ಈ ಬಾರಿ ಎನ್ ಡಿಎಗೆ ಮುನ್ನಡೆ ಖಚಿತ: ಎಬಿಪಿ ಸಮೀಕ್ಷೆ
ನವದೆಹಲಿ, ಫೆ.23: ದೇಶದಲ್ಲಿ ತಕ್ಷಣವೇ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿಎ ಏಕೈಕ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ. ಬಿಜೆಪಿ ನೇತೃತ್ವದ ಎನ್ ಡಿಎಗೆ 236 ಸ್ಥಾನಗಳು ದೊರೆಯಲಿದೆ. ಕಾಂಗ್ರೆಸ್ ನೇತೃತ್ವ ಯುಪಿಎ ಈ ಬಾರಿ ಚುನಾವಣೆಯಲ್ಲಿ ನೆಲಕಚ್ಚಲಿದ್ದು, ಕೇವಲ 92 ಸ್ಥಾನಕ್ಕೆ ತೃಪ್ತಿ ಹೊಂದಬೇಕಾಗುತ್ತದೆ.
ದೆಹಲಿಯಲ್ಲಿ ಅಧಿಕಾರ ಗದ್ದುಗೆ ಹಿಡಿದಿದ್ದ ಅರವಿಂದ್ ಕೇಜ್ರಿವಾಲ ಅವರ ಆಮ್ ಆದ್ಮಿ ಪಕ್ಷ ಸುಮಾರು 10 ಸ್ಥಾನಗಳನ್ನು ಪಡೆಯುವುದಲ್ಲದೆ ಹಲವು ಕಡೆ ಮತ ವಿಭಜನೆ ಮಾಡುವಲ್ಲಿ ಯಶಸ್ವಿಯಾಗಲಿದೆ. ಪ್ರಾದೇಶಿಕ ಪಕ್ಷಗಳ ನೇತೃತ್ವದ ತೃತೀಯ ರಂಗ 157 ಸ್ಥಾನಗಳನ್ನು ಪಡೆಯಲಿದ್ದು, ಸರ್ಕಾರ ರಚನೆಯಲ್ಲಿ ಬಿಎಸ್ ಪಿ, ಟಿಎಂಸಿ, ಎಐಎಡಿಎಂಕೆ ಪ್ರಮುಖ ಪಾತ್ರ ವಹಿಸಲಿವೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. [ಸಿ ಫೋರ್ ಸಮೀಕ್ಷೆ ಫಲಿತಾಂಶ]
ಎಬಿಪಿ ನ್ಯೂಸ್ ಹಾಗೂ ನೆಲ್ಸನ್ ಮತ ಸಮೀಕ್ಷಾ ಸಂಸ್ಥೆ ದೇಶದ 28 ರಾಜ್ಯಗಳಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ ಬಿಜೆಪಿ ಈ ಬಾರಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಈ ಬಾರಿ ಕಮಲ ಪಕ್ಷ ಹೆಚ್ಚಿನ ಸ್ಥಾನ ಪಡೆಯಲಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ದುಪ್ಪಟ್ಟಾಗಲಿದೆ. ಈ ಬಾರಿ ಬಿಜೆಪಿ ಪಕ್ಷವೇ ಸುಮಾರು 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಇನ್ನಷ್ಟು ವಿವರ ಮುಂದೆ ಓದಿ...

ಸರ್ಕಾರ ರಚನೆಗೆ 272 ಮ್ಯಾಜಿಕ್ ಸ್ಥಾನಗಳು ಬೇಕು
ಬಿಜೆಪಿ ಮೈತ್ರಿ ಕೂಟದಲ್ಲಿರುವ ಶಿರೋಮಣಿ ಅಕಾಲಿದಳ, ಶಿವಸೇನೆ ಸೇರಿ 236 ಸ್ಥಾನ ಪಡೆಯಲಿದೆ. ಒಟ್ಟು ಲೋಕಸಭೆಯ 543 ಸ್ಥಾನಗಳಲ್ಲಿ ಸರ್ಕಾರ ರಚನೆಗೆ 272 ಸ್ಥಾನಗಳು ಬೇಕು. ಎನ್ ಡಿಎ 236 ಸ್ಥಾನಗಳನ್ನು ಪಡೆದರೆ ಸರ್ಕಾರ ರಚನೆಗೆ ಇನ್ನು 36 ಸದಸ್ಯರ ಕೊರತೆ ಎದುರಾಗಲಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎಗೆ ಹೀನಾಯ ಸೋಲು
ಕೇಂದ್ರದಲ್ಲಿ ಎರಡು ಬಾರಿ ಅಧಿಕಾರ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಈ ಬಾರಿ ಹೀನಾಯವಾಗಿ ಸೋಲು ಕಾಣಲಿದೆ. ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ ಈ ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆ ಎಂಬುದು ಮತದಾರರ ಅಭಿಪ್ರಾಯದಿಂದ ಹೊರ ಬಿದ್ದಿದೆ.
ಯುಪಿಎ ಕೇವಲ 92 ಸ್ಥಾನಗಳನ್ನು ಮಾತ್ರ ಪಡೆದರೆ ಶತಮಾನದಲ್ಲೇ ಕಾಂಗ್ರೆಸ್ ಹಿಂದೆಂದೂ ಕಾಣದಷ್ಟು ಹೀನಾಯ ಸ್ಥಿತಿ ತಲುಪಲಿದೆ.

