Chennai Air Show: ಚೆನ್ನೈ ಏರ್ ಶೋ ವೇಳೆ ಜನರ ಸಾವಿಗೆ ಸ್ಟಾಲಿನ್ ಸರ್ಕಾರ ಕಾರಣ; ಬಿಜೆಪಿ
ಭಾನುವಾರ ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ವಾಯುಸೇನೆ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಬಿಸಿಲಿನ ಶಾಖ, ಕಾಲ್ತುಳಿತದಿಂದ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಇದೀಗ ಈ ಘಟನೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಐದು ಮಂದಿ ಸಾವಿಗೆ ಎಂಕೆ ಸ್ಟಾಲಿನ್ ಸರ್ಕಾರವೇ ಕಾರಣ ಎಂದು ಬಿಜೆಪಿ ಟೀಕಿಸಿದೆ. ಸರಿಯಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ವಿಫಲವಾಗಿದ್ದು ಈ ಘಟನೆಗೆ ಕಾರಣವಾಗಿದ್ದು, ಐವರು ಅಮಾಯಕರ ಸಾವಿಗೆ ತಮಿಳುನಾಡು ಸರ್ಕಾರ ಕಾರಣ ಎಂದು ಹೇಳಿದೆ.
ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಡಿಎಂಕೆ ಘಟನೆಯನ್ನು ದೇವಾಲದಯ ಉತ್ಸವದ ಸಂದರ್ಭದಲ್ಲಿ ಉಂಟಾಗುವ ಕಾಲ್ತುಳಿತಕ್ಕೆ ಹೋಲಿಕೆ ಮಾಡಿದ್ದು, ಸರ್ಕಾರದ ನಿರ್ಧಾರದಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದೆ.

ಘಟನೆ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಶೆಹಜಾದ್ ಪೂನಾವಾಲಾ, ಇದು ರಾಜ್ಯ ಸರ್ಕಾರ ಪ್ರಯೋಜಿತ ಕೊಲೆ ಎಂದು ಆರೋಪಿಸಿದರು. ಚೆನ್ನೈನಲ್ಲಿ ನಡೆದ ವಾಯುಸೇನೆ ವೈಮಾನಿಕ ಪ್ರದರ್ಶನದಲ್ಲಿ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿರುವುದು ದುರಂತವಲ್ಲ, ಇದು ರಾಜ್ಯ ಸರ್ಕಾರ ಪ್ರಾಯೋಜಿತ ಕೊಲೆ ಎಂದರು.
ಈ ಘಟನೆಗೆ ಡಿಎಂಕೆ ಸರ್ಕಾರ ಮತ್ತು ಸಿಎಂ ಎಂಕೆ ಸ್ಟಾಲಿನೆ ನೇರ ಹೊಣೆ. ಇದೊಂದು ಭ್ರಷ್ಟ ಸರ್ಕಾರ, ಘಟನೆಗೆ ಕಾರಣವಾಗಿರುವ ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಡಿಎಂಕೆ ಸರ್ಕಾರ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಡಿಎಂಕೆ ಪ್ರತಿಕ್ರಿಯೆ ಏನು?
ಬಿಜೆಪಿ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ಸರ್ಕಾರವು ದುರ್ಘಟನೆಯನ್ನು ತಪ್ಪಿಸಲು ಕ್ರಮ ವಹಿಸಿತ್ತು ಎಂದರು. ಮರೀನಾ ಬೀಚ್‌ನಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ ಸೇರಿದ್ದರಿಂದ ಇಂತಹ ಅವಘಡ ಸಂಭವಿಸಿದೆ. ದೇವಾಲಯದ ಉತ್ಸವಗಳಲ್ಲಿ ಕೂಡ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ವಿರೋಧ ಪಕ್ಷಗಳು ಯಾವಾಗಲೂ ಟೀಕಿಸಲೇ ಕಾಯುತ್ತಿರುತ್ತವೆ ಎಂದರು ಹೇಳಿದರು.
ಡಿಎಂಕೆ ನಾಯಕಿ ಕನಿಮೋಳಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಐದು ಜನರು ಮೃತಪಟ್ಟ ಸುದ್ದಿ ಕೇಳಿ ನೋವಾಗಿದೆ. ಮಿಲಿಟರಿ ವಿಮಾನ ಪ್ರದರ್ಶನ ವೀಕ್ಷಿಸಲು ಹೆಚ್ಚಿನ ಜನ ಸೇರಿದ್ದು, ತೀವ್ರವಾದ ಬಿಸಿಲಿನಿಂದ ಘಟನೆ ಸಂಭವಿಸಿದೆ. ಇಂತಹ ದೊಡ್ಡ ಪ್ರಮಾಣದಲ್ಲಿ ಜನ ಸೇರುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ವಿಮಾನ ಪ್ರದರ್ಶನ ನೋಡಲು ಲಕ್ಷಾಂತರ ಮಂದಿ ಎರಡು ಮೂರು ಗಂಟೆಗಳ ಕಾಲ ಸುಡುವ ಬಿಸಿನಲ್ಲಿ ನಿಂತಿದ್ದರು. ಅನೇಕರು ನಿರ್ಜಲೀಕರಣ, ಶಾಖದ ಹೊಡೆತದಿಂದ ತತ್ತರಿಸಿ ಅಸ್ವಸ್ಥಗೊಂಡ ಪರಿಣಾಮ ಐವರು ಸಾವನ್ನಪ್ಪಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರಿಂದ ಕಾರ್ಯಕ್ರಮ ಮುಗಿದ ಬಳಿಕ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಿತ್ತು, ಸಾವಿರಾರು ಜನ ಒಮ್ಮೆಲೆ ಕಾರ್ಯಕ್ರಮ ಸ್ಥಳದಿಂದ ಹೊರಟ ಕಾರಣ ಕಾಲ್ತುಳಿತದಂತಹ ಸ್ಥಿತಿ ಉಂಟಾಗಿತ್ತು.












Click it and Unblock the Notifications