Delhi Election: ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್; ಬಿಜೆಪಿ-ಎಎಪಿ ಕಿತ್ತಾಟ
ಶಾಲೆಗಳಿಗೆ 400ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಆರೋಪಿಯುವ ರಾಜಕೀಯ ಪಕ್ಷದ ಜೊತೆ ಸಂಪರ್ಕ ಹೊಂದಿರುವ ಎನ್‌ಜಿಒ ಜೊತೆ ನಂಟು ಹೊಂದಿದ್ದಾನೆ ಎಂದು ದೆಹಲಿ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ಯುವಕ ನಂಟು ಹೊಂದಿರುವ ಎನ್‌ಜಿಒ ಈ ಮೊದಲು ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿಗೆ ಬಂಬಲ ಸೂಚಿಸಿತ್ತು ಎಂದು ಹೇಳಿದರು. ಪೊಲೀಸರು ರಾಜಕೀಯ ಪಕ್ಷದ ಹೆಸರು ಹೇಳಿರಲಿಲ್ಲ, ಆದರೆ ಬಿಜೆಪಿ ಸುದ್ದಿಗೋಷ್ಠಿ ನಡೆಸಿ ಅದು ಆಮ್ ಆದ್ಮಿ ಪಕ್ಷ ಎಂದು ಬಹಿರಂಗಪಡಿಸಿತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ ಬಿಜೆಪಿ ಈ ವಿಚಾರವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ನಾಯಕ ಸುಶಾಂಶು ತ್ರಿವೇದಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, "ದೆಹಲಿ ಸಿಎಂ ಅತಿಶಿಯ ಪೋಷಕರು ಅಫ್ಜಲ್ ಗುರುವನ್ನು ಉಳಿಸಲು ಪ್ರಯತ್ನ ಮಾಡಿದ್ದರು. ಎಎಪಿ ಜೊತೆ ಸಂಪರ್ಕ ಹೊಂದಿರುವ ಎನ್‌ಜಿಒ ಜೊತೆಗೆ ಬಾಂಬ್ ಬೆದರಿಕೆ ಇಮೇಲ್ ಕಳಿಸಿರುವ ಆರೋಪಿ ಸಂಬಂಧ ಹೊಂದಿದ್ದಾನೆಯೇ?" ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಎಎಪಿ ನಾಯಕ ಸಂಜಯ್ ಸಿಂಗ್, "ಬಿಜೆಪಿಯವರನ್ನು ಯಾವಾಗ ದೆಹಲಿ ಪೊಲೀಸ್ ಇಲಾಖೆಗೆ ಸೇರಿಸಲಾಗಿದೆ ಎಂದು ನಾನು ಕೇಳುತ್ತೇನೆ? ಚಿಕ್ಕ ಮಕ್ಕಳಿಗೆ ಬಾಂಬ್ ಬೆದರಿಕೆ ಹಾಕಿರುವ ಪ್ರಕರಣ ಇಟ್ಟುಕೊಂಡ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ, ನಿಮಗೆ ನಾಚಿಕೆಯಾಗಲ್ಲವಾ?" ಎಂದು ಪ್ರಶ್ನೆ ಮಾಡಿದರು.
ಘಟನೆ ಬಗ್ಗೆ ಪೊಲೀಸರು ಹೇಳಿದ್ದೇನು?
ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳಿಸಿದವರು ಯುವಕ ಎಂದು ಗುರುತಿಸಲಾಗಿದ್ದರೂ, ಇದು ಒಬ್ಬನ ಕೃತ್ಯವಾ ಅಥವಾ ಇನ್ನಷ್ಟು ಜನ ಭಾಗಿಯಾಗಿದ್ದಾರೆಯೇ ಎನ್ನುವುದನ್ನು ತಿಳಿಯಲು ಇನ್ನಷ್ಟು ತನಿಖೆ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ನಾವು ಮತ್ತಷ್ಟು ತನಿಖೆ ನಡೆಸಿದ್ದವೇ, ಇಮೇಲ್ ಕಳಿಸಿದವನ ಡಾಟಾ ಪಡೆದುಕೊಂಡಿದ್ದೇವೆ, ಆತನ ಕುಟುಂಬದ ವಿವರಗಳನ್ನು ಕೂಡ ಸಂಗ್ರಹಿಸಿದ್ದೇವೆ. ಯುವಕ ಸಾಮೂಹಿಕವಾಗಿ ಇಮೇಲ್‌ಗಳನ್ನು ಕಳಿಸಿದ್ದು, ಒಂದೇ ಸಂದರ್ಭದಲ್ಲಿ 250 ಶಾಲೆಗಳಿಗೆ ಇಮೇಲ್ ಕಳಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಆಯುಕ್ತ ಮಧುಪ್ ತಿವಾರಿ ಹೇಳಿದ್ದಾರೆ.
ಇಮೇಲ್ ಕಳಿಸಲು ಬಳಸಿರುವ ವಿಧಾನವನ್ನು ಗಮನಿಸಿದರೆ, ಒಂಟಿಯಾಗಿ ಈ ಕೃತ್ಯ ಮಾಡಿರುವ ಸಾಧ್ಯತೆ ಇಲ್ಲ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಎಎಪಿ-ಬಿಜೆಪಿ ಕಿತ್ತಾಟ
ಇದೀಗ ಎಎಪಿ ಮತ್ತು ಬಿಜೆಪಿಗೆ ಕಿತ್ತಾಡಲು ಹೊಸ ವಿಚಾರ ಸಿಕ್ಕಂತಾಗಿದೆ. ಚುನಾವಣೆ ಘೋಷಣೆಯಾಗುವ ಮುಂಚೆಯಿಂದಲೂ ಬಿಜೆಪಿ ಮತ್ತು ಎಎಪಿ ದಿನಕ್ಕೊಂದು ವಿಚಾರ ಇಟ್ಟುಕೊಂಡು ಕಿತ್ತಾಡುತ್ತಲೇ ಇವೆ. ದೆಹಲಿ ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿಸಿದ್ದು, ಸ್ಲಂ ಜನರ ಬಗ್ಗೆ ಬಿಜೆಪಿ - ಎಎಪಿ ಆರೋಪ, ಪ್ರತ್ಯಾರೋಪಗಳು ಪ್ರಮುಖವಾಗಿವೆ. ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, 8ರಂದು ಮತ ಎಣಿಕೆ ನಡೆಯಲಿದೆ. ಎರಡು ಬಾರಿ ಅಧಿಕಾರ ಪಡೆದಿರುವ ಎಎಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದು, ಬಿಜೆಪಿ ಕೂಡ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದೆ.












Click it and Unblock the Notifications