BBC ಸಾಕ್ಷ್ಯಚಿತ್ರ ವಿವಾದ: ‘ಗೋಡ್ಸೆ ಸಿನಿಮಾವನ್ನೂ ಬ್ಯಾನ್ ಮಾಡ್ತೀರಾ?’- ಬಿಜೆಪಿಗೆ ಓವೈಸಿ ಸವಾಲ್!
2002 ರ ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ತಡೆಯುವ ಆಡಳಿತ ಸರ್ಕಾರದ ಕ್ರಮದ ಬಗ್ಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ ಕುರಿತ ಮುಂಬರುವ ಚಿತ್ರಕ್ಕೂ ಪ್ರಧಾನಿಯವರು ತಡೆಯೊಡ್ಡುತ್ತಾರೆಯೇ ಎಂದು ಪ್ರಶ್ನಿಸಿದರು.
2002ರಲ್ಲಿ ನಡೆದ ಗುಜರಾತ್ ಗಲಭೆ ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಲಾಗಿದ್ದ ಬಿಬಿಸಿ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್‌ಗಳನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಕೇಂದ್ರದ ಈ ನಿರ್ಧಾರವನ್ನು ವಿರೋಧಿಸಿದ ಓವೈಸಿ 'ಗುಜರಾತ್ ಗಲಭೆಯಲ್ಲಿ ಬಾಹ್ಯಾಕಾಶ ಅಥವಾ ಆಕಾಶದಿಂದ ಬಂದು ಯಾರಾದರೂ ಜನರನ್ನು ಕೊಂದಿದ್ದಾರೆಯೇ? ಹತ್ಯೆ ಹಾಗೂ ಗಲಭೆಯಾಗಿರುವುದು ನಿಜ. ಅದರ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದು ತಪ್ಪೇನಿದೆ. ಅದರ ಮೇಲೆ ಯಾಕೆ ನಿಷೇಧ ಹೇರಲಾಗಿದೆ' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಜೊತೆಗೆ ಒವೈಸಿ ಗೋಡ್ಸೆ ಬಗ್ಗೆ ಆಡಳಿತಾರೂಢ ಸರ್ಕಾರದ ನಾಯಕರನ್ನು ಪ್ರಶ್ನಿಸಿದರು. 'ನಾನು ಪ್ರಧಾನಿ ಮತ್ತು ಬಿಜೆಪಿ ನಾಯಕರನ್ನು ಕೇಳುತ್ತೇನೆ, ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈಗ ಗೋಡ್ಸೆ ಮೇಲೆ ಸಿನಿಮಾ ಬಂದಿದೆ. ಗೋಡ್ಸೆ ಮೇಲೆ ತಯಾರಾಗುತ್ತಿರುವ ಸಿನಿಮಾವನ್ನು ಪ್ರಧಾನಿ ನಿಷೇಧಿಸುತ್ತಾರಾ?' ಎಂದು ಪ್ರಶ್ನೆ ಮಾಡಿದ ಅವರು ಗೋಡ್ಸೆ ಸಿನಿಮಾವನ್ನು ನಿಷೇಧಿಸುವಂತೆ ಓವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಗೋಡ್ಸೆ ಮತ್ತು ಸಾವರ್ಕರ್ ನಡುವೆ ವಿಭಿನ್ನ ರೀತಿಯ ಪ್ರೀತಿ ಇತ್ತು. ಗಾಂಧಿ ಹತ್ಯೆಯಾದ ಜನವರಿ 30 ರ ಮೊದಲು ಗೋಡ್ಸೆ ಚಿತ್ರವನ್ನು ಪ್ರಧಾನಿ ಮೋದಿ ನಿಷೇಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ.

ಬಿಬಿಸಿ ಸಾಕ್ಷ್ಯಚಿತ್ರ ವಿವಾದ
ಪಿಎಂ ಮೋದಿ ಕುರಿತ ಎರಡು ಭಾಗಗಳ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇಂದ್ರವು ನಿರ್ಬಂಧಿಸಿದ ನಂತರ ವಿರೋಧ ಪಕ್ಷಗಳು ಸರ್ಕಾರದ ಕ್ರಮವನ್ನು ಖಂಡಿಸಿವೆ. ಕೇಂದ್ರ ಸರ್ಕಾರ ಬಿಬಿಸಿ ಸಾಕ್ಷ್ಯಚಿತ್ರವನ್ನು "ಪ್ರಚಾರದ ತುಣುಕು" ಎಂದು ಕರೆದಿದೆ. ಬಹು ಯೂಟ್ಯೂಬ್ ವಿಡಿಯೊಗಳು ಮತ್ತು ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ.
ಗುಜರಾತ್ ಗಲಭೆಯ ಸಾಕ್ಷ್ಯಚಿತ್ರದ ಕುರಿತು ಬ್ರಿಟನ್‌ನ ರಾಷ್ಟ್ರೀಯ ಪ್ರಸಾರ ಸಂಸ್ಥೆ ಬಿಬಿಸಿ ಮಾಡಿರುವ 50ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಟ್ವಿಟ್ಟರ್‌ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚಿಸಿದ್ದು, ಈ ಡಾಕ್ಯುಮೆಂಟರಿ ಕುರಿತು ಸಂಸದ ಡೆರೆಕ್ ಓಬ್ರಿಯಾನ್ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರು ಮಾಡಿದ್ದ ಟ್ವೀಟ್‌ಗಳನ್ನು ಕೂಡ ಅಳಿಸಲಾಗಿದೆ.

ಕೇಂದ್ರ ಸಚಿವ ಕಿರಣ್ ರಿಜಿಜು ಭಾನುವಾರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು, "ಈ ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರಿಂದ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದರು.












Click it and Unblock the Notifications