Bihar Assembly Election 2025: ಬಿಹಾರ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ಪಟ್ಟಿ
ನವದೆಹಲಿ,ಅಕ್ಟೋಬರ್ 14: ಬಿಹಾರ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸಿದೆ. ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ನೇರ ಹಣಾಹಣಿಗೆ ಕಣ ಸಜ್ಜಾಗಿದ್ದು, ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಲೆಕ್ಕಚಾರ ಶುರುವಾಗಿದೆ. ಇಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ
ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, 71 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ ಹೆಚ್ಚಿನ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರಿಗೂ ಟಿಕೆಟ್ ನೀಡಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತಿರುವ 101 ಸ್ಥಾನಗಳಲ್ಲಿ, ಮೊದಲ ಪಟ್ಟಿಯು 71 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದೆ. ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಮೊದಲ 71 ಅಭ್ಯರ್ಥಿಗಳನ್ನು ಘೋಷಿಸಿದ್ದು, 30 ಸ್ಥಾನಗಳನ್ನು ಇನ್ನೂ ಘೋಷಿಸಲಾಗಿಲ್ಲ. ಕಣಕ್ಕಿಳಿಯಲಿರುವ ಪ್ರಮುಖ ನಾಯಕರಲ್ಲಿ ಮಂಗಲ್ ಪಾಂಡೆ, ರೇಣು ದೇವಿ ಮತ್ತು ತಾರಕೇಶ್ವರ ಸಿಂಗ್ ಸೇರಿದ್ದಾರೆ.
ಎನ್‌ಡಿಎಯಲ್ಲಿ ಸೀಟು ಹಂಚಿಕೆ ಕುರಿತು ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಇಂದು 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಬಿಹಾರ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಸಾಮ್ರಾಟ್ ಚೌಧರಿ ತಾರಾಪುರದಿಂದ ಸ್ಪರ್ಧಿಸಲಿದ್ದಾರೆ. ವಿಜಯ್ ಸಿನ್ಹಾ ಲಖಿಸರಾಯ್‌ನಿಂದ ಸ್ಪರ್ಧಿಸಲಿದ್ದಾರೆ. ಇನ್ನೂ 30 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸುವುದು ಬಾಕಿ ಇದೆ.
ಮಾಜಿ ಸಂಸದ ಮತ್ತು ಕೇಂದ್ರ ಸಚಿವ ರಾಮಕೃಪಾಲ್ ಯಾದವ್ ಅವರನ್ನ ದಾನಾಪುರದಿಂದ ಕಣಕ್ಕಿಳಿಸಲಾಗಿದೆ. ಸಿವಾನ್‌ನಿಂದ ಮಂಗಲ್ ಪಾಂಡೆ, ಹಾಜಿಪುರದಿಂದ ಅವಧೇಶ್ ಸಿಂಗ್, ಬಂಕಿಪುರದಿಂದ ನಿತಿನ್ ನವೀನ್, ಹಿಸುವಾದಿಂದ ಅನಿಲ್ ಸಿಂಗ್, ಪಟೇಪುರದಿಂದ ಲಖೀಂದ್ರ ಪಾಸ್ವಾನ್, ಔರಂಗಾಬಾದ್‌ನಿಂದ ತ್ರಿವಿಕ್ರಮ್ ನಾರಾಯಣ್ ಸಿಂಗ್ ಮತ್ತು ಛತ್ತಾಪುರದಿಂದ ನೀರಜ್ ಬಬ್ಲು ಅವರನ್ನು ಕಣಕ್ಕಿಳಿಸಲಾಗಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಎಣಿಕೆ ನಡೆಯಲಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮತ್ತು ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ (ಎಸ್) ತಲಾ 6 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.












Click it and Unblock the Notifications