ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್
BMW Number Plate: ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಪ್ರಮುಖ ಉದಾಹರಣೆಯಾಗಿದೆ. ಸಿನಿಮೀಯ ಮಾದರಿಯಲ್ಲಿ ಬಟನ್ ಒತ್ತಿದರೆ ನಂಬರ್ ಪ್ಲೇಟ್ ಬದಲಾಗುವಂತೆ ಮಾಡಿದ್ದ ಬಿಎಂಡಬ್ಲ್ಯೂ ಕಾರಿನ ಮಾಲೀಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಸಂಚಾರಿ ಪೊಲೀಸರು ಕುಡಿದು ವಾಹನ ಚಲಾಯಿಸುವವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ BMW 5-ಸೀರೀಸ್ ಕಾರನ್ನು ತಡೆದ ಪೊಲೀಸರು ಅದರ ನಂಬರ್ ಪ್ಲೇಟ್ ನೋಡಿ ದಂಗಾಗಿದ್ದಾರೆ. ಕಾರಿನ ನಂಬರ್ ಪ್ಲೇಟ್‌ನಲ್ಲಿ ಎರಡು ನಂಬರ್‌ಗಳು ಕ್ಷಣಾರ್ಧದಲ್ಲಿ ಅದಲು ಬದಲಾಗುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಒಂದೇ ಕಾರಿನ ನಂಬರ್ ಪ್ಲೇಟ್‌ನಲ್ಲಿ 2 ನಂಬರ್‌ಗಳು
* TS 9 FQ 9999 (ತೆಲಂಗಾಣ ನೋಂದಣಿ)
* DL 6 CM 7097 (ದೆಹಲಿ ನೋಂದಣಿ)
ದಂಡಾಸ್ತ್ರದಿಂದ ತಪ್ಪಿಸಿಕೊಳ್ಳಲು ಹೈಟೆಕ್ ದಾರಿ
ಆರೋಪಿಯು ತನ್ನ ಕಾರಿನಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಚಲಿಸುವ 'ನಂಬರ್ ಪ್ಲೇಟ್ ಫ್ಲಿಪ್ಪರ್' ತಂತ್ರಜ್ಞಾನವನ್ನು ಅಳವಡಿಸಿದ್ದ. ಕಾರಿನ ಒಳಗಿನಿಂದಲೇ ಒಂದು ಬಟನ್ ಒತ್ತಿದರೆ, ನಂಬರ್ ಪ್ಲೇಟ್ ಬಲದಾಗಿ ಮತ್ತೊಂದು ನಂಬರ್ ಕಾಣಿಸಿಕೊಳ್ಳುತ್ತಿತ್ತು. ಸಿಗ್ನಲ್ ಜಂಪ್ ಮಾಡಿದಾಗ ಅಥವಾ ಅತೀ ವೇಗವಾಗಿ ಚಲಿಸುವಾಗ ದಂಡದಿಂದ ತಪ್ಪಿಸಿಕೊಳ್ಳಲು ಈತ ಈ ಹೈಟೆಕ್ ದಾರಿಯನ್ನು ಕಂಡುಕೊಂಡಿದ್ದ ಎಂದು ತಿಳಿದುಬಂದಿದೆ.
ಜುಬಿಲಿ ಹಿಲ್ಸ್ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ಆರ್.ಟಿ.ಒ ನಿಯಮಗಳ ಉಲ್ಲಂಘನೆ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಈ ಹೈಟೆಕ್ ವಂಚನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನ ಈತನ ಕಿಲಾಡಿ ಬುದ್ದಿಯನ್ನು ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
ಹೈದರಾಬಾದ್‌ನಲ್ಲಿ ಜೇಮ್ಸ್ ಬಾಂಡ್ ಸ್ಟೈಲ್ ವಂಚನೆ: ಬಟನ್ ಒತ್ತಿದರೆ ಬದಲಾಗುತ್ತೆ BMW ನಂಬರ್ ಪ್ಲೇಟ್!#HyderabadPolice #ViralWatch #OIKannada #OIReels #JubileeHills #BMW #JamesBondStyle #HighTechFraud #TrafficRules pic.twitter.com/7rHlDTeDsp
— oneindiakannada (@OneindiaKannada) April 12, 2026
ದೇಶದ ಇತರ ನಗರಗಳಲ್ಲೂ ಪ್ರಕರಣಗಳ ದಾಖಲು
ನಂಬರ್ ಪ್ಲೇಟ್‌ಗಳಲ್ಲಿ ವಂಚನೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪ್ರಕರಣಗಳು ಕೇವಲ ಹೈದರಾಬಾದ್‌ಗೆ ಸೀಮಿತವಾಗಿಲ್ಲ. ದೇಶದ ಇತರ ನಗರಗಳಲ್ಲಿಯೂ ಇಂತಹ ವಿಚಿತ್ರ ಪ್ರಕರಣಗಳು ದಾಖಲಾಗಿವೆ.
