ಪಾಟೀದಾರ್ ಮೀಸಲಾತಿ ಸೂತ್ರ ಬಹಿರಂಗಪಡಿಸಿ: ಕಾಂಗ್ರೆಸ್ ಗೆ ಬಿಜೆಪಿ ಸವಾಲ್
ಅಹಮದಾಬಾದ್, ನವೆಂಬರ್ 28: ಮೀಸಲಾತಿ ವಿಚಾರಲ್ಲಿ ಪಟೇಲ್ ಸಮುದಾಯವನ್ನು ಕಾಂಗ್ರೆಸ್ ಹಾದಿ ತಪ್ಪಿಸುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ಮತ್ತು ಅವರು ಪಟೇಲರಿಗೆ ಹೇಗೆ ಮೀಸಲಾತಿ ನೀಡುತ್ತೀರಿ ಎಂಬುದನ್ನು ಬಹಿರಂಗಪಡಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಶೇಕಡಾ 50ರ ಮೀಸಲಾತಿ ಮಿತಿಯನ್ನು ಮೀರಿ ಪಾಟಿದಾರರಿಗೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಹೀಗಾಗಿ ಹೇಗೆ ಮೀಸಲಾತಿ ನೀಡುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿಂದಿನ ಸುಪ್ರಿಂ ಕೋರ್ಟ್ ನ 7 ಆದೇಶಗಳನ್ನು ಉಲ್ಲೇಖಿಸಿದ ರವಿಶಂಕರ್ ಪ್ರಸಾದ್, ಮೀಸಲಾತಿ ಮಿತಿ ಶೇ. 50 ಮೀರಬಾರದು ಎಂದು ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. 'ಕಾಂಗ್ರೆಸ್ ನ ನಡೆ ರಾಜಕೀಯ ಅವಕಾಶವಾದಿತನದ ಪರಮಾವಧಿ' ಎಂದು ಕಿಡಿಕಾರಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪಟೇಲರ ಮತಸೆಳೆಯಲು ಮಾತ್ರ ಕಾಂಗ್ರೆಸ್ ಈ ಭರವಸೆ ನೀಡಿದೆ. ಆದರೆ ಈ ಭರವಸೆಯನ್ನು ಅದು ಇಡೇರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
"ಇದೇನು ಕೇವಲ ಕಣ್ಣುಗೆ ಮಣ್ಣೆರೆಚುವುದೇ ಅಥವಾ ವಂಚನೆಯೇ? ಮತಗಳನ್ನು ಸೆಳೆಯುವುದಕ್ಕಾಗಿ ನೀವು ಇದನ್ನು ಮಾಡುತ್ತಿದ್ದರೆ ಇದು ನಿಲ್ಲಬೇಕು" ಎಂದು ಅವರು ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಕಳೆದವಾರವಷ್ಟೇ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಸಂಚಾಲಕ ಹಾರ್ದಿಕ್ ಪಟೇಲ್ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದರು. ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿರುವುದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ಹಾರ್ದಿಕ್ ಹೇಳಿದ್ದರು.












Click it and Unblock the Notifications