K. Annamalai: ಕೆ. ಅಣ್ಣಾಮಲೈ ಕೈ ತಪ್ಪಿದ ರಾಜ್ಯಸಭೆ ಉಪ ಚುನಾವಣೆ ಟಿಕೆಟ್
ನವದೆಹಲಿ, ಏಪ್ರಿಲ್ 29: ಆಂಧ್ರ ಪ್ರದೇಶದಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೂವರು ಸದಸ್ಯರನ್ನು ಆಯ್ಕೆ ಮಾಡಲು ಮೇ 9ರಂದು ಚುನಾವಣೆ ನಡೆಯಲಿದೆ. ಈ ಪೈಕಿ ಒಂದು ಸ್ಥಾನವನ್ನು ರಾಜ್ಯದ ಆಡಳಿತ ಪಕ್ಷವಾದ ಟಿಡಿಪಿ-ಜನಸೇನಾ ಮಿತ್ರಪಕ್ಷ ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ಬಿಜೆಪಿ ಕೆ. ಅಣ್ಣಾಮಲೈ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಿದೆ ಎಂಬ ಸುದ್ದಿ ಹಬ್ಬಿತ್ತು.
ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈಗೆ ರಾಜ್ಯಸಭೆ ಉಪ ಚುನಾವಣೆ ಟಿಕೆಟ್ ಕೈತಪ್ಪಿದೆ. ಬಿಜೆಪಿ ಆರ್‌ಎಸ್‌ಎಸ್ ಮೂಲದ ಪಾಕ ವೆಂಕಟ ಸತ್ಯನಾರಾಯಣ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ರಾಜ್ಯಸಭೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರವೇ ಕೊನೆಯ ದಿನವಾಗಿದೆ.

ಪಾಕ ವೆಂಕಟ ಸತ್ಯನಾರಾಯಣ ಆರ್‌ಎಸ್‌ಎಸ್ ಮೂಲದವರು. ಒಬಿಸಿ ಸಮಯದಾಯಕ್ಕೆ ಸೇರಿದವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಮತ್ತು ಸಂಘಟನೆಯ ಜೊತೆಗೆ ಹಂತ ಹಂತವಾಗಿ ಬೆಳೆದು ಬಂದವರು. ಆದ್ದರಿಂದ ಅವರನ್ನು ರಾಜ್ಯಸಭಾ ಉಪ ಚುನಾವಣೆಗೆ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ.
1976ರಲ್ಲಿ ಪಾಕ ವೆಂಕಟ ಸತ್ಯನಾರಾಯಣ ಆರ್‌ಎಸ್‌ಎಸ್ ಸೇರಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಅವರು ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಡಿಎನ್‌ಆರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅವರು 1980ರಲ್ಲಿ ಬಿಜೆಪಿ ಸೇರಿದ್ದರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ.
1996ರಲ್ಲಿ ಪಾಕ ವೆಂಕಟ ಸತ್ಯನಾರಾಯಣ ನಾಗ್ಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 2006ರಲ್ಲಿ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಅವರಿಗೆ ರಾಜ್ಯಸಭೆ ಉಪ ಚುನಾವಣೆ ಟಿಕೆಟ್ ಅನ್ನು ಬಿಜೆಪಿ ನೀಡಿದೆ.
ಕೆ. ಅಣ್ಣಾಮಲೈ ಹೆಸರು: ರಾಜ್ಯಸಭೆ ಉಪ ಚುನಾವಣೆಗೆ ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ಟಿಡಿಪಿ-ಜನಸೇನಾ ಮೈತ್ರಿಕೂಟ ಒಂದು ಸೀಟು ನೀಡುತ್ತಿದ್ದಂತೆಯೇ ಈ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬಂದಿತ್ತು. ಅದರಲ್ಲಿ ಪ್ರಮುಖವಾಗಿ ಕೆ. ಅಣ್ಣಾಮಲೈ ಮತ್ತು ಸ್ಮೃತಿ ಇರಾನಿ ಹೆಸರು ಇತ್ತು.
ತಮಿಳುನಾಡು ವಿಧಾನಸಭೆ ಚುನಾವಣೆ 2026ರಲ್ಲಿ ನಡೆಯಲಿದೆ. ಇದಕ್ಕಾಗಿ ಎಐಎಡಿಎಂಕೆ, ಬಿಜೆಪಿ ಮತ್ತೆ ಮೈತ್ರಿಮಾಡಿಕೊಂಡಿವೆ. ಬಿಜೆಪಿ ಅಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಅವರನ್ನು ಬದಲಾವಣೆ ಮಾಡಿ, ರಾಜ್ಯದ ನೂತನ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ನೇಮಕ ಮಾಡಲಾಗಿದೆ. ಆದ್ದರಿಂದ ಕೆ. ಅಣ್ಣಾಮಲೈಗೆ ರಾಜ್ಯಸಭೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.
ಬಿಜೆಪಿ ಕೆ. ಅಣ್ಣಾಮಲೈಗೆ ರಾಷ್ಟ್ರಮಟ್ಟದ ಹುದ್ದೆ ನೀಡಲಿದೆ ಎಂಬ ಸುದ್ದಿಗಳ ನಡುವೆಯೇ ಅವರನ್ನು ರಾಜ್ಯಸಭೆ ಚುನಾವಣೆಗೆ ಆಂಧ್ರ ಪ್ರದೇಶದಿಂದ ಕಣಕ್ಕಿಳಿಸಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಅಣ್ಣಾಮಲೈ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ವರದಿಗಳು ಬಂದಿದ್ದವು.
ತಮಿಳುನಾಡು ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದು. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು. ಎಂ. ಕೆ. ಸ್ಟಾಲಿನ್ ಮತ್ತೆ ಮುಖ್ಯಮಂತ್ರಿ ಆಗುವುದನ್ನು ತಡೆಯಬೇಕು ಎಂದು ಎಐಎಡಿಎಂಕೆ, ಬಿಜೆಪಿ ತಂತ್ರ ರೂಪಿಸಿ, ಮತ್ತೆ ಮೈತ್ರಿಮಾಡಿಕೊಂಡಿವೆ. ಎಐಎಡಿಎಂಕೆ ಬೇಡಿಕೆಯಂತೆ ಬಿಜೆಪಿ ಅಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಅವರನ್ನು ಬದಲಾವಣೆ ಮಾಡಲಾಗಿದೆ. ಕೆ. ಅಣ್ಣಾಮಲೈ ಅವರಿಗೆ ಯಾವ ಹುದ್ದೆ ನೀಡಲಾಗುತ್ತದೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.












Click it and Unblock the Notifications