ಮಂದಿರ ಅಲ್ಲೇ ಕಟ್ಟುವೆವು, ಸುಗ್ರೀವಾಜ್ಞೆ ಅಗತ್ಯವಿಲ್ಲ: ಅಮಿತ್ ಶಾ
ಜೈಪುರ, ನವೆಂಬರ್ 24: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಧರ್ಮ ಸಭೆ ನಡೆಸಿ, ರಾಮಮಂದಿರ ನಿರ್ಮಾಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವ ಸಮಯದಲ್ಲಿ ಅಮಿತ್ ಶಾ ಈ ಮಾತು ಹೇಳಿರುವುದು ಬಹು ಮುಖ್ಯವಾಗಿ ಪರಿಗಣಿಸಲಾಗುತ್ತಿದೆ.
ರಾಮ ಮಂದಿರ ನಿರ್ಮಾಣದ ನಮ್ಮ ಮಾತಿನಿಂದ ನಾವು ಹಿಂದೆ ಸರಿಯುವುದಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಸುಗ್ರೀವಾಜ್ಞೆಯ ಅಗತ್ಯವೂ ಇಲ್ಲ ಎಂದು ಅವರು ಹೇಳಿದ್ದಾರೆ. ಆರ್‌ಎಸ್‌ಎಸ್ ಸೇರಿ ಇತರೆ ಮಿತ್ರ ಪಕ್ಷಗಳು ಮಸೂದೆ ಅಥವಾ ಸುಗ್ರೀವಾಜ್ಞೆ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೇರುತ್ತಿವೆ.

ರಾಮಮಂದಿರ ವಿಷಯ ಈಗ ಸುಪ್ರೀಂಕೋರ್ಟ್ ಮುಂದೆ ಇದೆ. ಹೀಗಾಗಿ ಈ ವಿಚಾರವನ್ನು ಕೆದಕಲು ಬಯಸುವುದಿಲ್ಲ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರಕವಾಗುವಂಥ ತೀರ್ಪು ಹೊರಬೀಳಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಬಗ್ಗೆಯೂ ಮಾತನಾಡಿರುವ ಅವರು, 2014ರ ಮೋದಿ ಅಲೆ ಈಗಲೂ ಮುಂದುವರೆದಿದ್ದು, ಅದೇ ಮಾದರಿಯ ಗೆಲುವನ್ನು ಈಗಲೂ ಬಿಜೆಪಿ ಪಡೆಯಲಿದೆ ಎಂದು ಶಾ ಹೇಳಿದ್ದಾರೆ.












Click it and Unblock the Notifications