Kangana Ranaut: ರೈತರ ಪ್ರತಿಭಟನೆ ಬಗ್ಗೆ ಕಂಗನಾ ರಣಾವತ್ ಹೇಳಿಕೆ: ಛೀಮಾರಿ ಹಾಕಿದ ಬಿಜೆಪಿ
ಪದೇ ಪದೇ ನಾಲಿಗೆ ಹರಿಬಿಟ್ಟು ಒಂದಿಲ್ಲೊಂದು ವಿವಾದ ಮಾಡಿಕೊಳ್ಳುವ ನಟಿ, ಸಂಸದೆ ಕಂಗನಾ ರಣಾವತ್, ಇದೀಗ ರೈತರ ಪ್ರತಿಭಟನೆ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕಂಗನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ತನ್ನದೇ ಪಕ್ಷದ ಸಂಸದೆಗೆ ಛೀಮಾರಿ ಹಾಕಿದ್ದು, ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ. ಬಿಜೆಪಿಯಿಂದಲೇ ತಮ್ಮ ಹೇಳಿಕೆಗೆ ಖಂಡನೆ ವ್ಯಕ್ತವಾದ ಬಳಿಕ ಕಂಗನಾ ಇದೀಗ ಮುಜುಗರ ಅನುಭವಿಸಿದ್ದಾರೆ.
ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ರೈತರ ಪ್ರತಿಭಟನೆಯು ಭಾರತದಲ್ಲಿ ಬಾಂಗ್ಲಾದೇಶದಲ್ಲಿ ಆದಂತೆ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಹೇಳಿಕೆ ನೀಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಸ್ವಪಕ್ಷವೇ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಇಂತಹ ಹೇಳಿಕೆ ನೀಡದಂತೆ ಸೂಚನೆ
ಕಂಗನಾ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪಕ್ಷದ ಪರವಾಗಿ ನೀತಿ ವಿಷಯಗಳ ಬಗ್ಗೆ ಮಾತನಾಡಲು ಕಂಗನಾ ರಣಾವತ್‌ಗೆ ಅಧಿಕಾರವಿಲ್ಲ, ಅವರಿಗೆ ಈ ರೀತಿ ಹೇಳಿಕೆ ಕೊಡಲು ಅನುಮತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದೆ.
ಬಿಜೆಪಿ ಪಕ್ಷ ಛೀಮಾರಿ ಹಾಕುವ ಮುನ್ನ ಹರಿಯಾಣ ಮತ್ತು ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ಸಂಸದೆ ಕಂಗನಾ ರಣಾವತ್‌ಗೆ ಸಲಹೆ ಕೊಟ್ಟಿದ್ದರು. ರೈತರ ಬಗ್ಗೆ ಮಾತನಾಡುವುದ ಕಂಗನಾ ಅವರ ವ್ಯಾಪ್ತಿಗೆ ಬರುವುದಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರೈತ ಸ್ನೇಹಿಯಾಗಿದೆ. ವಿರೋಧ ಪಕ್ಷಗಳು ನಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಕಂಗನಾ ಹೇಳಿಕೆ ಕೂಡ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಅವರು ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೆ ನೀಡಬಾರದು ಎಂದು ಪಂಜಾಬ್ ಬಿಜೆಪಿ ನಾಯಕ ಹರ್ಜಿತ್ ಗ್ರೆವಾಲ್ ಹೇಳಿದ್ದಾರೆ.
ಕಂಗನಾ ಹೇಳಿಕೆಗೆ ಕಾಂಗ್ರೆಸ್ ಟೀಕೆ
ಕಂಗನಾ ರಣಾವತ್ ಅವರ ಹೇಳಿಕೆಗೆ ಕಾಂಗ್ರೆಸ್ ಕೂಡ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ರಣದೀಪ್ ಸುರ್ಜೆವಾಲ ಪ್ರತಿಕ್ರಿಯೆ ನೀಡಿ, ಕಂಗನಾ ರಣವಾತ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಹೇಳಿದ್ದಾರೆ. ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಸುರ್ಜೇವಾಲ, "ಇದು ಕಂಗನಾ ಅವರ ಮಾತುಗಳಾ ಅಥವಾ ಬಿಜೆಪಿಯ ಬೇರೆ ನಾಯಕರ ಮಾತುಗಳನ್ನು ಅವರು ನಕಲು ಮಾಡಿದ್ದಾರ ಎಂದು ಪ್ರಶ್ನೆ ಮಾಡಿದ್ದಾರೆ.
ಕಂಗನಾ ರೈತರ ವಿರುದ್ಧ ಹೇಳಿಕೆ ನೀಡುತ್ತಿರುವುದ ಇದೇ ಮೊದಲಲ್ಲ, 2020ರಲ್ಲಿ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ್ದ ಕಂಗನಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯನ್ನು ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಕೂಡ ನೋಡಿದ್ದಾಗಿ ಹೇಳಿದ್ದ ಅವರು, 100 ರೂಪಾಯಿ ಕೊಟ್ಟು ಪ್ರತಿಭಟನೆಗೆ ಕರೆತರಲಾಗಿದೆ ಎಂದಿದ್ದರು.
ಇದೇ ವರ್ಷ ಜೂನ್‌ನಲ್ಲಿ ದೆಹಲಿಗೆ ತೆರಳುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಂಗನಾ ರಣಾವತ್ ಕಪಾಳಕ್ಕೆ ಬಾರಿಸಿದ್ದರು. ರೈತರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಹೀಗೆ ಮಾಡಿದೆ ಎಂದು ಸಿಐಎಸ್‌ಎಫ್ ಸಿಬ್ಬಂದಿ ಹೇಳಿದ್ದರು.












Click it and Unblock the Notifications