ಅಣ್ಣಾಮಲೈ ಕಿರಿಕ್: ತಮಿಳುನಾಡಿನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳಲು ಮುಂದಾದ ಎಐಎಡಿಎಂಕೆ?
ಚೆನ್ನೈ, ಸೆಪ್ಟೆಂಬರ್ 18: ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ನಾವು ಮೈತ್ರಿ ಹೊಂದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಸೋಮವಾರ ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆ ಸಮಯದಲ್ಲಿ ರಾಜಕೀಯ ಮೈತ್ರಿ ಬಗ್ಗೆ ನಾವು ಯೋಚಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಆದರೆ, ಈಗ ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ನಮಗೆ ಯಾವುದೇ ರೀತಿಯ ಸ್ನೇಹ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮಾಡಿರುವ ಟೀಕೆಗೆ ಜಯಕುಮಾರ್ ಕಿಡಿಕಾರಿದ್ದಾರೆ. ದಿವಂಗತ ಮುಖ್ಯಮಂತ್ರಿಗೆ ಆಗುವ ಯಾವುದೇ ಅವಮಾನವನ್ನು ತಮ್ಮ ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ದಿವಂಗತ ಜೆ ಜಯಲಲಿತಾ ಸೇರಿದಂತೆ ಎಐಎಡಿಎಂಕೆ ನಾಯಕರ ಬಗ್ಗೆ ಅಣ್ಣಾಮಲೈ ಟೀಕೆ ಮಾಡಿದ್ದಾರೆ. ಇದು ಸರಿಯಲ್ಲ. ಅಣ್ಣಾಮಲೈ ಸಂಯಮದಿಂದ ಇರುವಂತೆ ಪಕ್ಷ ಕೋರಿತ್ತು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಬಯಸಿದರೂ ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆ ಮೈತ್ರಿ ಬಯಸುವುದಿಲ್ಲ. ನಮ್ಮ ನಾಯಕರ ಮೇಲಿನ ಈ ಟೀಕೆಗಳನ್ನೆಲ್ಲ ನಾವು ಸಹಿಸಬೇಕೇ? ಎಂದು ಜಯಕುಮಾರ್ ಪ್ರಶ್ನಿಸಿದ್ದಾರೆ.
ನಾವೇಕೆ ನಿಮ್ಮ ಭಾರವನ್ನು ಹೊತ್ತುಕೊಂಡು ಹೋಗಬೇಕು? ಬಿಜೆಪಿ ಇಲ್ಲಿ ಕಾಲಿಡಲು ಸಾಧ್ಯವಿಲ್ಲ. ನಿಮ್ಮ ವೋಟ್ ಬ್ಯಾಂಕ್ ಬಗ್ಗೆ ನಮಗೆ ತಿಳಿದಿದೆ ಎಂದು ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಇನ್ನು ಮೇಲೆ ಇದನ್ನೆಲ್ಲ ಸಹಿಸುವುದಿಲ್ಲ. ಬಿಜೆಪಿ ಎಐಎಡಿಎಂಕೆ ಜೊತೆ ಇಲ್ಲ. ಮೈತ್ರಿ ವಿಚಾರವನ್ನು ಚುನಾವಣೆ ಸಮಯದಲ್ಲಿ ಮಾತ್ರ ನಿರ್ಧರಿಸಬಹುದು. ಇದು ನಮ್ಮ ನಿಲುವು ಎಂದು ಅವರು ಹೇಳಿದ್ದಾರೆ.
ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಜಗಳಗಳು ಅಂತಿಮ ಹಂತಕ್ಕೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಪ್ರಧಾನಿ ಮೋದಿ ಅವರು ತಮಿಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಭಾಷೆಯ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಸ್ಟಾಲಿನ್ ನೇತೃತ್ವದ ಡಿಎಂಕೆ ಬಿಜೆಪಿಯನ್ನು ತಮಿಳುನಾಡಿನಲ್ಲಿ ನೆಲೆ ನಿಲ್ಲದಂತೆ ನೋಡಿಕೊಳ್ಳುತ್ತಿದೆ. ಹಿಂದಿ ಹೇರಿಕೆ, ಸನಾತನ ಧರ್ಮ ಕುರಿತ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ವಿರುದ್ಧ ಡಿಎಂಕೆ ಸಮರ ಸಾರಿದೆ.
ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಎಐಎಡಿಎಂ ಒಂದು ವೇಳೆ ದೂರವಾದರೆ, ಅದರಿಂದ ಬಿಜೆಪಿಗೆ ನಷ್ಟವಾಗಲಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.












Click it and Unblock the Notifications