Breaking News: ಮುನಿರತ್ನ ಜಾಮೀನು ಅರ್ಜಿ, ತೀರ್ಪು ಕಾಯ್ದಿರಿಸಿದ ಕೋರ್ಟ್‌

ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿಯ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಮುನಿರತ್ನ ಬಂಧಿಸಲಾಗಿದೆ. ಕೋರ್ಟ್ ಸೆಪ್ಟೆಂಬರ್ 30ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಸದ್ಯ ಮುನಿರತ್ನ ಇದ್ದಾರೆ.

ಶಾಸಕ ಮುನಿರತ್ನ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು 82ನೇ ಸಿಹೆಚ್‌ಹೆಚ್‌ ಕೋರ್ಟ್‌ (ಜನಪ್ರತಿನಿಧಿಗಳ ವಿಶೇಷ ಕೋರ್ಟ್) ನ್ಯಾಯಾಧೀಶ ಗಜಾನನ ಭಟ್ ನಡೆಸಿದರು. ವಾದ, ಪ್ರತಿವಾದ ಆಲಿಸಿ, ಜಾಮೀನು ಅರ್ಜಿಯ ಆದೇಶವನ್ನು ಸೆಪ್ಟೆಂಬರ್ 19ರ ಗುರುವಾರಕ್ಕೆ ಕಾಯ್ದಿರಿಸಿದರು.

BJP MLA Munirathna Bail Court Reserved Order For September 19

ಮಂಗಳವಾರಕ್ಕೆ ಮುನಿರತ್ನ ಎರಡು ದಿನದ ಪೊಲೀಸ್ ಕಸ್ಟಡಿ ಅಂತ್ಯಗೊಂಡಿತ್ತು. ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಅವರನ್ನು ಸೆಪ್ಟೆಂಬರ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಮುನಿರತ್ನ ಪರವಾಗಿ ವಕೀಲ ಅಶೋಕ್ ಹಾರನಹಳ್ಳಿ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.

"ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಮುನಿರತ್ನ ಅವರು ತಿರುಪತಿಗೆ ಹೋಗುವಾಗ ಬಂಧಿಸಲಾಗಿದೆ. ನೋಟಿಸ್ ಕೊಡದೇ ಅವರನ್ನು ಬಂಧಿಸಲಾಗಿದೆ. ಇದು ಸುಪ್ರೀಂಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಿದೆ" ಎಂದು ವಾದ ಮಂಡಿಸಿದ್ದರು.

ಮುನಿರತ್ನ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ ಕಾರಣ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಬುಧವಾರ ಅರ್ಜಿ ವಿಚಾರಣೆ ನಡೆಸಿ, ಗುರುವಾರಕ್ಕೆ ತೀರ್ಪು ಕಾಯ್ದಿರಿಸಲಾಗಿದೆ.

ಭಾನುವಾರ ಬೆಂಗಳೂರು ಪೊಲೀಸರು ಆಂಧ್ರ ಪ್ರದೇಶಕ್ಕೆ ಮುನಿರತ್ನ ತೆರಳುವಾಗ ಬಂಧಿಸಿದ್ದರು. ಅವರ ವಿರುದ್ಧ ಎರಡು ಎಫ್‌ಐಆರ್ ದಾಖಲು ಮಾಡಲಾಗಿದೆ. ಎರಡೂ ಪ್ರಕರಣದಲ್ಲಿಯೂ ಜಾಮೀನು ಕೋರಿ ಮುನಿರತ್ನ ಅರ್ಜಿ ಸಲ್ಲಿಸಿದ್ದಾರೆ. ಎರಡೂ ಪ್ರಕರಣದ ತೀರ್ಪನ್ನು ಕೋರ್ಟ್‌ ಕಾಯ್ದಿರಿಸಿದೆ.

ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರ ಚಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯಕರ್ ಬೆಂಗಳೂರು ನಗರದ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದರು. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಮುನಿರತ್ನ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಭಾನುವಾರ ತಿರುಪತಿಗೆ ಹೊರಟಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ಕೋಲಾರದ ಬಳಿ ಬಂಧಿಸಿದ್ದರು.

ಮುನಿರತ್ನ ಗುತ್ತಿಗೆದಾರರಿಗೆ ಹಣ ನೀಡುವ ವಿಚಾರದಲ್ಲಿ ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಒತ್ತಾಯಿಸುತ್ತಿದೆ.

ಮುನಿರತ್ನ ಬಂಧನ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ. ಕೆ. ಸುರೇಶ್ ಸೋಲಿನ ಸೇಡು ತೀರಿಸಿಕೊಳ್ಳಲು ರಾಜಕೀಯ ಷಡ್ಯಂತ್ಯವನ್ನು ರೂಪಿಸಿ ಮುನಿರತ್ನ ಬಂಧಿಸಲಾಗಿದೆ ಎಂಬುದು ಬಿಜೆಪಿ ನಾಯಕರ ಆರೋಪವಾಗಿದೆ.

ಮುನಿರತ್ನರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪೊಲೀಸರು ಅವರನ್ನು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟು ಬಂದಿದ್ದಾರೆ. ಕೋರ್ಟ್ ಜಾಮೀನು ನೀಡಿದರೆ ಮುನಿರತ್ನ ಗುರುವಾರ ಅಥವ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+