ರಾಹುಲ್ ಗಾಂಧಿಗೆ 'ಮಂದಬುದ್ಧಿ': ಬಿಜೆಪಿ ರಾಜ್ಯಸಭಾ ಸದಸ್ಯೆ
ದುರ್ಗ್, ಜೂನ್ 22: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂದಬುದ್ಧಿಯವರು ಎನ್ನುವ ಮೂಲಕ ಛತ್ತೀಸಗಡದ ಬಿಜೆಪಿ ರಾಜ್ಯಸಭಾ ಸದಸ್ಯೆ ಸರೋಜ್ ಪಾಂಡೆ ವಿವಾದ ಸೃಷ್ಟಿಸಿದ್ದಾರೆ.
ಛತ್ತೀಸಗಡದ ದುರ್ಗ್ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಮಾತನಾಡುವ ವಿಚಾರಗಳು ಅಚ್ಚರಿ ಉಂಟುಮಾಡುತ್ತವೆ. ಅವರು ಖಂಡಿತವಾಗಿಯೂ ಕಲಿಯಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಕಲಿಕೆಗೆ ಒಂದು ವಯಸ್ಸಿದೆ. 40 ವರ್ಷ ವಯಸ್ಸಾದ ಬಳಿಕ ಕಲಿಯುವವರನ್ನು ಕಲಿತವನು ಎಂದು ಕರೆಯಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಯನ್ನು ಮಂದಬುದ್ಧಿಯವರು ಎನ್ನಬಹುದು ಎಂಬುದಾಗಿ ಹೇಳಿದ್ದಾರೆ.

ಸರೋಜ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೀಡುಮಾಡಿದೆ. ಈ ಹೇಳಿಕೆಯನ್ನು ಖಂಡಿಸಿ ಮತ್ತು ಬಿಜೆಪಿಯನ್ನು ಟೀಕಿಸಿ ಅನೇಕರು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
The kind of things he says are surprising. He is definitely trying to learn but there is an age to learn, a person who learns after the age of 40 cannot be called learned, such a person is called 'mand-buddhi': Saroj Pandey, BJP in Chhattisgarh's Durg on Rahul Gandhi (21.06) pic.twitter.com/piEIVa7kLL
— ANI (@ANI) 22 June 2018
ರಾಹುಲ್ ಗಾಂಧಿ ಮತ್ತು ಬಿಜೆಪಿ ನಾಯಕರು ಪರಸ್ಪರ ಟೀಕೆ, ವಾಗ್ದಾಳಿ ನಡೆಸಿರುವುದು ಹೊಸತಲ್ಲ. ಇತ್ತೀಚೆಗೆ ರಾಹುಲ್ ಗಾಂಧಿ ಅವರು ಕೊಕಾಕೋಲ ಕಂಪೆನಿ ಮಾಲೀಕ ಒಂದು ಕಾಲದಲ್ಲಿ ನಿಂಬೆ ಹಣ್ಣಿನ ಪಾನಕ ಮಾರುತ್ತಿದ್ದರು, ಮೆಕ್‌ಡೊನಾಲ್ಡ್ ಮಾಲೀಕ ಡಾಬಾ ನಡೆಸುತ್ತಿದ್ದರು ಎಂದು ಹೇಳುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, ಜ್ಞಾನ ಎನ್ನುವುದು ಕಲಿಕೆಯ ಮೂಲಕ ಮಾತ್ರ ಪಡೆಯಬೇಕೇ ಹೊರತು ವಂಶಪಾರಂಪರ್ಯವಾಗಿ ಬರುವುದಿಲ್ಲ ಎಂದು ಲೇವಡಿ ಮಾಡಿದ್ದರು.












Click it and Unblock the Notifications