Bihar Assembly Election 2025: ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ: ಮತದಾನ ಯಾವಾಗ?
ಹೊಸದಿಲ್ಲಿ,ಅಕ್ಟೋಬರ್ 06: : ಕಳೆದ ಅನೇಕ ದಿನಗಳಿಂದ ಭಾರೀ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ರಂಗಿಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇಂದು (ಸೋಮವಾರ, ಅಕ್ಟೋಬರ್ 06) ಕೇಂದ್ರ ಚುನಾವಣಾ ಆಯೋಗ ಬಿಹಾರ ವಿಧಾನಸಭಾ ಚುನಾವಣೆ-2025ಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಕೇಂದ್ರ ಚನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, 6 ನವೆಂಬರ್ ರಿಂದ 11 ನವೆಂಬರ್‌ವರೆಗೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಈ ಕುರಿತು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯಕ್ತ ಜ್ಞಾನೇಶ್ ಕುಮಾರ್, ಬಿಹಾರ ವಿಧಾನಸಭೆ ಚುನಾವಣೆಗೆ ಆಯೋಗ ಸಂಪೂರ್ಣ ಸಜ್ಜಾಗಿದೆ ಎಂದು ಸ್ಪಷ್ಟಪಡಿಸಿದರು. ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಒಟ್ಟು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆದರೆ, ಎರಡನೇ ಹಂತದ ಮತದಾನ 11ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ನಡೆಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 90,712 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 203 ಸಾಮಾನ್ಯ, 38 ದಲಿತರಿಗೆ ಮತ್ತು ಎರಡು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ. ಈ ಬಾರಿ ಬಿಹಾರದಲ್ಲಿ 392,000 ಪುರುಷ ಮತದಾರರು ಮತ್ತು 350,000 ಮಹಿಳಾ ಮತದಾರರಿದ್ದಾರೆ. ಹೆಚ್ಚುವರಿಯಾಗಿ, 1.4 ಮಿಲಿಯನ್ ಹೊಸ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1,200 ಮತದಾರರನ್ನು ನಿಗದಿಪಡಿಸಲಾಗಿದೆ. ಬಿಹಾರದ ಸುಮಾರು 7.42 ಕೋಟಿ ಮತದಾರರು ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಹಿಂದಿನ ಅಂದರೆ 2020ರ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು. ಈ ಬಾರಿಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಇನ್ನೂ ಬಿಹಾರದಲ್ಲಿ ಎಸ್‌ಐಆರ್ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎಸ್‌ಐಆರ್ ನಂತರದ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ದಿನಾಂಕದ ನಂತರ ಬಿಡುಗಡೆಯಾಗುವ ಮತದಾರರ ಪಟ್ಟಿ ಅಂತಿಮವಾಗಿರುತ್ತದೆ. ಬಿಹಾರದಲ್ಲಿ ಈ ಬಾರಿ ಒಟ್ಟು 14 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾವಣೆ ಮಾಡುವ ಮತದಾರರಿದ್ದಾರೆ. ನಿಮ್ಮ ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನೀವು 1950 ಗೆ ಕರೆ ಮಾಡುವ ಮೂಲಕ ವರದಿ ಮಾಡಬಹುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.
ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ಬಾಹ್ಯ ಒತ್ತಡವಿಲ್ಲದೇ ಕಾರ್ಯನಿರ್ವಹಿಸುತ್ತಿರುವುದಾಗಿ ಮುಖ್ಯ ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗವು ಪ್ರತಿ ಮತಗಟ್ಟೆಗೆ ಗರಿಷ್ಠ 1,200 ಮತದಾರರ ಮಿತಿಯನ್ನು ನಿಗದಿಪಡಿಸಿದೆ. ಇದು ಜನರು ಮತ ಚಲಾಯಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘ ಕಾಯುವಿಕೆಯನ್ನು ತಪ್ಪಿಸುತ್ತದೆ ಎಂದು ಹೇಳಿದರು.












Click it and Unblock the Notifications