ಕೆಲವು ದ್ವಿಚಕ್ರ ವಾಹನ ಸವಾರರು ನಂಬರ್ ಪ್ಲೇಟ್‌ನ ಒಂದು ಅಥವಾ ಎರಡು ಅಂಕಿಗಳ ಮೇಲೆ ಸಣ್ಣ ಪಟ್ಟಿಗಳನ್ನು ಅಂಟಿಸುತ್ತಾರೆ. ಟ್ರಾಫಿಕ್ ಕ್ಯಾಮೆರಾಗಳು ಫೋಟೋ ತೆಗೆದಾಗ ನಂಬರ್ ತಪ್ಪಾಗಿ ಕಾಣಲಿ ಎಂಬುದು ಇವರ ಉದ್ದೇಶ. ಬೆಂಗಳೂರಿನಲ್ಲಿ ಇತ್ತೀಚೆಗೆ ಮ್ಯಾಗ್ನೆಟ್ ಬಳಸಿ ನಂಬರ್ ಪ್ಲೇಟ್ ಮರೆಮಾಚುತ್ತಿದ್ದ ಡೆಲಿವರಿ ಬಾಯ್‌ಗಳನ್ನು ಪೊಲೀಸರು ಹಿಡಿದು ದಂಡ ಹಾಕಿದ ಉದಾಹರಣೆಗಳಿವೆ.
ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ತೋರಿಸುವಂತೆ ನಂಬರ್ ಪ್ಲೇಟ್ ತಿರುಗುವ ತಂತ್ರಜ್ಞಾನವನ್ನು ವಿದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಇತ್ತೀಚೆಗೆ ಉತ್ತರ ಪ್ರದೇಶ ಮತ್ತು ಮುಂಬೈನಂತಹ ನಗರಗಳಲ್ಲಿಯೂ ಇಂತಹ ಕೇಸ್‌ಗಳು ಪತ್ತೆಯಾಗಿವೆ. ಇದರಲ್ಲಿ ಮೋಟಾರ್ ಚಾಲಿತ ವ್ಯವಸ್ಥೆಯಿದ್ದು, ಬಟನ್ ಒತ್ತಿದರೆ ಪ್ಲೇಟ್ ತಿರುಗಿ ಹಿಂದಿನ ಭಾಗದಲ್ಲಿರುವ ಮತ್ತೊಂದು ನಂಬರ್ ತೋರಿಸುತ್ತದೆ.
ಇಂತಹ ಕೃತ್ಯಗಳು ಕೇವಲ ಸಂಚಾರ ನಿಯಮ ಉಲ್ಲಂಘನೆಯಲ್ಲ, ಬದಲಾಗಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಅಡಿಯಲ್ಲಿ ಬರುತ್ತವೆ. ಸಿಕ್ಕಿಬಿದ್ದಲ್ಲಿ ಭಾರೀ ಮೊತ್ತದ ದಂಡದ ಜೊತೆಗೆ ವಾಹನ ಮುಟ್ಟುಗೋಲು ಮತ್ತು ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ. ಇತ್ತೀಚಿನ ಸ್ಮಾರ್ಟ್ ಟ್ರಾಫಿಕ್ ಸಿಸ್ಟಮ್ ವಾಹನದ ಬಣ್ಣ, ಮಾದರಿ ಮತ್ತು ಇಂಜಿನ್ ಸಂಖ್ಯೆಯನ್ನು ಪತ್ತೆ ಹಚ್ಚಬಲ್ಲದು, ಆದ್ದರಿಂದ ಇಂತಹ ಉಪಾಯಗಳು ದೀರ್ಘಕಾಲ ಕೆಲಸ ಮಾಡುವುದಿಲ್ಲ.












Click it and Unblock the Notifications