಹೆಚ್ಚಳ
ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಇಮೇಲ್ ಕಳುಹಿಸಲಾಗಿದೆ. ಅದರಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದೆ ಎಂದೂ ಹೇಳಲಾಗುತ್ತಿದೆ. ಕಳುಹಿಸುವವರು ಜುಬೇರ್ ಹುಸೇನ್ ಖಾನ್ ಎಂದು ಬರೆದಿದ್ದಾರೆ. ಈ ಅಪರಿಚಿತ ಸಂದೇಶದಾರ ದೇವಸ್ಥಾನಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, STF ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ಸ್ವತಃ ದೇವೇಂದ್ರ ತಿವಾರಿಗೂ ಬೆದರಿಕೆ ಹಾಕಿದ್ದಾನೆ.
ತಿವಾರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ತನಗೆ ಇಂತಹ ಬೆದರಿಕೆಗಳು ಬರುತ್ತಿರುವುದು ಇದೇ ಮೊದಲಲ್ಲ. ಹಿಂದಿನ ಸಂದರ್ಭದಲ್ಲಿ ಎಫ್‌ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಖಚಿತವಾದ ಕ್ರಮಗಳನ್ನು ತೆಗೆದುಕೊಳ್ಳದೆ ಭರವಸೆಯನ್ನು ಮಾತ್ರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 27ರ ಸಂಜೆ ದೇವೇಂದ್ರ ತಿವಾರಿ ಅವರಿಗೆ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ.
ರಾಮಮಂದಿರ ಶಂಕುಸ್ಥಾಪನೆ ಸಂದರ್ಭದಲ್ಲಿ ಏಕತೆಗಾಗಿ ಮನವಿ
ಆರ್‌ಎಸ್‌ಎಸ್-ಸಂಯೋಜಿತ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮುಖ್ಯ ಪೋಷಕರಾದ ಇಂದ್ರೇಶ್ ಕುಮಾರ್, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಸ್ಲಿಮರು ಮತ್ತು ವಿವಿಧ ಧರ್ಮಗಳ ಜನರು ಶಾಂತಿಯುತವಾಗಿರಲು ಒತ್ತಾಯಿಸಿದರು.
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯುವ ಪ್ರಯುಕ್ತ 'ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್' ಎಂಬ ಮಂತ್ರ ಪಠಿಸುಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್ ಮುಖ್ಯ ಪೋಷಕ ಮತ್ತು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಅವರು ಮುಸ್ಲಿಮರು ಮತ್ತು ಇತರರಿಗೆ ಕರೆ ನೀಡಿದ್ದಾರೆ.
ದರ್ಗಾಗಳು, ಮಕ್ತಬ್ಗಳು, ಮದರಸಾಗಳು ಮತ್ತು ಮಸೀದಿಗಳಲ್ಲಿ 'ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್' ಪಠಣ ಮಾಡಬೇಕು ಎಂಬುದಾಗಿ ಎಂಆರ್ಎಂ ಮನವಿ ಮಾಡಿದೆ. ಅದನ್ನೇ ಪುನರುಚ್ಚರಿಸುತ್ತೇನೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ದೇಶದ ವೈವಿಧ್ಯಮಯ ಧಾರ್ಮಿಕ ಸಮುದಾಯಗಳ ಪರಂಪರೆ ಮತ್ತು ವಂಶಾವಳಿಯನ್ನು ಪ್ರಸ್ತಾಪಿಸಿದ ಅವರು, ಸುಮಾರು ಶೇ 99 ರಷ್ಟು ಮುಸ್ಲಿಮರು ಮತ್ತು ಇತರ ಹಿಂದೂಯೇತರರು ಭಾರತದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.
"ರಾಮ ಮಂದಿರ್, ರಾಷ್ಟ್ರ ಮಂದಿರ್ - ಎ ಕಾಮನ್ ಹೆರಿಟೇಜ್" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕುಮಾರ್, ಮನೆತನ, ಧಾರ್ಮಿಕ ನಂಬಿಕೆ ಇತ್ಯಾದಿ ವ್ಯತ್ಯಾಸಗಳ ಹೊರತಾಗಿಯೂ ದೇಶದ ಮುಸ್ಲಿಮರು ಹಾಗೂ ಇತರ ಹಿಂದೂಯೇತರರು ಭಾರತದ ಅವಿಭಾಜ್ಯ ಅಂಗವೇ ಆಗಿದ್ದಾರೆ ಎಂದಿದ್ದಾರೆ. ಜತೆಗೆ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಾಮೂಹಿಕ ಅಭಿವ್ಯಕ್ತಿಗೆ ಕರೆ ನೀಡಿದ್ದಾರೆ.












Click it and Unblock the Notifications