ದಿಕ್ಕುವಾರು ಸಮೀಕ್ಷೆ ಫಲಾ ಫಲ, ಬಲಾಬಲ
ಬಿಜೆಪಿ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ತಲಾ 88, ದಕ್ಷಿಣ ಭಾಗದಲ್ಲಿ 21 ಹಾಗೂ ಪೂರ್ವ ವಲಯದಲ್ಲಿ 39 ಸ್ಥಾನಗಳನ್ನೂ ಪಡೆಯಲಿದೆ. ಅದೇ ರೀತಿ ಕಾಂಗ್ರೆಸ್ 23, 22, 26 ಮತ್ತು 21 ಸ್ಥಾನ ಪಡೆಯಲಿದೆ.

ಸರ್ಕಾರ ರಚನೆಯಲ್ಲಿ ತೃತೀಯ ರಂಗದ ಪಾತ್ರ
ಪ್ರಾದೇಶಿಕ ಪಕ್ಷಗಳ ನೇತೃತ್ವದಲ್ಲಿ ರಚನೆಯಾಗುತ್ತಿರುವ ತೃತೀಯ ರಂಗ ಒಟ್ಟು 157 ಸ್ಥಾನಗಳನ್ನು ಪಡೆಯಲಿದೆ. ಇದರಲ್ಲಿ ಟಿಎಂಸಿ 29, ಎಐಡಿಎಂಕೆ 19, ಬಿಜೆಡಿ 16, ಬಿಎಸ್ ಪಿ 13, ಡಿಎಂಕೆ 13 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.

ದೇಶದ ಮುಂದಿನ ಪ್ರಧಾನಿ ಯಾರಾಗಬೇಕು
ದೇಶದ ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದಕ್ಕೆ ಎಂದಿನಂತೆ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ. ಸಮೀಕ್ಷೆಯಲ್ಲಿ ಶೇ.57ರಷ್ಟು ಜನರು ಬೆಂಬಲ ಸೂಚಿಸಿದರೆ, ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಶೇ.18ರಷ್ಟು ಮತ ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರಿಗೆ ಶೇ 3 ರಷ್ಟು ಮತಗಳು ದಕ್ಕಿವೆ.

ಚುನಾವಣೆ ಕಾಲದಲ್ಲಿ ದೇಶದ ದೊಡ್ಡ ಸಮಸ್ಯೆ?
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಕಾಡುತ್ತಿರುವ ಸಮಸ್ಯೆಗಳತ್ತ ಮತದಾರರು ಬೆಳಕು ಚೆಲ್ಲಿದ್ದು, ಶೇ46ರಷ್ಟು ಮಂದಿ ಬೆಲೆ ಏರಿಕೆ, ಆರ್ಥಿಕ ಅಸಮತೋಲನ,ಹಣ ದುಬ್ಬರ ದೊಡ್ಡದು ಎಂದಿದ್ದಾರೆ. ದೈನಂದಿನ ಜೀವನ ಹಾಳು ಮಾಡುವಲ್ಲಿ ಶೇ 34 ರಷ್ಟು ಭ್ರಷ್ಟಾಚಾರ ಸಮಸ್ಯೆ ಇದ್ದರೆ ಶೇ18ರಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂಬ ಅಭಿಮತ ಹೊರಬಿದ್ದಿದೆ.












Click it and Unblock the Notifications