ನಿಜಕ್ಕೂ ನಿತೀಶ್ ಕಿವಿಯಲ್ಲಿ ಮಂತ್ರವಾದಿ ಹೇಳಿದ್ದೇನು?
ಪಾಟ್ನ, ಅ.25: ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿ ಮಾತನಾಡಿದ ಚಿತ್ರಗಳು, ದೃಶ್ಯಗಳಿರುವ ವಿಡಿಯೋ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭಾರಿ ಕೋಲಾಹಲ ಎಬ್ಬಿಸುತ್ತಿದೆ.
ವಿಡಿಯೋದಲ್ಲಿ 'ನಿತೀಶ್ ಜಿಂದಾಬಾದ್, ಲಾಲು ಮುರ್ದಾಬಾದ್' ಎಂದು ಜ್ಯೋತಿಷಿ ಹೇಳಿದ್ದಾರೆ. ಅದರೆ, ಇದು ಹಳೆ ವಿಡಿಯೋ, ಅದರಲ್ಲಿ ಅಂಥದ್ದೇನಿಲ್ಲ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಲಕ್ಕಿ ಲಾಲೂ ಅವರು ಎದುರಿಸಿದ ಸೀಲಿಂಗ್ ಫ್ಯಾನ್ ಫಾಲಿಂಗ್ ಘಟನೆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಹವಾ ಸೃಷ್ಟಿಸಿದ ನಂತರ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. [ಲಕ್ಕಿ ಲಾಲೂ, ಸೀಲಿಂಗ್ ಫ್ಯಾನ್ ಬಿದ್ದರೂ ಬಚಾವ್!]

ನಿತೀಶ್ ಕುಮಾರ್ ಅವರು ಹಳೆ ವೈರಿ ಹಾಗೂ ಹಾಲಿ ಸ್ನೇಹಿತ ಲಾಲೂ ಪ್ರಸಾದ್ ಯಾದವ್ ಅವರನ್ನು ರಾಜಕೀಯವಾಗಿ ದೂರವಿರಿಸಲು ಅತೀಂದ್ರೀಯ ಶಕ್ತಿಗಳಿಗೆ ಮೊರೆ ಹೊಕ್ಕಿದ್ದಾರೆ ಎಂದು ಆರೋಪಿಸಲಾಗಿದೆ. ಜೂನ್ 2014ರ ಈ ವಿಡಿಯೋವನ್ನು ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ ಏನಿದೆ?: ವಿಡಿಯೋದಲ್ಲಿ ನಿತೀಶ್ ಕುಮಾರ್ ಹಾಗೂ ತಾಂತ್ರಿಕರ ದನಿ ಅಷ್ಟು ಸ್ಪಷ್ಟವಾಗಿಲ್ಲ. ಮಂಚದ ಮೇಲೆ ಕುಳಿತುಕೊಂಡಿರುವ ನಿತೀಶ್ ಅವರೊಂದಿಗೆ ಜ್ಯೋತಿಷಿ ಮಾತನಾಡುತ್ತಿರುವ ದೃಶ್ಯಗಳಿವೆ. ಅಪ್ಪಿಕೊಂಡು ಕಿವಿಯಲ್ಲಿ ಏನು ಗುಟ್ಟು ಹೇಳುವಂತಿದೆ. ಇವರಿಬ್ಬರ ಜೊತೆಗೆ, ಮೋಕಾಮ ಕ್ಷೇತ್ರದ ಜೆಡಿಯು ಅಭ್ಯರ್ಥಿ ನೀರಜ್‌ಕುಮಾರ್ ಅವರೊಂದಿಗೆ ಇದ್ದಾರೆ.
ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ ಜೊತೆಗೆ ಯಾಕೆ ಸೇರಿಕೊಂಡಿದ್ದೀರಿ ಎಂದು ಜ್ಯೋತಿಷಿ ನಿತೀಶ್‌ರನ್ನು ಪ್ರಶ್ನಿಸುವುದು ಕೇಳಿಸುತ್ತದೆ. 'ನಿತೀಶ್ ಜಿಂದಾಬಾದ್, ಲಾಲು ಮುರ್ದಾಬಾದ್' ಎಂದು ಜ್ಯೋತಿಷಿ ಹೇಳಿದ್ದಾರೆ. [ಬಿಹಾರ ಅಸೆಂಬ್ಲಿ ಸಮರ ಎರಡನೇ ಹಂತದ ಫೈಟ್]
ಈ ಕುರಿತು ಲಾಲು ಅವರನ್ನು ಪ್ರಶ್ನಿಸಿದಾಗ, ನನಗೆ ವಿಡಿಯೊ ಬಗ್ಗೆ ಗೊತ್ತಿಲ್ಲ ಎಂದರು. ಅಲ್ಲದೆ, ಈ ಜ್ಯೋತಿಷಿಗಳಿಗಿಂತ ನಾನೇ ದೊಡ್ಡ ಜ್ಯೋತಿಷಿ ಎಂದು ಕಿಡಿಮಾತನ್ನು ಹರಿಯಬಿಟ್ಟರು.
ಲಾಲೂ ಪ್ರಸಾದ್ ಹಿಡಿತದಿಂದ ತಪ್ಪಿಸಿಕೊಳ್ಳಲು ನಿತೀಶ್ ಕುಮಾರ್ ತಾಂತ್ರಿಕನನ್ನು ಭೇಟಿ ಮಾಡಿದ್ದಾರೆ ಎಂದು ಬಿಜೆಪಿಯ ಕೇಂದ್ರ ಸಚಿವ ಗಿರಿರಾಜ್ ಆಪಾದಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎರಡು ಹಂತದ ಮತದಾನ ಮುಗಿದಿದ್ದು, ಮುಂದಿನ ಹಂತದ ಚುನಾವಣೆ ಅಕ್ಟೋಬರ್ 28ರಂದು ನಡೆಯಲಿದೆ. ನವೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications